ದೋಹಾ(ಮಾ.11): ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕ ರೋಜರ್‌ ಫೆಡರರ್‌ 13 ತಿಂಗಳ ಬಳಿಕ ಸ್ಪರ್ಧಾತಕ ಟೆನಿಸ್‌ಗೆ ವಾಪಸಾಗಿದ್ದು ಇಲ್ಲಿ ನಡೆಯುತ್ತಿರುವ ಕತಾರ್‌ ಓಪನ್‌ನಲ್ಲಿ ಸ್ಪರ್ಧಿಸಿ, ಭರ್ಜರಿಯಾಗಿಯೇ ಶುಭಾರಂಭ ಮಾಡಿದ್ದಾರೆ. 

ಮಾಜಿ ನಂ.1 ಶ್ರೇಯಾಂಕಿತ ಫೆಡರರ್ ಎರಡನೇ ಸುತ್ತಿನ ಪಂದ್ಯದಲ್ಲಿ ಡ್ಯಾನ್ ಎವಾನ್ಸ್ ಎದುರು 7-6(8), 3-6 ಹಾಗೂ 7-5 ಸೆಟ್‌ಗಳಿಂದ ಗೆಲುವು ದಾಖಲಿಸುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಪಂದ್ಯ ಗೆದ್ದ ಬಳಿಕ ಮಾತನಾಡಿದ ಫೆಡರರ್, ಟೆನಿಸ್‌ ಕೋರ್ಟ್‌ಗೆ ಮರಳಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಈ ಟೆನಿಸ್‌ ಕೋರ್ಟ್‌ನ ಮೇಲೆ ನಿಂತಿರುವುದಕ್ಕೆ ಸಂತಸವಾಗುತ್ತದೆ, ಅದು ಸೋಲೇ ಇರಲಿ ಅಥವಾ ಗೆಲುವೇ ಇರಲಿ. ಆದರೆ ಗೆಲುವು ಸಹಜವಾಗಿಯೇ ಮತ್ತಷ್ಟು ಖುಷಿ ಕೊಡುತ್ತದೆ ಎಂದು ಫೆಡರರ್ ಹೇಳಿದ್ದಾರೆ.

ಟೆನಿಸ್‌ ರ‍್ಯಾಂಕಿಂಗ್‌‌: 2ನೇ ಸ್ಥಾನಕ್ಕೇರಿದ ನವೊಮಿ ಒಸಾಕ

ಕಳೆದ ವರ್ಷ ಆಸ್ಪ್ರೇಲಿಯನ್‌ ಓಪನ್‌ ನಂತರ 2 ಬಾರಿ ಬಲ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್‌, ಗ್ರ್ಯಾನ್‌ ಸ್ಲಾಂ ಸೇರಿ ಪ್ರಮುಖ ಟೂರ್ನಿಗಳಿಗೆ ಗೈರಾಗಿದ್ದರು. ಸ್ಪೇನ್‌ನ ರಾಫೆಲ್‌ ನಡಾಲ್‌ 20 ಗ್ರ್ಯಾನ್‌ ಸ್ಲಾಂಗಳನ್ನು ಗೆದ್ದು, ಫೆಡರರ್‌ರ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಗೆಲುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಹೀಗಾಗಿ 39 ವರ್ಷದ ಫೆಡರರ್‌, ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ನಲ್ಲಿ ಕಣಕ್ಕಿಳಿದು ಪ್ರಶಸ್ತಿ ಜಯಿಸುವ ಮೂಲಕ ಮತ್ತೆ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ.