ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ನವೊಮಿ ಒಸಾಕ ನೂತನವಾಗಿ ಬಿಡುಗಡೆಯಾದ ಟೆನಿಸ್ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಲಂಡನ್(ಫೆ.24): ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಟೆನಿಸ್ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡ ಹೊರತಾಗಿಯೂ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.
ಜೆನಿಫರ್ ಬ್ರಾಡಿ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ನವೊಮಿ ಒಸಾಕ 4ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಒಸಾಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಫೈನಲ್‌ನಲ್ಲಿ ಒಸಾಕ ವಿರುದ್ಧ ಸೋತ ಅಮೆರಿಕದ ಜೆನಿಫರ್ ಬ್ರಾಡಿ, 11 ಸ್ಥಾನಗಳ ಜಿಗಿತ ಕಂಡು 13ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ. ಸೆರೆನಾ ವಿಲಿಯಮ್ಸ್ 4 ಸ್ಥಾನಗಳ ಏರಿಕೆ ಕಂಡಿದ್ದು 7ನೇ ಸ್ಥಾನ ಪಡೆದಿದ್ದಾರೆ. ಸುಮಾರು 10 ತಿಂಗಳ ಬಳಿಕ ಸೆರೆನಾ ಅಗ್ರ 10ರ ಪಟ್ಟಿಗೆ ಮರಳಿದ್ದಾರೆ.
ಆಸ್ಟ್ರೇಲಿಯಾ ಓಪನ್: ಒಸಾಕಗೆ ಒಲಿದ 4ನೇ ಗ್ರ್ಯಾನ್ ಸ್ಲಾಂ
ಇದೇ ವೇಳೆ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ನೋವಾಕ್ ಜೋಕೋವಿಚ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ರನ್ನರ್-ಅಪ್ ಪ್ರಶಸ್ತಿ ಪಡೆದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ತಮ್ಮ ವೃತ್ತಿಬದುಕಿನ ಶ್ರೇಷ್ಠ 3ನೇ ಸ್ಥಾನ ತಲುಪಿದ್ದಾರೆ. ಇನ್ನು ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ 2ನೇ ಸ್ಥಾನದಲ್ಲೇ ಭದ್ರವಾಗಿದ್ದಾರೆ.
