ಕಾಠ್ಮಂಡು(ಡಿ.11): ದಕ್ಷಿಣ ಏಷ್ಯನ್‌ ಕ್ರೀಡಾಕೂಟವನ್ನು ಭಾರತ ಬರೋಬ್ಬರಿ 312 ಪದಕಗಳೊಂದಿಗೆ ಮುಕ್ತಾಯಗೊಳಿಸಿದೆ. ಕ್ರೀಡಾಕೂಟದಲ್ಲಿ ಇದು ಭಾರತದ ಅತ್ಯಂತ ಶ್ರೇಷ್ಠ ಪ್ರದರ್ಶನವೆನಿಸಿದೆ. ಅಲ್ಲದೆ ಸತತ 13ನೇ ಬಾರಿಗೆ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. 1984ರಿಂದ ಆರಂಭಗೊಂಡ ಕ್ರೀಡಾಕೂಟದ ಪ್ರತಿ ಆವೃತ್ತಿಯಲ್ಲೂ ಭಾರತವೇ ಹೆಚ್ಚು ಪದಕಗಳನ್ನು ಜಯಿಸಿದೆ.

ದಕ್ಷಿಣ ಏಷ್ಯನ್ ಗೇಮ್ಸ್: ತ್ರಿಶತಕದತ್ತ ಭಾರತ ದಾಪುಗಾಲು

ಭಾರತ 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಕ್ರೀಡಾಕೂಟಕ್ಕೆ ಭಾರತ 487 ಕ್ರೀಡಾಪಟುಗಳನ್ನು ಕಳುಹಿಸಿತ್ತು. 2016ರಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಭಾರತ ಒಟ್ಟು 309 ಪದಕಗಳನ್ನು (189 ಚಿನ್ನ, 90 ಬೆಳ್ಳಿ ಹಾಗೂ 30 ಕಂಚು) ಜಯಿಸಿತ್ತು.

ಆತಿಥೇಯ ನೇಪಾಳ ಒಟ್ಟು 206 ಪದಕಗಳನ್ನು (51 ಚಿನ್ನ, 60 ಬೆಳ್ಳಿ, 95ಕಂಚು) 2ನೇ ಸ್ಥಾನ ಪಡೆದರೆ, ಶ್ರೀಲಂಕಾ 251 ಪದಕಗಳನ್ನು (40 ಚಿನ್ನ, 83 ಬೆಳ್ಳಿ, 128 ಕಂಚು) ಗೆದ್ದು 3ನೇ ಸ್ಥಾನ ಪಡೆಯಿತು.

10 ದಿನಗಳ ಕ್ರೀಡಾಕೂಟದ ಕೊನೆಯ ದಿನವಾದ ಮಂಗಳವಾರ, ಭಾರತ ತನ್ನ ಖಾತೆಗೆ 18 ಪದಕಗಳನ್ನು (15 ಚಿನ್ನ, 2 ಬೆಳ್ಳಿ, 1 ಕಂಚು) ಸೇರ್ಪಡೆಗೊಳಿಸಿಕೊಂಡಿತು. ಭಾರತದ ಬಾಕ್ಸರ್‌ಗಳು 12 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದರು. ಹಾಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ವಿಕಾಸ್‌ ಕೃಷನ್‌ (69 ಕೆ.ಜಿ), 2014 ಕಾಮನ್‌ವೆಲ್ತ್‌ ಗೇಮ್ಸ್‌ ಕಂಚು ವಿಜೇತೆ ಪಿಂಕಿ ರಾಣಿ (51 ಕೆ.ಜಿ), ಸೋನಿಯಾ ಲಾಥರ್‌ (57 ಕೆ.ಜಿ) ಚಿನ್ನ ಗೆದ್ದ ಪ್ರಮುಖ ಬಾಕ್ಸರ್‌ಗಳು.

ಭಾರತ ಪುರುಷ ಹಾಗೂ ಮಹಿಳಾ ಬಾಸ್ಕೆಟ್‌ಬಾಲ್‌ ತಂಡಗಳು ಚಿನ್ನ ಜಯಿಸಿದವು. ಪುರುಷರ ತಂಡ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 101-62ರ ಅಂತರದಲ್ಲಿ ಗೆದ್ದರೆ, ಮಹಿಳಾ ತಂಡ ನೇಪಾಳ ವಿರುದ್ಧ 127-46 ಅಂಕಗಳಲ್ಲಿ ಗೆಲುವಿನ ನಗೆ ಬೀರಿತು. ಸ್ಕ್ವಾಶ್‌ನಲ್ಲಿ ಭಾರತ ಮಹಿಳಾ ತಂಡ ಚಿನ್ನ ಗೆದ್ದರೆ, ಪುರುಷರ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.