ಯುಎಸ್ ಓಪನ್ ಟೆನಿಸ್: ಕಾರ್ಲೋಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಮೈಲಿಗಲ್ಲು
* ಯುಎಸ್ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಹೊಸ ದಾಖಲೆ ಬರೆದ ಕಾರ್ಲೋಸ್ ಅಲ್ಕರಾಜ್
* ಕಾರ್ಲೋಸ್ ಅಲ್ಕರಾಜ್ 18 ವರ್ಷದ ಸ್ಪೇನ್‌ನ ಯುವ ಟೆನಿಸಿಗ
* ಜರ್ಮನಿಯ ಪೀಟರ್ ಗೊಜೊವ್‌ಜಿಕ್ ವಿರುದ್ಧ 5-7, 6-1, 5-7, 6-2, 6-0 ಸೆಟ್‌ಗಳ ಅಂತರದಲ್ಲಿ ಜಯ
ನ್ಯೂಯಾರ್ಕ್(ಸೆ.07): ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ 18ರ ಹರೆಯದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎಂಬ ಮೈಲಿಗಲ್ಲು ಸ್ಥಾಪಿಸಿದರು.
ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಜರ್ಮನಿಯ ಪೀಟರ್ ಗೊಜೊವ್‌ಜಿಕ್ ವಿರುದ್ಧ 5-7, 6-1, 5-7, 6-2, 6-0 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಾರ್ಲೋಸ್ ಹೊಸ ಇತಿಹಾಸ ಬರೆದರು.
1998ರಲ್ಲಿ ಅಮೆರಿಕದ ಆ್ಯಂಡ್ರೆ ಅಗಾಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ, ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದದರು. ಅಗಾಸಿಗಿಂತ 8 ದಿನ ಕಿರಿಯ ಪ್ರಾಯದಲ್ಲಿ ಕಾರ್ಲೋಸ್ ಈ ಸಾಧನೆ ಮಾಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಕಾರ್ಲೋಸ್, ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್ ಸವಾಲು ಎದುರಿಸಲಿದ್ದಾರೆ.
ಯುಎಸ್ ಓಪನ್: ಹಾಲಿ ಚಾಂಪಿಯನ್ ನವೊಮಿ ಒಸಾಕಗೆ ಆಘಾತಕಾರಿ ಸೋಲು..!
ತಿಯಾಫಿಗೆ ತಿರುಗೇಟು ಕೊಟ್ಟ ಫೆಲಿಕ್ಸ್:
ಮತ್ತೊಂದು ಪುರುಷರ ಸಿಂಗಲ್ಸ್‌ನಲ್ಲಿ ಕೆನಾಡದ ಫೆಲಿಕ್ಸ್ ಆಗರ್ ಅಲಿಯಾಸಿಮ್, ಅಮೆರಿಕದ ಫ್ರಾನ್ಸಿನ್ ತಿಯಾಫಿ ವಿರುದ್ಧ 4-6, 6-2, 7-6(6), 6-4ರಲ್ಲಿ ಜಯ ಸಾಧಿಸಿ, ಅಂತಿಮ 8 ಘಟ್ಟಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ 6-3, 6-4, 6-3 ಅಂತರದಿಂದ ಇಂಗ್ಲೆಂಡ್‌ನ ಡ್ಯಾನ್ ಇವಾನ್ಸ್ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಕರ್ಬರ್‌ಗೆ ಆಘಾತ:
ಹಾಲಿ ಚಾಂಪಿಯನ್ ನವೊಮಿ ಒಸಾಕಗೆ ಆಘಾತ ನೀಡಿದ್ದ ಕೆನಾಡದ ಶ್ರೇಯಾಂಕ ರಹಿತ ಆಟಗಾರ್ತಿ ಆ್ಯನಿ ಫರ್ನಾಂಡೆಜ್ ಭಾನುವಾರ ತಡರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ, ಮಾಜಿ ಚಾಂಪಿಯನ್, ಜರ್ಮನಿಯ ಏಂಜಲಿಕ್ ಕರ್ಬರ್ ವಿರುದ್ಧ 4-6, 7-6(5), 6-2 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಲಗ್ಗೆ ಇರಿಸಿದರು.
ಮಹಿಳೆಯರ ಮತ್ತೊಂದು ಸಿಂಗಲ್ಸ್‌ನಲ್ಲಿ ಬಾರ್ಬೊರಾ ಕ್ರೆಜ್ಕೋವಾ 6-3, 7-6(4) ಅಂತರದಿಂದ ಗಾರ್ಬೈನ್ ಮುಗುರುಜಾ ವಿರುದ್ಧ ಗೆದ್ದು, ಕ್ವಾರ್ಟರ್ ಪ್ರವೇಶಿಸಿದರು.