ಎಟಿಪಿ ವಿಶ್ವ ರ‍್ಯಾಂಕಿಂಗ್: ಜೋಕೋವಿಚ್ ನಂ.1 ದಾಖಲೆ..!
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೋಕೋವಿಚ್ ದಿಗ್ಗಜ ಟೆನಿಸಿಗ ರೋಜರ್ ಫೆಡರರ್ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಲಂಡನ್(ಮಾ.09): 311 ವಾರಗಳ ಕಾಲ ಎಟಿಪಿ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಸರ್ಬಿಯಾದ ನೋವಾಕ್ ಜೋಕೋವಿಚ್, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ದಾಖಲೆಯನ್ನು ಮುರಿದಿದ್ದಾರೆ. ಫೆಡರರ್ 310 ವಾರಗಳ ಕಾಲ ನಂ.1 ಪಟ್ಟದಲ್ಲಿದ್ದರು.
2 ವಾರಗಳ ಹಿಂದೆ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿಯನ್ನು ದಾಖಲೆಯ 9ನೇ ಬಾರಿಗೆ ಜಯಿಸಿದ ಜೋಕೋವಿಚ್, ಅಗ್ರಸ್ಥಾನದಲ್ಲೇ ಮುಂದುವರಿಯುವುದನ್ನು ಖಚಿತಪಡಿಸಿಕೊಂಡಿದ್ದರು. ಜೋಕೋವಿಚ್ 5 ವಿಭಿನ್ನ ಸಮಯಗಳಲ್ಲಿ ನಂ.1 ಸ್ಥಾನ ಪಡೆದ ಹಿರಿಮೆ ಹೊಂದಿದ್ದಾರೆ. 2020ರ ಫೆಬ್ರವರಿಯಲ್ಲಿ ರಾಫೆಲ್ ನಡಾಲ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಜೋಕೋವಿಚ್ 6ನೇ ಬಾರಿಗೆ ನಂ.1 ಪಟ್ಟಕ್ಕೇರಿ ಪೀಟ್ ಸ್ಯಾಂಪ್ರಸ್‌ರ ದಾಖಲೆ ಸರಿಗಟ್ಟಿದ್ದರು.
ಜೋಕರ್ ಕಿಂಗ್: ಆಸ್ಪ್ರೇಲಿಯನ್ ಓಪನ್‌ಗೆ ನೊವಾಕ್ ದೊರೆ!
ಜು.4, 2011ರಂದು ಮೊದಲ ಬಾರಿಗೆ ವಿಶ್ವ ನಂ.1 ಆಗಿದ್ದ ಜೋಕೋವಿಚ್, 53 ವಾರಗಳ ಕಾಲ ಅಗ್ರಸ್ಥಾನ ಉಳಿಸಿಕೊಂಡಿದ್ದರು. ನ.5, 2012ರಿಂದ ಅ.6, 2013ರ ವರೆಗೂ 48 ವಾರಗಳ ಕಾಲ, ಜು.7, 2014ರಿಂದ ನ.6, 2016ರ ವರೆಗೂ 122 ವಾರ, ನ.5, 2018ರಿಂದ ನ.3, 2019ರ ವರೆಗೂ 52 ವಾರಗಳ ಕಾಲ, ಫೆ.3ರಿಂದ ಈಗಿನವರೆಗೂ 36 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದಾರೆ.
ಅತಿಹೆಚ್ಚು ವಾರ ಅಗ್ರಸ್ಥಾನದಲ್ಲಿ
ಆಟಗಾರ (ದೇಶ) ವಾರ
ಜೋಕೋವಿಚ್ (ಸರ್ಬಿಯಾ) 311*
ರೋಜರ್ ಫೆಡರರ್(ಸ್ವಿಜರ್‌ಲೆಂಡ್) 310
ಪೀಟ್ ಸ್ಯಾಂಪ್ರಸ್ (ಅಮೆರಿಕ) 286
ಇವಾನ್ ಲೆಂಡ್ಲ್ (ಚೆಕ್ ಗಣರಾಜ್ಯ) 270
ಜಿಮ್ಮಿ ಕಾನ್ನರ್ಸ್ (ಅಮೆರಿಕ) 268