19.5 ತಾಸಲ್ಲಿ 62 ಕಿಮೀ ಸಮುದ್ರ ಈಜಿದ ಬೆಂಗಳೂರಿನ ಮಹಿಳೆ..!
ಅಲ್ಟ್ರಾ-ಮ್ಯಾರಥಾನ್ ಈಜುಪಟು ಸುಚೇತಾ ದೇಬ್ ಬರ್ಮನ್ ಈಜಿನಲ್ಲಿ ಹೊಸ ದಾಖಲೆ
ತ್ರಿಪುರಾದ ಅಗರ್ತಾಲಾದಲ್ಲಿ ಜನಿಸಿ ಬೆಂಗಳೂರಿನ ನಿವಾಸಿಯಾಗಿರುವ ಸುಚೇತಾ
ಈಜುವಾಗ ಭಾರತ, ಲಂಕಾ ನೌಕಾ ಪಡೆಗಳಿಂದ ಭದ್ರತೆ
- ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಮಾ.22): ಭಾರತ ಹಾಗೂ ಶ್ರೀಲಂಕಾ ನಡುವೆ ಇರುವ ಪಾಕ್ ಜಲಸಂಧಿಯಲ್ಲಿ 62 ಕಿಲೋ ಮೀಟರ್‌ಗಳನ್ನು 19 ಗಂಟೆ, 31 ನಿಮಿಷಗಳಲ್ಲಿ ಈಜಿ ಬೆಂಗಳೂರು ನಿವಾಸಿ ಸುಚೇತಾ ದೆಬ್ ಬರ್ಮನ್ ಹೊಸ ದಾಖಲೆ ಬರೆದಿದ್ದಾರೆ. ಈ ಸಾಹಸ ಮೆರೆದ ಭಾರತದ ಮೊದಲ ಮಹಿಳೆ ಎನ್ನುವ ಹಿರಿಮೆಗೆ 39 ವರ್ಷದ ಸುಚೇತಾ ಪಾತ್ರರಾಗಿದ್ದಾರೆ.
ಅಲ್ಟ್ರಾ-ಮ್ಯಾರಥಾನ್ ಈಜುಪಟು ಸುಚೇತಾ, ಮಾ.15ರ ಸಂಜೆ 4.45ಕ್ಕೆ ತಮಿಳುನಾಡಿನ ಧನುಷ್ಕೋಟಿಯ ಓಲ್ಡ್ ಹಾರ್ಬರ್‌ನಿಂದ ಈಜು ಆರಂಭಿಸಿ ಶ್ರೀಲಂಕಾದ ತಲೈಮನ್ನಾರ್ ಎಂಬ ಸ್ಥಳವನ್ನು ಮಾ.16ರ ಮುಂಜಾನೆ 5 ಗಂಟೆ 5 ನಿಮಿಷಕ್ಕೆ ತಲುಪಿದರು. 25 ನಿಮಿಷಗಳ ವಿಶ್ರಾಂತಿ ಬಳಿಕ ಮುಂಜಾನೆ 5.30ಕ್ಕೆ ಹೊರಟು, ಮತ್ತೆ ಈಜಿಕೊಂಡು ಧನುಷ್ಕೋಟಿ ಬಳಿ ಬಂಗಾಳ ಕೊಲ್ಲಿ ಹಾಗೂ ಹಿಂದು ಮಹಾಸಾಗರ ಸೇರುವ ಅರಿಚಲ್ ಮುನ್ನೈ ಎಂಬ ಸ್ಥಳವನ್ನು ಮಾ.16ರ ಮಧ್ಯಾಹ್ನ 12.20ಕ್ಕೆ ತಲುಪಿ ತಮ್ಮ ‘ಸಾಹಸಯಾನ’ವನ್ನು ಪೂರ್ತಿಗೊಳಿಸಿದರು.
2022ರಲ್ಲೇ ಈ ಸಾಹಸಕ್ಕೆ ಕೈಹಾಕಿದ್ದ ಸುಚೇತಾ, 34 ಕಿ.ಮೀ. ಈಜಿದ ಬಳಿಕ ಭುಜದ ಗಾಯಕ್ಕೆ ತುತ್ತಾಗಿ ಅರ್ಧಕ್ಕೆ ನಿಲ್ಲಿಸಿದ್ದರು. ಆ ಬಳಿಕ ಒಂದು ವರ್ಷ ಅಭ್ಯಾಸ ನಡೆಸಿ ಈ ಬಾರಿ ಪಾಕ್ ಜಲಸಂಧಿ ಸಾಹಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರಿ ಸುಚೇತಾ ಬರ್ಮನ್?
ತ್ರಿಪುರಾದ ಅಗರ್ತಾಲಾದಲ್ಲಿ ಹುಟ್ಟಿದ ಸುಚೇತಾ ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದಾರೆ. 4ನೇ ವಯಸ್ಸಿನಲ್ಲೇ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಈಜು ಅಭ್ಯಾಸ ಆರಂಭಿಸಿದ ಅವರು, ದೇಶದ ಅಗ್ರ ಅಲ್ಟಾ್ರ-ಮ್ಯಾರಥಾನ್ ಈಜುಪಟುಗಳ ಪೈಕಿ ಒಬ್ಬರೆನಿಸಿದ್ದಾರೆ. ಎನ್‌ಐಎಸ್ ಮಾನ್ಯತೆ ಪಡೆದಿರುವ ಸುಚೇತಾ, ಓಪನ್ ವಾಟರ್ ಈಜು ಉತ್ಸಾಹಿಗಳು ಹಾಗೂ ಟ್ರಯಥ್ಲಾನ್ ಅಥ್ಲೀಟ್‌ಗಳಿಗೆ ವೃತ್ತಿಪರ ತರಬೇತಿ ನೀಡುತ್ತಾರೆ. ಜಾಗತಿಕ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಸುಚೇತಾ, ಭಾರತದ ಕರಾವಳಿಯುದ್ದಕ್ಕೂ ಅಂದರೆ ಗುಜರಾತ್‌ನಿಂದ ಬಂಗಾಳದವರೆಗೂ ಈಜುವ ಗುರಿ ಹೊಂದಿದ್ದಾರೆ.
ಕೇವಲ 5 ನಿಮಿಷದಲ್ಲಿ ಒಂದು ಮೈಲಿ ದೂರ ಓಡಿದ 9 ತಿಂಗಳ ತುಂಬು ಗರ್ಭಿಣಿ..! ಸಾಧಕಿಗೊಂದು ಸಲಾಂ
ಭಾರತ, ಲಂಕಾ ನೌಕಾ ಪಡೆಗಳಿಂದ ಭದ್ರತೆ
ಭಾರತೀಯ ಕಡಲಿನಲ್ಲಿ ಈಜುವಾಗ ಭಾರತೀಯ ನೌಕಾ ಪಡೆ, ಭಾರತೀಯ ಕೋಸ್ಟಲ್ ಗಾರ್ಡ್ ಸುಚೇತಾ ಅವರಿಗೆ ಭದ್ರತೆ ಒದಗಿಸಿದರೆ, ಲಂಕಾ ಕಡಲಿನಲ್ಲಿ ಶ್ರೀಲಂಕಾ ನೌಕಾ ಪಡೆ ಭದ್ರತೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನ ಒದಗಿಸಿದವು. ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಈಜಿನ ಸಮಯವನ್ನು ದಾಖಲಿಸಿಕೊಂಡರು.
ಬಾಟಲಿಯಲ್ಲಿ ಆಹಾರ ತುಂಬಿ ಎಸೆಯುತ್ತಿದ್ದರು!
ಸುಚೇತಾ ಕಡಿಲನೊಳಗೆಯೇ ಆಹಾರ ಸೇವಿಸುತ್ತಿದ್ದರು. ದೋಣಿಗಳಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ತಂಡ ಬಾಟಲಿಯೊಳಗೆ ದ್ರವರೂಪದ ಆಹಾರವನ್ನು ತುಂಬಿಸಿ ಹಗ್ಗ ಕಟ್ಟಿನೀರಿಗೆ ಎಸೆಯುತ್ತಿದ್ದರು. ಸಮಯ ವ್ಯರ್ಥವಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.
ಮುಂಬೈನಲ್ಲಿ ರಿಹರ್ಸಲ್!
ಸುಚೇತಾ ಪಾಕ್ ಜಲಸಂಧಿಯಲ್ಲಿ ಈಜುವ ಮೊದಲು ಮಾನಸಿಕ ಹಾಗೂ ದೈಹಿಕ ಫಿಟ್ನೆಸ್ ಪರೀಕ್ಷೆ ನಡೆಸಲು ಈ ವರ್ಷ ಜನವರಿಯಲ್ಲಿ ಮುಂಬೈನ ವೊರ್ಲಿ ಕಡಲತೀರದಿಂದ 40 ಕಿ.ಮೀ. ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ರಾತ್ರಿ ಈಜಿಕೊಂಡು ತೆರಳಿದ್ದರು. 40 ಕಿ.ಮೀ. ದೂರವನ್ನು 7 ಗಂಟೆ 26 ನಿಮಿಷಗಳಲ್ಲಿ ಪೂರ್ತಿಗೊಳಿಸಿದ್ದರು.