ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್: ಸುಮಾರು 190 ದೇಶಗಳಿಂದ ಸ್ಪರ್ಧೆ
* 44ನೇ ವಿಶ್ವ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟಕ್ಕೆ ಚೆನ್ನೈ ಆತಿಥ್ಯ
* ಈ ಮೊದಲು ರಷ್ಯಾದ ಮಾಸ್ಕೋದಲ್ಲಿ ಜು.26ರಿಂದ ಆ.8ರ ವರೆಗೆ ಟೂರ್ನಿ ನಿಗದಿಯಾಗಿತ್ತು
* 2020ರಲ್ಲಿ ಆನ್‌ಲೈನ್‌ನಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಭಾರತ-ರಷ್ಯಾ ಜಂಟಿ ಚಾಂಪಿಯನ್
ಚೆನ್ನೈ(ಮಾ.17): ರಷ್ಯಾದಿಂದ (Russia) ಸ್ಥಳಾಂತರಗೊಂಡಿದ್ದ 44ನೇ ವಿಶ್ವ ಚೆಸ್ ಒಲಿಂಪಿಯಾಡ್ (World Chess Olympiad) ಆಯೋಜನೆಯ ಆತಿಥ್ಯ ಅವಕಾಶ ಚೆನ್ನೈಗೆ (Chennai) ಲಭಿಸಿದೆ. ಇದನ್ನು ಭಾರತೀಯ ಚೆಸ್ ಒಕ್ಕೂಟ(ಎಐಸಿಎಫ್) ಖಚಿತಪಡಿಸಿದೆ. 44ನೇ ಒಲಿಂಪಿಯಾಡ್ ಮೊದಲು ರಷ್ಯಾದ ಮಾಸ್ಕೋದಲ್ಲಿ ಜು.26ರಿಂದ ಆ.8ರ ವರೆಗೆ ನಿಗದಿಯಾಗಿತ್ತು. ಆದರೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಚೆಸ್ ಒಕ್ಕೂಟ(ಫಿಡೆ) ಟೂರ್ನಿಯನ್ನು ಚೆನ್ನೈಗೆ ಸ್ಥಳಾಂತರಿಸಿದೆ. ಎಐಸಿಎಫ್ 10 ಮಿಲಿಯನ್ ಅಮೆರಿಕನ್ ಡಾಲರ್ (70 ಕೋಟಿ ರು.) ಬಜೆಟ್‌ನಲ್ಲಿ ಟೂರ್ನಿಯನ್ನು ಆಯೋಜಿಸಲಿದೆ.
2013ರಲ್ಲಿ ವಿಶ್ವನಾಥನ್ ಆನಂದ್ (Viswanathan Anand) ಹಾಗೂ ನಾರ್ವೇಯ ಮ್ಯಾಗ್ನಸ್ ಕಾಲ್‌ರ್‍ಸನ್ (Magnus Carlsen) ನಡುವೆ ಸ್ಪರ್ಧೆ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್ ಬಳಿಕ ಭಾರತದಲ್ಲಿ ನಡೆಯಲಿರುವ ಅತಿದೊಡ್ಡ ಜಾಗತಿಕ ಮಟ್ಟದ ಚೆಸ್ ಪಂದ್ಯಾವಳಿ ಇದಾಗಿದೆ. ಒಲಿಂಪಿಯಾಡ್ 2 ವರ್ಷಗಳಿಗೊಮ್ಮೆ ನಡೆಯಲಿರುವ ತಂಡ ವಿಭಾಗಗದ ಟೂರ್ನಿಯಾಗಿದ್ದು, ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ 11 ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿವೆ. ಸುಮಾರು 2 ವಾರಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಸುಮಾರು 190 ದೇಶಗಳ ತಂಡಗಳು ಭಾಗವಹಿಲಿವೆ. 2020ರಲ್ಲಿ ಆನ್‌ಲೈನ್‌ನಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಭಾರತ ತಂಡ ರಷ್ಯಾದೊಂದಿಗೆ ಜಂಟಿಯಾಗಿ ಚಿನ್ನದ ಪದಕ ಗೆದ್ದಿತ್ತು. ಕಳೆದ ಬಾರಿ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು.
ಬ್ಯಾಡ್ಮಿಂಟನ್: ಸಮೀರ್, ಪ್ರಣಯ್‌ಗೆ ಸೋಲು
ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ (All England Badminton Championship) ಭಾರತದ ಪಿ.ವಿ. ಸಿಂಧು (PV Sindhu), ಸೈನಾ ನೆಹ್ವಾಲ್ (Saina Nehwal) ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಎಚ್.ಎಸ್.ಪ್ರಣಯ್, ಸಮೀರ್ ವರ್ಮಾ ಹಾಗೂ ಸಾಯಿ ಪ್ರಣೀತ್ ಮೊದಲ ಸುತ್ತಲೇ ಸೋಲನುಭವಿಸಿದ್ದಾರೆ.
All England Open: 21 ವರ್ಷದ ಬಳಿಕ ಚಿನ್ನದ ಪದಕ ಗೆಲ್ತಾರಾ ಭಾರತೀಯ ಶಟ್ಲರ್‌ಗಳು..?
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಚೀನಾದ ವಾಂಗ್ ಜಿ ಯೀ ಹಾಗೂ ಸೈನಾ ನೆಹ್ವಾಲ್, ಸ್ಪೇನ್‌ನ ಬೀಟ್ರಿಜ್ ವಿರುದ್ದ ಗೆಲುವು ಸಾಧಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್, ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್‌ಸರ್ನ್ ವಿರುದ್ದ ಹಾಗೂ ಸಮೀರ್, ನೆದರ್‌ಲೆಂಡ್ಸ್‌ನ ಮಾರ್ಕ್ ಕಾಲ್ಜೋವ್ ವಿರುದ್ಧ ಸೋತರು. ಪ್ರಣೀತ್, ವಿಶ್ವ ನಂ.1 ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್‌ಗೆ ಶರಣಾದರು.
ಬೆಂಗಳೂರು ಟೆನಿಸ್ : ಖಾಡೆ 2ನೇ ಸುತ್ತಿಗೆ
ಬೆಂಗಳೂರು: ಐಟಿಎಫ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಅರ್ಜುನ್ ಖಾಡೆ ಹಾಗೂ ಆದಿಲ್ ಕಲ್ಯಾಣ್‌ಪುರ 2ನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಖಾಡೆ ಭಾರತದವರೇ ಆದ ರಿಷಿ ರೆಡ್ಡಿ ವಿರುದ್ಧ ಗೆದ್ದರು. ಆದಿಲ್, ಆಸ್ಟ್ರಿಯಾದ ಲುಕಾಸ್ ಕ್ರೈನೆರ್ ವಿರುದ್ಧ ಜಯಿಸಿದರು. ನಿಕ್ಕಿ ಪೂನಚ, ಮನೀಶ್, ದಿಗ್ವಿಜಯ್, ಸಿದ್ಧಾರ್ಥ್ ರಾವತ್ ಕೂಡಾ 2ನೇ ಸುತ್ತು ತಲುಪಿದರು.
ಏಕದಿನದಲ್ಲಿ 250 ವಿಕೆಟ್: ಜೂಲನ್ ಗೋಸ್ವಾಮಿ ಹೊಸ ದಾಖಲೆ!
ಮೌಂಟ್ ಮಾಂಗನುಯಿ: ಭಾರತ ತಂಡದ ಹಿರಿಯ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಬುಧವಾರ ಇಂಗ್ಲೆಂಡ್ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟ್ಯಾಮಿ ಬ್ಯೂಮೊಂಟ್ ವಿಕೆಟ್ ಪಡೆಯುವ ಮೂಲಕ ಅವರು ಈ ಮಹತ್ತರ ಮೈಲಿಗಲ್ಲು ತಲುಪಿದರು.
2002ರಲ್ಲಿ ಇಂಗ್ಲೆಂಡ್ ವಿರುದ್ಧವೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಗೋಸ್ವಾಮಿ ಈವರೆಗೆ 199 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಆಸ್ಪ್ರೇಲಿಯಾದ ಕ್ಯಾಥರಿನ್ ಫಿಟ್‌್ಜಪ್ಯಾಟ್ರಿಕ್(180 ವಿಕೆಟ್) 2ನೇ ಸ್ಥಾನದಲ್ಲಿದ್ದಾರೆ.