* ಶ್ರೀ ಕಂಠೀರವ ಸ್ಟೇಡಿಯಂ ಪುನಶ್ಚೇತನ ಮಾಡಲು ಮುಂದಾದ ರಾಜ್ಯ ಸರ್ಕಾರ* ಗುಜರಾತ್ ರಾಜ್ಯದಲ್ಲಿರುವಂತೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸಿದ್ಧಪಡಿಸಲು ಉದ್ದೇಶಿಸಲಾಗಿದೆ* ಪ್ಯಾರೀಸ್‌ನಲ್ಲಿ ನಡೆಯುವ 2024ರ ಒಲಂಪಿಕ್ಸ್‌ಗೆ ಕರ್ನಾಟಕದಿಂದ ಕನಿಷ್ಠ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ

ಬೆಂಗಳೂರು(ಆ.14): ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಗುಜರಾತ್‌ನಲ್ಲಿರುವ ಕ್ರೀಡಾಂಗಣ ವೀಕ್ಷಣೆಗಾಗಿ ಶೀಘ್ರವೇ ನಿಯೋಗವೊಂದನ್ನು ಕಳುಹಿಸಿಕೊಡಲಾಗುವುದು ಎಂದು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿನ ಕ್ರೀಡಾಂಗಣವು ಉತ್ತಮವಾಗಿದೆ. ಹೀಗಾಗಿ ಅದೇ ಮಾದರಿಯಲ್ಲಿ ಕಂಠೀರವ ಕ್ರೀಡಾಂಗಣ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ರಾಜ್ಯದಿಂದ ನಿಯೋಗವೊಂದನ್ನು ಶೀಘ್ರದಲ್ಲಿಯೇ ಗುಜರಾತ್‌ಗೆ ಕಳುಹಿಸಿಕೊಡಲಾಗುವುದು. ಕಂಠೀರವ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಲಾಗುವುದು. ಅಲ್ಲದೇ, ಇನ್ನು ಮುಂದೆ ಬೇರೆ ಕ್ರೀಡೆಗಳಿಗೆ ಕಂಠೀರವ ಕ್ರೀಡಾಂಗಣವನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ಹೇಳಿದರು.

ಕಂಠೀರವ ಕ್ರೀಡಾಂಗಣದಲ್ಲಿ 4.50 ಕೋಟಿ ರು., ಚಿಕ್ಕಮಗಳೂರು ಮತ್ತು ಹಾಸನದಲ್ಲಿ ತಲಾ 7.50 ಕೋಟಿ ರುಪಾಯಿ ವೆಚ್ಚದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 5 ಕೋಟಿ ರು., ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು 10 ಕೋಟಿ ರು. ಮತ್ತು ಕೆ.ಆರ್‌.ಪೇಟೆ ತಾಲೂಕು ಕ್ರೀಡಾಂಗಣವನ್ನು 14.50 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಅಥ್ಲೆಟಿಕ್‌ ಮತ್ತು ಈಜು ವಿಭಾಗದಲ್ಲಿ ಉಜ್ವಲ ಭವಿಷ್ಯ ಇದೆ. ಹೀಗಾಗಿ ಆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುವುದು. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇರುವುದು ನಿಜ. ಖಾಲಿ ಹುದ್ದೆ ಶೀಘ್ರವೇ ಭರ್ತಿ ಮಾಡುವಂತೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು. ಪ್ರತಿ ತಾಲೂಕಿನಲ್ಲಿಯೂ ಕ್ರೀಡಾಂಗಣ ಸ್ಥಾಪನೆಗೆ ಒತ್ತು ನೀಡಲಾಗಿದೆ. ಪಿಪಿಇ ಮಾದರಿಯಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಒಲಿಂಪಿಕ್ಸ್‌ಗೆ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ:

ಪ್ಯಾರೀಸ್‌ನಲ್ಲಿ ನಡೆಯುವ 2024ರ ಒಲಂಪಿಕ್ಸ್‌ಗೆ ಕರ್ನಾಟಕದಿಂದ ಕನಿಷ್ಠ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ 35 ಕ್ರೀಡಾಪಟುಗಳನ್ನು ಗುರುತಿಸಲಾಗಿದೆ. ಈ ಕ್ರೀಡಾಪುಟಗಳಿಗೆ ತಲಾ ಐದು ಲಕ್ಷ ರು. ಪ್ರೋತ್ಸಾಹ ಧನ ನೀಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಸಹ ಅವಶ್ಯ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಪೊಲೀಸ್‌ ಇಲಾಖೆಯಲ್ಲಿ ಈಗಾಗಲೇ ಶೇ.2ರಷ್ಟುಮೀಸಲಾತಿಯನ್ನು ಕ್ರೀಡಾಪಟುಗಳಿಗೆ ಮೀಸಲಿದ್ದು, ಇತರೆ ಇಲಾಖೆಗಳಿಗೂ ವಿಸ್ತರಿಸುವ ಕಾರ್ಯ ಚಾಲನೆಯಲ್ಲಿದೆ. ಇನ್ನು, ಕ್ರೀಡಾಪಟುಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಲು ಕಂಠೀರವ ಸ್ಟೇಡಿಯಂನಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಿಂದ ಎರಡು ಕೋಟಿ ರು. ವೆಚ್ಚದಲ್ಲಿ ಮಂಡ್ಯದಲ್ಲಿಯೂ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಆಗಸ್ಟ್ 15ರಂದು ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಸೆಲ್ಯೂಟ್‌ ಮಾಡ್ತೇನೆ : ರೋಹಿತ್‌ ಶರ್ಮಾ

ರಾಜ್ಯದಲ್ಲಿ 34 ಕ್ರೀಡಾ ವಸತಿ ನಿಯಲಗಳಿವೆ. 2300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 150 ತರಬೇತುದಾರರಿಂದ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕ್ರೀಡಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶುಲ್ಕ ವಿನಾಯಿತಿಯನ್ನು ಸಹ ಇಲಾಖೆಯಿಂದ ನೀಡಲಾಗುತ್ತಿದೆ. ಕ್ರೀಡಾ ವಸತಿ ನಿಲಯಗಳ ಆಧುನೀಕರಣಕ್ಕೆ ಪ್ರಸಕ್ತ ಸಾಲಿನಲ್ಲಿ 5.75 ಕೋಟಿ ರು. ವೆಚ್ಚ ಭರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯಗಳನ್ನು ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರಗಿ, ಕೋಲಾರ, ಹಾಸನ ಮತ್ತು ಧಾರವಾಡದಲ್ಲಿ ತಲಾ 1.50 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ಐದು ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಖೇಲೋ ಇಂಡಿಯಾ ಉದ್ಘಾಟನೆಗೆ ಪ್ರಧಾನಿ ನಿರೀಕ್ಷೆ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ 2021 ಬೆಂಗಳೂರಲ್ಲಿ ಮಾ.5ರಿಂದ ಆರಂಭಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರಮೋದಿ ಅವರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿಗಳು ಬರುವ ನಿರೀಕ್ಷೆ ಇದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

12 ದಿನಗಳ ಕಾಲ ಗೇಮ್ಸ್‌ ನಡೆಯಲಿದೆ. ದೇಶದ ಎಲ್ಲೆಡೆಯಿಂದ 20 ಕ್ರೀಡೆಗಳ ಏಳು ಸಾವಿರ ಕ್ರೀಡಾಪಟುಗಳ ಭಾಗವಹಿಸುವ ನೀರೀಕ್ಷೆ ಇದೆ. ಕ್ರೀಡಾಕೂಟದ ಆಯೋಜನೆಯು ಜೈನ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯಲಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅತಿ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳನ್ನು ಮಂಜೂರು ಮಾಡಿದೆ. ಜಿಲ್ಲೆಗೆ ಒಂದರಂತೆ ಒಟ್ಟು 31 ಖೇಲೋ ಇಂಡಿಯಾ ಕೇಂದ್ರಗಳನ್ನು ನೀಡಿದ್ದು, 2.17 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗೆ ಒಂದು ಕ್ರೀಡೆ ಎಂಬ ಕಲ್ಪನೆಯ ಈ ಕೇಂದ್ರಗಳಿಂದ ಅಗತ್ಯ ತರಬೇತಿ ನೀಡಲಾಗುವುದು ಎಂದರು.