* ಜರ್ಮನಿಯ ಖ್ಯಾತ ಟೆನಿಸಿಗ ಬೋರಿಸ್‌ ಬೆಕೆರ್‌ಗೆ ಎರಡೂವರೆ ವರ್ಷ ಜೈಲು ಶಿಕ್ಷೆ* ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ* 6 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ಬೋರಿಸ್‌ ಬೆಕೆರ್‌ಗೆ ಲಂಡನ್‌ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

ಲಂಡನ್(ಏ.30)‌: ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ, ಜರ್ಮನಿಯ ಖ್ಯಾತ ಟೆನಿಸಿಗ ಬೋರಿಸ್‌ ಬೆಕೆರ್‌ ಅವರು ಎರಡೂವರೆ ವರ್ಷ ಜೈಲು ಶಿಕ್ಷೆಗೆ (Boris Becker jailed) ಗುರಿಯಾಗಿದ್ದಾರೆ. ಇದರಲ್ಲಿ ಒಂದೂ ಕಾಲು ವರ್ಷ ಬೋರಿಸ್‌ ಜೈಲಿನಲ್ಲಿರಬೇಕಿದ್ದು, ಬಾಕಿ ಅವಧಿಯಲ್ಲಿ ಷರತ್ತುಬದ್ಧ ಪೆರೋಲ್‌ ಮೇಲೆ ಹೊರಗಿರಲಿದ್ದಾರೆ ಎಂದು ಲಂಡನ್‌ ನ್ಯಾಯಾಲಯ ಆದೇಶಿಸಿದೆ.

54 ವರ್ಷದ ಬೋರಿಸ್‌ ವಿರುದ್ಧ ಈ ತಿಂಗಳ ಆರಂಭದಲ್ಲಿ ಲಂಡನ್‌ ನ್ಯಾಯಾಲಯದಲ್ಲಿ (London Court) 4 ವಿವಿಧ ಪ್ರಕರಣಗಳು ದಾಖಲಾಗಿತ್ತು. 2017ರಲ್ಲಿ ಬ್ಯಾಂಕ್‌ ದಿವಾಳಿ ಎಂದು ಘೋಷಿಸಿದ ಬಳಿಕ ಬೋರಿಸ್‌ ಸುಮಾರು 356,000 ಪೌಂಡ್‌(ಸುಮಾರು 3.4 ಕೋಟಿ ರು.) ಹಣವನ್ನು ತಮ್ಮ ಮಾಜಿ ಪತ್ನಿಯರಾದ ಬಾರ್ಬರಾ ಹಾಗೂ ಶಾರ್ಲೆ ಲಿಲ್ಲಿಗೆ ವರ್ಗಾವಣೆ ಮಾಡಿದ್ದರು. ಅಲ್ಲದೇ ಜರ್ಮನಿಯಲ್ಲಿ 871000 ಅಮೆರಿಕನ್‌ ಡಾಲರ್‌(ಸುಮಾರು 6.64 ಕೋಟಿ ರು.) ಮೌಲ್ಯದ ಆಸ್ತಿಯನ್ನು ಮುಚ್ಚಿಟ್ಟಪ್ರಕರಣದಲ್ಲಿ ಅವರು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಬೋರಿಸ್‌ 1985ರಲ್ಲಿ ತಮ್ಮ 17ನೇ ವರ್ಷದಲ್ಲೇ ವಿಂಬಲ್ಡನ್‌ ಸಿಂಗಲ್ಸ್‌ ಗೆದ್ದು, ಈ ಸಾಧನೆ ಮಾಡಿದ ಮೊದಲ ಶ್ರೇಯಾಂಕ ರಹಿತ ಆಟಗಾರ ಎನ್ನುವ ದಾಖಲೆ ಬರೆದಿದ್ದರು. ಬಳಿಕ ಅವರು ವಿಶ್ವ ರಾರ‍ಯಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದರು. 2012ರಿಂದ ಬೆಕೆರ್‌ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌: ಸೆಮಿಫೈನಲ್‌ ಪ್ರವೇಶಿಸಿದ ಸಿಂಧು

ಮನಿಲಾ(ಏ.30‌): ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿ ಪದಕ ಖಚಿಪಡಿಸಿಕೊಂಡಿದ್ದಾರೆ. 2014ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಮಾಜಿ ವಿಶ್ವ ಚಾಂಪಿಯನ್‌ ಸಿಂಧು, ಶುಕ್ರವಾರ ಚೀನಾದ ಹಿ ಬಿಂಗ್‌ ಜಿಯೊ ವಿರುದ್ಧ 1 ಗಂಟೆ 16 ನಿಮಿಷಗಳ ಕಾಲ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 21-9, 13-21, 21-19 ಗೇಮ್‌ಗಳಲ್ಲಿ ರೋಚಕವಾಗಿ ಗೆದ್ದು ಅಂತಿಮ 4ರ ಘಟ್ಟಪ್ರವೇಶಿಸಿದರು.

Badminton Asia Championships: ಕ್ವಾರ್ಟರ್‌ ಫೈನಲ್‌ಗೆ ಪಿ ವಿ ಸಿಂಧು ಲಗ್ಗೆ

ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಅವರು ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ. ಇನ್ನು ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಜೋಡಿ ಮಲೇಷ್ಯಾದ ಆರೋನ್‌ ಚಿಯಾ, ಸೊ ವೊಯಿ ಯಿಕ್‌ ವಿರುದ್ಧ 21-12, 14-21, 16-21ರಲ್ಲಿ ಸೋತು ಹೊರಬಿತ್ತು.

ಸಂತೋಷ್‌ ಟ್ರೋಫಿ: ಬಂಗಾಳ ಫೈನಲ್‌ಗೆ

ಮಲಪ್ಪುರಂ: 75ನೇ ಆವೃತ್ತಿಯ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಬಂಗಾಳ ಪ್ರವೇಶಿಸಿದೆ. ಶುಕ್ರವಾರ ನಡೆದ 2ನೇ ಸೆಮಿಫೈನಲ್‌ನಲ್ಲಿ ಬಂಗಾಳ ತಂಡ ಮಣಿಪುರ ವಿರುದ್ಧ 3-0 ಗೋಲುಗಳ ಗೆಲುವು ಸಾಧಿಸಿತು. 2011ರ ಬಳಿಕ ಮೊದಲ ಬಾರಿಗೆ ಫೈನಲ್‌ಗೇರುವ ಮಣಿಪುರದ ಕನಸು ಈಡೇರಲಿಲ್ಲ. ಮೇ 2ರಂದು ನಡೆಯಲಿರುವ ಫೈನಲ್‌ನಲ್ಲಿ 32 ಬಾರಿ ಚಾಂಪಿಯನ್‌ ಬಂಗಾಳ, 6 ಬಾರಿ ಚಾಂಪಿಯನ್‌ ಕೇರಳ ವಿರುದ್ಧ ಟ್ರೋಫಿಗಾಗಿ ಸೆಣಸಲಿದೆ. ಬಂಗಾಳ 13 ಬಾರಿ ರನ್ನರ್‌-ಅಪ್‌ ಆಗಿದ್ದು, ಕೇರಳ 8 ಬಾರಿ ಪ್ರಶಸ್ತಿ ಸುತ್ತಿನಲ್ಲಿ ಸೋಲುಂಡಿದೆ.