ಆಸ್ಪ್ರೇಲಿಯನ್ ಓಪನ್: ಫೈನಲ್‌ಗೆ ರಷ್ಯಾದ ಮೆಡ್ವೆಡೆವ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಸುತ್ತಿನಲ್ಲಿ ಸರ್ಬಿಯಾದ ನೊವಾಕ್ ಜೋಕೋವಿಚ್ ಜತೆ ಕಾದಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಫೆ.20): ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಫೈನಲ್‌ಗೆ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮೆಡ್ವೆಡೆವ್, ಗ್ರೀಸ್‌ನ ಸ್ಟೆಫಾನೋಸ್ ಟಿಟ್ಸಿಪಾಸ್ ವಿರುದ್ಧ 6-4, 6-2, 7-5 ನೇರ ಸೆಟ್‌ಗಳಲ್ಲಿ ಸುಲಭವಾಗಿ ಜಯಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ರಷ್ಯಾದ ಆಟಗಾರ, ವಿಶ್ವ ನಂ.1 ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್ ವಿರುದ್ಧ ಚೊಚ್ಚಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಲು ಸೆಣಸಲಿದ್ದಾರೆ.
ಸೆಮೀಸ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಟಿಟ್ಸಿಪಾಸ್, ವಿಶ್ವ ನಂ.4 ಮೆಡ್ವೆಡೆವ್ ವಿರುದ್ಧ ಮಂಕಾದರು. ಆಕರ್ಷಕ ಆಟವಾಡಿದ ಮೆಡ್ವೆಡವ್, ವಿಶ್ವ ರಾರಯಂಕಿಂಗ್‌ನಲ್ಲಿ ಅಗ್ರ 10ರಲ್ಲಿರುವ ಬಹುತೇಕ ಎಲ್ಲಾ ಆಟಗಾರರ ವಿರುದ್ಧ ಗೆದ್ದ ಸಾಧನೆ ಮಾಡಿದರು.
ಆಸ್ಟ್ರೇಲಿಯನ್ ಓಪನ್: 9ನೇ ಬಾರಿ ಫೈನಲ್‌ಗೇರಿದ ಜೋಕೋವಿಚ್
ಇಂದು ಮಹಿಳಾ ಸಿಂಗಲ್ಸ್ ಫೈನಲ್: ಜಪಾನ್‌ನ ನವೊಮಿ ಒಸಾಕ ಹಾಗೂ ಅಮೆರಿಕದ ಜೆನಿಫರ್ ಬ್ರಾಡಿ ಶನಿವಾರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸೆಣಸಲಿದ್ದಾರೆ. ಒಸಾಕ 3ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದರೆ, ಬ್ರಾಡಿ ಚೊಚ್ಚಲ ಟ್ರೋಫಿಗೆ ಮುತ್ತಿಡಲು ಎದುರು ನೋಡುತ್ತಿದ್ದಾರೆ.