ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಶ್ರೀಕಾಂತ್, ಸೌರಭ್ ಕ್ವಾರ್ಟರ್‌ಗೆ
ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್ ಹಾಗೂ ಸೌರಭ್ ವರ್ಮಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಖನೌ(ನ.29): ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಮಿಶ್ರಫಲ ಅನುಭವಿಸಿದೆ. 2ನೇ ದಿನವಾದ ಗುರುವಾರ ಪುರುಷರ ಸಿಂಗಲ್ಸ್‌ನಲ್ಲಿ ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್ ಹಾಗೂ ಸೌರಭ್ ವರ್ಮಾ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರೇ, ಲಕ್ಷ್ಯ ಸೇನ್, ಪಿ. ಕಶ್ಯಪ್, ಬಿ. ಸಾಯಿ ಪ್ರಣೀತ್, ಅಜಯ್ ಜಯರಾಮ್ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.
ಇಂದಿನಿಂದ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ ಆರಂಭ
2ನೇ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್, ಭಾರತದವರೇ ಆದ ಪಿ. ಕಶ್ಯಪ್ ವಿರುದ್ಧ 18-21, 22-20, 21-16 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ 2 ಬಾರಿ ಚಾಂಪಿಯನ್ ಆಗಿರುವ ಶ್ರೀಕಾಂತ್, ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯಾದ ಸನ್ ವಾನ್ ಹೊ ರನ್ನು ಎದುರಿಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಸೌರಭ್ ವರ್ಮಾ, ಭಾರತದವರೇ ಆದ ಅಲಪ್ ಮಿಶ್ರಾ ಎದುರು 21-11, 21-18 ಗೇಮ್‌ಗಳಲ್ಲಿ ಜಯ ಪಡೆದರು. ಎಂಟರಘಟ್ಟದಲ್ಲಿ ಸೌರಭ್, ಥಾಯ್ಲೆಂಡ್‌ನ ಕುನ್ಲಾವಟ್ ವಿಟಿಡ್ಸರನ್ ಎದುರು ಸೆಣಸಲಿದ್ದಾರೆ.
ಲಕ್ಷ್ಯಗೆ ಸೋಲು:
ಕಳೆದ 3 ತಿಂಗಳಲ್ಲಿ 4 ಟ್ರೋಫಿ ಗೆದ್ದಿದ್ದ ಲಕ್ಷ್ಯ ಸೇನ್, 2ನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಮೊದಲ ಸುತ್ತಲ್ಲಿ ವಾಕ್ ಓವರ್ ಪಡೆದಿದ್ದ ಲಕ್ಷ್ಯ, ಕೊರಿಯಾದ ಸನ್ ವಾನ್ ಹೊ ವಿರುದ್ಧ 14-21, 17-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಉಳಿದಂತೆ ಬಿ. ಸಾಯಿ ಪ್ರಣೀತ್, ಅಜಯ್ ಜಯರಾಮ್, ಎಚ್. ಎಸ್. ಪ್ರಣಯ್ 2ನೇ ಸುತ್ತಲ್ಲಿ ಸೋತು ಹೊರಬಿದ್ದರು.
ಮಹಿಳಾ ಸಿಂಗಲ್ಸ್‌ನಲ್ಲಿ ರಿತುಪರ್ಣಾ ದಾಸ್, ಭಾರತದವರೇ ಆದ ತನ್ವಿ ಲಾಡ್ ವಿರುದ್ಧ 21-16, 21-13 ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್‌ಗೇರಿದರು. ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಶ್ರುತಿ ಮುಂಡದಾ, ಬೆಲ್ಜಿಯಂನ ಲಿನ್ನೆ ಟಾನ್ ವಿರುದ್ಧ 21-18, 21-14 ಗೇಮ್‌ಗಳಲ್ಲಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಮತ್ತೊಬ್ಬ ಸ್ಪರ್ಧಿ ಅಶ್ಮಿತಾ ಚಲಿಹಾ 2ನೇ ಸುತ್ತಲ್ಲಿ ಸೋಲುಂಡು ಹೊರಬಿದ್ದರು.