ಜೋಕರ್‌ ಕಿಂಗ್‌!| ಆಸ್ಪ್ರೇಲಿಯನ್‌ ಓಪನ್‌ಗೆ ನೊವಾಕ್‌ ದೊರೆ| ಪುರುಷರ ಸಿಂಗಲ್ಸ್‌ ಫೈನಲ್‌: ರಷ್ಯಾದ ಮೆಡ್ವಡೇವ್‌ ವಿರುದ್ಧ 7-5, 6-2, 6-2 ನೇರ ಸೆಟ್‌ಗಳಲ್ಲಿ ಜಯ| 9 ಬಾರಿ ಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದ ನೊವಾಕ್‌ ಜೋಕೋವಿಚ್‌| 2ನೇ ಬಾರಿ ಹ್ಯಾಟ್ರಿಕ್‌ ಸಾಧನೆ

ಮೆಲ್ಬರ್ನ್‌(ಫೆ.22): 33 ವರ್ಷ ಪ್ರಾಯ, 18 ಗ್ರಾನ್‌ಸ್ಲಾಂ ಪುರುಷರ ಸಿಂಗಲ್ಸ್‌ ಪ್ರಶಸ್ತಿ, ಈ ಪೈಕಿ 9 ಆಸ್ಪ್ರೇಲಿಯನ್‌ ಓಪನ್‌ ಕಿರೀಟ, ಈ ಬಾರಿಯದು 2ನೇ ಹ್ಯಾಟ್ರಿಕ್‌ ಪ್ರಶಸ್ತಿ, ಇನ್ನು 2 ಗ್ರಾನ್‌ಸ್ಲಾಂ ಗೆದ್ದರೆ ದಂತಕಥೆಗಳಾದ ಫೆಡರರ್‌-ನಡಾಲ್‌ ದಾಖಲೆಗೆ ಸಮ, ಸತತ 309 ವಾರಗಳಿಂದ ವಿಶ್ವದ ನಂ.1 ಟೆನಿಸಿಗ, ಇನ್ನು ಎರಡೂವರೆ ವಾರ ಹೀಗೇ ಕಳೆದರೆ ಅತಿ ಹೆಚ್ಚು ಕಾಲ ನಂ.1 ಪಟ್ಟದಲ್ಲಿದ್ದ ವ್ಯಕ್ತಿಯೆಂಬ ಸಾರ್ವಕಾಲಿಕ ದಾಖಲೆ...

ಇದು ವರ್ಷದ ಮೊದಲ ಗ್ರಾನ್‌ಸ್ಲಾಂ ಆಗಿರುವ ಆಸ್ಪ್ರೇಲಿಯಾ ಓಪನ್‌ ಟೆನಿಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸಾಧನೆಯ ಶಿಖರ ತಲುಪಿರುವ ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಸದ್ಯದ ಟೆನಿಸ್‌ ಜಾತಕ.

ಏಕಪಕ್ಷೀಯ ಪಂದ್ಯ:

ರಾಡ್‌ ಲೆವರ್‌ ಅಂಗಣದಲ್ಲಿ 18 ಡಿಗ್ರಿ ಸೆಲ್ಷಿಯಸ್‌ ತಣ್ಣನೆಯ ವಾತಾವರಣದಲ್ಲಿ ಭಾನುವಾರ 113 ನಿಮಿಷಗಳ ಕಾಲ ಬಹುತೇಕ ಏಕಪಕ್ಷೀಯವಾಗಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಅನುಭವಿ ನೊವಾಕ್‌, ತಮ್ಮ ಎದುರಾಳಿ ರಷ್ಯಾದ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು 7-5, 6-2, 6-2 ನೇರ ಸೆಟ್‌ಗಳಲ್ಲಿ ಹೊಸಕಿ ಹಾಕಿದರು. ತನ್ಮೂಲಕ 2ನೇ ಬಾರಿಗೆ (2011-2013 ಹಾಗೂ 2019-2021) ಸತತ 3 ಆಸ್ಪ್ರೇಲಿಯನ್‌ ಓಪನ್‌ ಸಿಂಗಲ್ಸ್‌ ಕಿರೀಟ ಧರಿಸಿದರು. ಅಂಗಣದಲ್ಲಿ ತೋರುವ ಚಾಕಚಕ್ಯತೆಯಿಂದಾಗಿ ‘ಟೆನಿಸ್‌ನ ಚೆಸ್‌ ಆಟಗಾರ’ ಎಂದೇ ಬಣ್ಣಿಸಲ್ಪಟ್ಟಮೆಡ್ವಡೇವ್‌, ತಮ್ಮ ವೃತ್ತಿಜೀವನದ 2ನೇ ಗ್ರಾನ್‌ಸ್ಲಾಂ ಫೈನಲ್‌ನಲ್ಲೂ ಪ್ರಶಸ್ತಿ ಗೆಲ್ಲಲು ವಿಫಲರಾದರು. ಈ ಹಿಂದೆ ಅವರು 2019ರ ಯುಎಸ್‌ ಓಪನ್‌ ಫೈನಲ್‌ನಲ್ಲಿ ನಡಾಲ್‌ ಎದುರು ಪರಾಭವ ಹೊಂದಿದ್ದರು.

ತಮ್ಮ 28ನೇ ಗ್ರಾನ್‌ಸ್ಲಾಂ ಫೈನಲ್‌ನಲ್ಲಿ ಆಡಿದ ಜೋಕೋವಿಚ್‌, ಪಂದ್ಯದ ಮೊದಲ 10 ನಿಮಿಷದಲ್ಲೇ 3-0 ಮುನ್ನಡೆ ಸಾಧಿಸಿದ್ದರು. ಬಳಿಕ ತುಸು ಮಂಕಾದರು. ಆದರೆ, ಮೊದಲ ಸೆಟ್‌ 5-5 ಆಗಿದ್ದಾಗ ಲಯಕ್ಕೆ ಮರಳಿದ ಸರ್ಬಿಯಾ ಆಟಗಾರ ಹಿಂತಿರುಗಿ ನೋಡಲಿಲ್ಲ. ಮೊದಲ ಸೆಟ್‌ ಅನ್ನು 7-5ರೊಂದಿಗೆ ತಮ್ಮದಾಗಿಸಿಕೊಂಡ ಬಳಿಕ ನಂತರ 2 ಸೆಟ್‌ಗಳನ್ನೂ 6-2, 6-2ರಿಂದ ಜಯಿಸಿದರು. ಇದರೊಂದಿಗೆ ಸತತ 20 ಪಂದ್ಯ ಗೆದ್ದಿದ್ದ ಮೆಡ್ವಡೇವ್‌ ಓಟಕ್ಕೆ ಲಗಾಮು ಹಾಕಿದರು.

18 ಗ್ರಾನ್‌ಸ್ಲಾಂ ಪ್ರಶಸ್ತಿ ಸರದಾರ

2003ರಿಂದ ವೃತ್ತಿಪರ ಟೆನಿಸ್‌ ಆಡುತ್ತಿರುವ ಜೋಕೋವಿಚ್‌ ಈವರೆಗೆ 18 ಗ್ರಾನ್‌ಸ್ಲಾಂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 9 ಬಾರಿ ಆಸ್ಪ್ರೇಲಿಯನ್‌ ಓಪನ್‌, 5 ಬಾರಿ ವಿಂಬಲ್ಡನ್‌, 3 ಬಾರಿ ಯುಎಸ್‌ ಓಪನ್‌ ಹಾಗೂ ಒಮ್ಮೆ ಫ್ರೆಂಚ್‌ ಓಪನ್‌ ಪುರುಷರ ಸಿಂಗಲ್ಸ್‌ ಗೆದ್ದಿದ್ದಾರೆ. ಸ್ವಿಸ್‌ ದಂತಕಥೆ ರೋಜರ್‌ ಫೆಡರರ್‌ ಹಾಗೂ ಸ್ಪೇನ್‌ನ ರಾಫೆಲ್‌ ನಡಾಲ್‌ ಇಬ್ಬರೂ ತಲಾ 20 ಗ್ರಾನ್‌ಸ್ಲಾಂ ಗೆದ್ದು ವಿಶ್ವದಾಖಲೆ ಹೊಂದಿದ್ದಾರೆ. ಅವರನ್ನು ಸರಿಗಟ್ಟಲು ಜೋಕೋವಿಚ್‌ ಇನ್ನೆರಡು ಗ್ರಾನ್‌ಸ್ಲಾಂ ಪ್ರಶಸ್ತಿ ಗೆಲ್ಲಬೇಕಿದೆ.

ಜೋಕೋವಿಚ್‌ 18

ಗ್ರಾನ್‌ಸ್ಲಾಂ ಸಾಧನೆ

ಆಸ್ಪ್ರೇಲಿಯನ್‌ ಓಪನ್‌: 2008, 2011, 2012, 2013, 2015, 2016, 2019, 2020, 2021

ವಿಂಬಲ್ಡನ್‌: 2011, 2014, 2015, 2018, 2019

ಯುಎಸ್‌ ಓಪನ್‌: 2011, 2015, 2018

ಫ್ರೆಂಚ್‌ ಓಪನ್‌: 2016