ಮೆಲ್ಬರ್ನ್(ಜ.23)‌: ಮುಂದಿನ ತಿಂಗಳು ಅಂದರೆ ಫೆಬ್ರವರಿ 8ರಿಂದ ಆರಂಭವಾಗಲಿರುವ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಸ್ಪೇನ್‌ ಆಟಗಾರ್ತಿ ಪೌಲಾ ಬಡೋಸಾಗೆ ಕೊರೋನಾ ಸೋಂಕು ತಗುಲಿದೆ. 

ಪೌಲಾ ಅವರನ್ನು ಹೋಟೆಲ್‌ ಕೊಠಡಿಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಇವರೊಂದಿಗೆ ವಿಮಾನದಲ್ಲಿ ಆಗಮಿಸಿದ ಇತರ ಟೆನಿಸಿಗರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಸ್ಪ್ರೇಲಿಯನ್‌ ಓಪನ್‌ಗೆ ಆಗಮಿಸಿರುವ ಟೆನಿಸಿಗರು, ಸಿಬ್ಬಂದಿ ಪೈಕಿ ಈಗಾಗಲೇ 10ಕ್ಕೂ ಹೆಚ್ಚು ಜನಕ್ಕೆ ಸೋಂಕು ತಗುಲಿದ್ದು, ಆತಂಕ ಹೆಚ್ಚಿಸಿದೆ.

23 ವರ್ಷದ ಸ್ಪೇನ್‌ ಆಟಗಾರ್ತಿ ಕಳೆದ ವರ್ಷ ನಡೆದ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ 4ನೇ ಸುತ್ತು ಪ್ರವೇಶಿಸಿ ಗಮನ ಸೆಳೆದಿದ್ದರು. 70ನೇ ಶ್ರೇಯಾಂಕಿತ ಆಟಗಾರ್ತಿ ಪೌಲಾ ಬಡೋಸಾ ಟ್ವೀಟ್‌ ಮೂಲಕ ತಮಗೆ ಕೊರೋನಾ ಸೋಂಕು ತಗುಲಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. 

ಆಸ್ಪ್ರೇಲಿಯನ್‌ ಓಪನ್‌: ಇಬ್ಬರು ಆಟಗಾರರಿಗೆ ಕೊರೋನಾ

ನನ್ನ ಕಡೆಯಿಂದ ಒಂದು ಕೆಟ್ಟ ಸುದ್ದಿ, ಇಂದು ಕೊರೋನಾ ಪಾಸಿಟಿವ್ ಆಗಿರುವ ರಿಪೋರ್ಟ್‌ ನನಗೆ ತಲುಪಿದೆ. ನನ್ನ ಆರೋಗ್ಯ ಸರಿಯಿಲ್ಲ ಹಾಗೆಯೇ ಕೊರೋನಾ ಲಕ್ಷಣಗಳಿರುವುದು ನನ್ನ ಗಮನಕ್ಕೆ ಬಂದಿದೆ. ವೈದ್ಯರ ಸಹಾಯದಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಕೊರೋನಾದಿಂದ ಗುಣಮುಖವಾಗಲು ಎದುರು ನೋಡುತ್ತಿದ್ದೇನೆ. ನಾನೀಗ ಐಸೋಲೇಷನ್‌ಗೆ ಒಳಗಾಗಿದ್ದು, ವೈದ್ಯರ ನಿಗಾದಲ್ಲಿದ್ದೇನೆ ಎಂದು ಪೌಲಾ ಬಡೋಸಾ ಟ್ವೀಟ್‌ ಮಾಡಿದ್ದಾರೆ.

 ಮೆಲ್ಬರ್ನ್‌ಗೆ ವಿಮಾನದಿಂದ ಬಂದಿಳಿಯುತ್ತಿದ್ದಂತೆ ಪೌಲಾ ಬಡೋಸಾ ಸೇರಿದಂತೆ 72 ಟೆನಿಸ್ ಆಟಗಾರರಿಗೆ ಹೋಟೆಲ್‌ನಲ್ಲಿದ್ದುಕೊಂಡು, ಹೊರಬರದಂತೆ ಕಡ್ಡಾಯವಾಗಿ ಎರಡು ವಾರಗಳ ಕಾಲ ಲಾಕ್‌ಡೌನ್ ಪಾಲಿಸುವಂತೆ ಸ್ಥಳೀಯಾಡಳಿತ ಸೂಚಿಸಿತ್ತು. ಕಾರಣ ಟೆನಿಸ್‌ ಆಟಗಾರರ ಜತೆ ವಿಮಾನದಲ್ಲಿದ್ದ ಕೆಲವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.