Australian Open 2022: ನೊವಾಕ್ ಜೋಕೋವಿಚ್ ಸ್ಪರ್ಧೆ ಖಚಿತ..!
* ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಚ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ
* ಲಸಿಕೆ ಪತ್ರ ವಿನಾಯಿತಿ ಪಡೆದ ವಿಶ್ವದ ನಂ.1 ಟೆನಿಸಿಗ
* ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯು ಜನವರಿ 17ರಿಂದ ಆರಂಭ
ಮೆಲ್ಬರ್ನ್(ಜ.05): ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ನೊವಾಕ್ ಜೋಕೋವಿಚ್(Novak Djokovic), ಆಸ್ಟ್ರೇಲಿಯಾ ಓಪನ್ ಟೆನಿಸ್ (Australian Open) ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೇ ಎನ್ನುವ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಇದೇ ಜನವರಿ 17ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್ ಓಪನ್‌ನಲ್ಲಿ ಹಾಲಿ ಚಾಂಪಿಯನ್, ವಿಶ್ವ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಂಗಳವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಕೋವಿಡ್ ಲಸಿಕೆ (Covid 19 vaccination) ಪಡೆದಿರುವ ಪ್ರಮಾಣ ಪತ್ರ ಸಲ್ಲಿಕೆಯಿಂದ ವಿನಾಯಿತಿ ಸಿಕ್ಕಿದ್ದು, ಹೀಗಾಗಿ ಆಸ್ಪ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಳ್ಳುತ್ತೇನೆ’ ಎಂದಿದ್ದಾರೆ. ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದರೆ ಓಪನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೋಕೋವಿಚ್ ಷರತ್ತು ಹಾಕಿದ್ದರು.
ನಾನು ಈ ಬಿಡುವಿನಲ್ಲಿ ನನ್ನ ಪ್ರೀತಿ ಪಾತ್ರರೊಂದಿಗೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದಿದ್ದೇನೆ. ನನಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತಂತೆ ಲಸಿಕೀಕರಣದ ಮಾಹಿತಿ ಕುರಿತಂತೆ ವಿನಾಯಿತಿ ಸಿಕ್ಕಿದೆ. ಹೀಗಾಗಿ 2022ಕ್ಕೆ ಲೆಟ್ಸ್ ಗೋ ಎಂದು 9 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸರ್ಬಿಯಾದ ನೊವಾಕ್ ಜೋಕೋವಿಚ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದರ ಜತೆಗೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಾವು ಏರ್‌ಪೋರ್ಟ್‌ನಲ್ಲಿರುವ ಫೋಟೋವನ್ನು ಜೋಕೋ ಹಂಚಿಕೊಂಡಿದ್ದಾರೆ.
Australian Open 2022: ಸೆರೆನಾ ವಿಲಿಯಮ್ಸ್ ಔಟ್, ಅಚ್ಚರಿಯೆನ್ನುವಂತೆ ಜೋಕೋವಿಚ್ ಇನ್..!
ಇದೀಗ ನೊವಾಕ್ ಜೋಕೋವಿಚ್ ಅವರು ವರ್ಷದ ಮೊದಲ ಗ್ರ್ಯಾನ್‌ಸ್ಲಾಂನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಖಚಿತಪಡಿಸಿರುವುದರಿಂದ ಮತ್ತೊಮ್ಮೆ ತನ್ನ ಬದ್ದ ಎದುರಾಳಿ ರಾಫೆಲ್ ನಡಾಲ್ (Rafael Nadal) ಜತೆ 21ನೇ ಗ್ರ್ಯಾನ್‌ಸ್ಲಾಂಗಾಗಿ ಕಾದಾಟ ನಡೆಸುವುದು ಬಹುತೇಕ ಖಚಿತವಾಗುವ ಸಾಧ್ಯತೆಯಿದೆ. ಸ್ಪೇನ್‌ನ ರಾಫೆಲ್ ನಡಾಲ್, ಸ್ವಿಟ್ಜರ್‌ಲ್ಯಾಂಡ್‌ನ ರೋಜರ್ ಫೆಡರರ್ (Roger Federer) ಹಾಗೂ ನೊವಾಕ್ ಜೋಕೋವಿಚ್ ತಲಾ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಈ ಮೂವರು ಜಂಟಿ ಅಗ್ರಸ್ಥಾನ ಹೊಂದಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾಗಿರುವ ರಾಫೆಲ್ ನಡಾಲ್, ಈಗಾಗಲೇ ಮೆಲ್ಬೊರ್ನ್‌ನಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಗಾಗಿ ಸಿದ್ದತೆಗಳನ್ನು ಆರಂಭಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ, ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಹಾಗೂ ಕೋವಿಡ್ ಲಸಿಕೆ ಪಡೆದಿರುವ ಕುರಿತಂತೆ ಪ್ರಮಾಣ ಪತ್ರ ನೀಡಿದರೆ ಮಾತ್ರ ಅಂತಹವರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಆಸ್ಟ್ರೇಲಿಯನ್ ಓಪನ್ ಟೂರ್ನಿ ಆಯೋಜಕರು ಹಾಗೂ ಆಸ್ಟ್ರೇಲಿಯಾ ಸರ್ಕಾರ ಕಠಿಣ ನಿಯಮ ರೂಪಿಸಿತ್ತು.
COVID Vaccine ಪಡೆದಿದ್ದರಷ್ಟೇ ಆಸ್ಟ್ರೇಲಿಯನ್ ಓಪನ್‌ಗೆ ಬನ್ನಿ: ಆಸ್ಟ್ರೇಲಿಯಾ ಸರ್ಕಾರ
ಈ ನಿಯಮಗಳು ಆಸ್ಟ್ರೇಲಿಯಾದ ಜನತೆಯ ಸುರಕ್ಷತೆಗಾಗಿ ಮಾಡಲಾಗಿದೆ. ಯಾರು ಎಷ್ಟು ಗ್ರ್ಯಾನ್‌ಸ್ಲಾಂ ಜಯಿಸಿದ್ದಾರೆ ಎನ್ನುವುದು ಮುಖ್ಯವಲ್ಲ. ಈ ನಿಯಮಗಳು ಎಲ್ಲರಿಗೂ ಅನ್ವಯಿಸಲಿದೆ ಎಂದು ಆಸ್ಟ್ರೇಲಿಯಾದ ಆರೋಗ್ಯ ಸಚಿವರಾದ ಗ್ರೇಗ್ ಹಂಟ್ ತಿಳಿಸಿದ್ದರು.
ಆಸ್ಟ್ರೇಲಿಯನ್ ಓಪನ್ ಆಯೋಜಕರ ಈ ನಡೆಗೆ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್ ಸೆಡ್ಡು ಹೊಡೆದಿದ್ದರು. ಲಸಿಕೆ ಪಡೆಯುವುದು ವೈಯುಕ್ತಿಕ ಹಕ್ಕು. ಅದನ್ನು ಯಾರೊಬ್ಬರ ಮೇಲೂ ಹೇರಬಾರದು ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇನ್ನು ಜೋಕೋವಿಚ್ ತಂದೆ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದರು. ಒಂದು ವೇಳೆ ಕೋವಿಡ್ ಲಸಿಕೆ ಪ್ರಮಾಣಪತ್ರ ಕಡ್ಡಾಯಗೊಳಿಸಿದರೆ, ನೊವಾಕ್ ಜೋಕೋವಿಚ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದಿದ್ದರು.