ಮೆಲ್ಬರ್ನ್(ಫೆ.19)‌: ಹಾಲಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಜೋಕೋವಿಚ್‌, ರಷ್ಯಾದ ಆಸ್ಲನ್‌ ಕರೆಟ್ಸೆವ್‌ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ವಿಶ್ವ ರಾರ‍ಯಂಕಿಂಗ್‌ನಲ್ಲಿ 114ನೇ ಸ್ಥಾನದಲ್ಲಿರುವ ಕರೆಟ್ಸೆವ್‌ರಿಂದ ನಂಬರ್‌ 1 ಆಟಗಾರನಿಗೆ ಯಾವುದೇ ಹಂತದಲ್ಲೂ ಸಮಸ್ಯೆ ಎದುರಾಗಲಿಲ್ಲ.

ಜೋಕೋವಿಚ್‌ ಈ ಹಿಂದೆ 8 ಬಾರಿ ಫೈನಲ್‌ ಪ್ರವೇಶಿಸಿದಾಗಲೂ ಪ್ರಶಸ್ತಿ ಜಯಿಸಿದ್ದಾರೆ. ದಾಖಲೆಯ 9ನೇ ಆಸ್ಪ್ರೇಲಿಯನ್‌ ಓಪನ್‌ ಗೆದ್ದು ಒಟ್ಟು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 18ಕ್ಕೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅತಿಹೆಚ್ಚು ಗ್ರ್ಯಾನ್‌ ಸ್ಲಾಂ (20) ಗೆದ್ದಿರುವ ಫೆಡರರ್‌ ಹಾಗೂ ನಡಾಲ್‌ಗಿಂತ ಕೇವಲ 2 ಪ್ರಶಸ್ತಿ ಹಿಂದುಳಿಯಲಿದ್ದಾರೆ. ಶುಕ್ರವಾರ ಪುರುಷರ ಸಿಂಗಲ್ಸ್‌ನ 2ನೇ ಸೆಮೀಸ್‌ನಲ್ಲಿ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಹಾಗೂ ಗ್ರೀಸ್‌ನ ಸ್ಟೆಫಾನೋಸ್‌ ಟಿಟ್ಸಿಪಾಸ್‌ ಎದುರಾಗಲಿದ್ದಾರೆ.

ಆಸ್ಟ್ರೇಲಿಯನ್‌ ಓಪನ್‌: ನಡಾಲ್‌ 21ನೇ ಗ್ರ್ಯಾನ್‌ ಸ್ಲಾಂ ಕನಸು ಭಗ್ನ

ಫೈನಲ್‌ಗೆ ಒಸಾಕ-ಬ್ರಾಡಿ: ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌, ಜಪಾನ್‌ನ ನವೊಮಿ ಒಸಾಕ ವಿರುದ್ಧ 3-6, 4-6 ಸೆಟ್‌ಗಳಲ್ಲಿ ಸೋಲುಂಡರು. ದಾಖಲೆಯ 24ನೇ ಗ್ರ್ಯಾನ್‌ ಸ್ಲಾಂ ಗೆಲ್ಲಲು ಸೆರೆನಾ ಮತ್ತಷ್ಟು ದಿನ ಕಾಯಬೇಕಿದೆ. ಒಸಾಕ, 3ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದು ಸೆಮೀಸ್‌ನಲ್ಲಿ ಅಮೆರಿದ ಜೆನಿಫರ್‌ ಬ್ರಾಡಿ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಚೋವಾ ವಿರುದ್ಧ 6-4, 3-6, 6-4 ಸೆಟ್‌ಗಳಲ್ಲಿ ಜಯಿಸಿ, ಚೊಚ್ಚಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ ಪ್ರವೇಶಿಸಿದರು.