ಫುಝೋ(ನ.07): ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ಹಾಗೂ ಸಮೀರ್‌ ವರ್ಮಾ, ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದರೆ, ಪಾರುಪಳ್ಳಿ ಕಶ್ಯಪ್‌, ಬಿ. ಸಾಯಿ ಪ್ರಣೀತ್‌ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಲ್ಲಿ ಒಲಿಂಪಿಕ್‌ ಕಂಚು ವಿಜೇತೆ, ವಿಶ್ವ ನಂ.9 ಸೈನಾ, ಸ್ಥಳೀಯ ಶಟ್ಲರ್‌ ಚೀ ಯನ್‌ ಯನ್‌ ವಿರುದ್ಧ 9-21, 12-21 ಗೇಮ್‌ಗಳಲ್ಲಿ ಪರಾಭವ ಹೊಂದಿದರು. ಕೇವಲ 24 ನಿಮಿಷಗಳಲ್ಲಿ ಸೈನಾ ಶರ​ಣಾ​ದರು.

ಚೀನಾ ಓಪನ್‌: ಮೊದಲ ಸುತ್ತಿನಲ್ಲೇ ಹೊರಬಿದ್ದ ಸಿಂಧು!

ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಮೀರ್‌ ವರ್ಮಾ, ಹಾಂಕಾಂಗ್‌ನ ಲೀ ಚೆಕ್‌ ಯು ವಿರುದ್ಧ 18-21, 18-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ, ಸಿಕ್ಕಿ ರೆಡ್ಡಿ ಜೋಡಿ, ಚೈನೀಸ್‌ ತೈಪೆಯ ವಾಂಗ್‌ ಚೀ ಲಿನ್‌, ಚೆಂಗ್‌ ಚೀ ಯಾ ಜೋಡಿ ವಿರುದ್ಧ 14-21, 14-21 ಗೇಮ್‌ಗಳಲ್ಲಿ ಪರಾಭವಗೊಂಡಿತು.

2ನೇ ಸುತ್ತಿಗೆ ಕಶ್ಯಪ್‌, ಪ್ರಣೀತ್‌

ಪುರುಷರ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಪಿ. ಕಶ್ಯಪ್‌, ಥಾಯ್ಲೆಂಡ್‌ನ ಸಿತ್ತಿಕೊಮ್‌ ತಮ್ಮಸಿನ್‌ ವಿರುದ್ಧ 21-14, 21-3 ಗೇಮ್‌ಗಳಲ್ಲಿ ಗೆಲುವು ಪಡೆದರು. ಪ್ರಿ ಕ್ವಾರ್ಟರ್‌ನಲ್ಲಿ ಕಶ್ಯಪ್‌, 7ನೇ ಶ್ರೇಯಾಂಕಿತ ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆಲ್ಸನ್‌ರನ್ನು ಎದುರಿಸಲಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಬಿ. ಸಾಯಿ ಪ್ರಣೀತ್‌, ಇಂಡೋನೇಷ್ಯಾದ ಟಾಮಿ ಸುಗಿರ್ತೊ ವಿರುದ್ಧ 15-21, 21-12, 21-10 ಗೇಮ್‌ಗಳಲ್ಲಿ ಜಯ ಸಾಧಿಸಿದರು. ವಿಶ್ವ ನಂ. 11 ಪ್ರಣೀತ್‌, 2ನೇ ಸುತ್ತಿನಲ್ಲಿ ಡೆನ್ಮಾರ್ಕ್ನ ಆ್ಯಂಡ್ರೆಸ್‌ ಆಂಟೊನ್ಸೆನ್‌ ಎದುರು ಸೆಣಸಲಿದ್ದಾರೆ.