ಕರ್ನಾಟಕ ರಾಜ್ಯದಲ್ಲಿ 31 ಖೇಲೋ ಇಂಡಿಯಾ ಕೇಂದ್ರ ಆರಂಭ: ಕಿರಣ್ ರಿಜಿಜು
* 7 ರಾಜ್ಯದಲ್ಲಿ 143 ಖೇಲೋ ಇಂಡಿಯಾ ಕ್ರೀಡಾ ಕೇಂದ್ರಗಳನ್ನು ಆರಂಭಿಸಲು ಮುಂದಾದ ಕೇಂದ್ರ ಸರ್ಕಾರ
* ಪ್ರತಿ ಜಿಲ್ಲೆಯಲ್ಲಿ ಒಂದೊಂದು ಖೇಲೋ ಇಂಡಿಯಾ ಕ್ರೀಡಾ ಕೇಂದ್ರ ತೆರೆಯಲು ಕ್ರೀಡಾ ಸಚಿವಾಲಯ ತೀರ್ಮಾನ
* ಕರ್ನಾಟಕದಲ್ಲಿ 31 ಕ್ರೀಡಾ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದ ಕ್ರೀಡಾ ಸಚಿವ ಕಿರಣ್ ರಿಜಿಜು
ನವದೆಹಲಿ(ಮೇ.26): ಖೇಲೋ ಇಂಡಿಯಾ ಯೋಜನೆಯಡಿ 7 ರಾಜ್ಯದಲ್ಲಿ 143 ಕ್ರೀಡಾ ಕೇಂದ್ರಗಳನ್ನು ಆರಂಭಿಸುವುದಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಂಗಳವಾರ ತಿಳಿಸಿದ್ದಾರೆ. ಸುಮಾರು 14.30 ಕೋಟಿ ರುಪಾಯಿ ವೆಚ್ಚದಡಿ ಈ ಕೇಂದ್ರಗಳನ್ನು ತೆರೆಯಲು ಭಾರತ ಸರ್ಕಾರ ಮುಂದಾಗಿದೆ
ಕೇಂದ್ರ ಸರ್ಕಾರವು ಮಹಾರಾಷ್ಟ್ರ, ಮಿಜೋರಾಂ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಮಣಿಪುರದಲ್ಲಿ ಖೇಲೋ ಇಂಡಿಯಾ ಕ್ರೀಡಾ ಕೇಂದ್ರಗಳನ್ನು ತೆರೆಯುವುದಾಗಿ ರಿಜಿಜು ತಿಳಿಸಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ 3.10 ಕೋಟಿ ರು. ವೆಚ್ಚದಲ್ಲಿ 31 ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ. ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಹುಡುಕಿ ಅವರಿಗೆ ಸೂಕ್ತ ತರಬೇತಿ ನೀಡಿ, ಮುಂದಿನ ಹಂತಕ್ಕೆ ಬಡ್ತಿ ಸಿಗುವಂತೆ ಮಾಡುವುದೇ ಈ ಯೋಜನೆಯ ಉದ್ದೇಶ ಎಂದು ರಿಜಿಜು ತಿಳಿಸಿದ್ದಾರೆ. ಈ ಕ್ರೀಡಾ ಕೇಂದ್ರಗಳಿಗೆ ಕೋಚ್‌ಗಳನ್ನು ನೇಮಿಸುವ ಹೊಣೆಯನ್ನು ಕೇಂದ್ರವು, ರಾಜ್ಯ ಸರ್ಕಾರಗಳಿಗೆ ನೀಡಿದೆ.
2025-26ರ ವರೆಗೂ ಖೇಲೋ ಇಂಡಿಯಾ ವಿಸ್ತರಣೆ; ಕಿರಣ್ ರಿಜಿಜು
ಕಳೆದ ಜೂನ್ 2020ರಲ್ಲಿ ಮುಂಬರುವ ನಾಲ್ಕು ವರ್ಷಗಳ ಅವಧಿಯಲ್ಲಿ 1,000 ಹೊಸ ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸುವುದಾಗಿ ಕ್ರೀಡಾ ಸಚಿವಾಲಯವು ಘೋಷಿಸಿತ್ತು. ಈ ಪೈಕಿ ದೇಶದ ಪ್ರತಿಜಿಲ್ಲೆಯಲ್ಲಿ ಕನಿಷ್ಠ ಒಂದು ಖೇಲೋ ಇಂಡಿಯಾ ಕ್ರೀಡಾ ಕೇಂದ್ರ ತೆರೆಯುವುದು ಭಾರತ ಸರ್ಕಾರದ ಉದ್ದೇಶವಾಗಿದೆ. ದೇಶದ ತಳಮಟ್ಟದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಬೇರು ಹಂತದಲ್ಲೇ ಅವರಿಗೆ ಕ್ರೀಡಾ ವಾತಾವರಣವನ್ನು ಕಲ್ಪಿಸುವ ಮೂಲಕ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರವು ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಿದೆ.
2028ರ ಒಲಿಂಪಿಕ್ಸ್ ವೇಳೆಗೆ ಪದಕ ಪಟ್ಟಿಯಲ್ಲಿ ಭಾರತ ದೇಶವು ಟಾಪ್ 10 ಒಳಗೆ ಸ್ಥಾನ ಪಡೆಯುವಂತೆ ನಮ್ಮ ಮುಖ್ಯ ಗುರಿಯಾಗಿದೆ. ಈ ಗುರಿ ಸಾಕಾರವಾಗಬೇಕಿದ್ದರೆ, ದೇಶದ ಕ್ರೀಡಾ ಪ್ರತಿಭೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಪ್ರೋತ್ಸಾಹಿಸಬೇಕಾಗುತ್ತದೆ. ಜಿಲ್ಲಾ ಮಟ್ಟದಲ್ಲೇ ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆದು ಉತ್ತಮ ಸೌಕರ್ಯ ಹಾಗೂ ಅನುಭವಿ ಕೋಚ್‌ಗಳನ್ನು ಒದಗಿಸುವುದು ನಮ್ಮ ಉದ್ಧೇಶವಾಗಿದೆ. ಸರಿಯಾದ ಪ್ರತಿಭಾನ್ವಿತ ಮಕ್ಕಳನ್ನು, ಸರಿಯಾದ ಸಮಯದಲ್ಲಿ ಸರಿಯಾದ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಈ ಖೇಲೋ ಇಂಡಿಯಾ ಕೇಂದ್ರಗಳು ಸಹಕಾರಿಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.