Formula One : ಹ್ಯಾಮಿಲ್ಟನ್ ಅಧಿಪತ್ಯ ಮುಗಿಸಿದ ವರ್ಸ್ಟಾಪೆನ್ ನೂತನ ಎಫ್ 1 ಚಾಂಪಿಯನ್!
ದಾಖಲೆಯ 7ನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಹ್ಯಾಮಿಲ್ಟನ್ ಕನಸುಭಗ್ನ
ರೆಡ್ ಬುಲ್ ತಂಡದ ಡ್ರೈವರ್ ಮ್ಯಾಕ್ಸ್ ವರ್ಸ್ಟಾಪೆನ್ ನೂತನ ಎಫ್ 1 ಚಾಂಪಿಯನ್
ವರ್ಷದ ಕಟ್ಟಕಡೆಯ ರೇಸ್ ಅಬುಧಾಬಿ ಜಿಪಿಯಲ್ಲಿ ಚಾಂಪಿಯನ್ ಆದ ಮ್ಯಾಕ್ಸ್ ವರ್ಸ್ಟಾಪೆನ್
ಅಬುಧಾಬಿ ( ಡಿ.12): ಕಳೆದ 47 ವರ್ಷಗಳ ಫಾರ್ಮುಲಾ ಒನ್ ರೇಸ್ (Formula One) ಇತಿಹಾಸದಲ್ಲಿಯೇ ಅತ್ಯಂತ ನಿಕಟ ವಿಶ್ವ ಚಾಂಪಿಯನ್ ಷಿಪ್ ಹೋರಾಟ ಎನಿಸಿಕೊಂಡಿದ್ದ 2021ರ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಷಿಪ್ (2021 F1 World Championship ) ಪ್ರಶಸ್ತಿಯನ್ನು ಬೆಲ್ಜಿಯಂ-ಡಚ್ ಮೂಲದ ಡ್ರೈವರ್, ರೆಡ್ ಬುಲ್ ತಂಡದ ಮ್ಯಾಕ್ಸ್ ವರ್ಸ್ಟಾಪೆನ್ (Max Verstappen ) ಜಯಿಸಿದ್ದಾರೆ. ಭಾನುವಾರ ಯುಎಇಯ ಅಬುಧಾಬಿಯಲ್ಲಿ ನಡೆದ ರೋಚಕ ರೇಸ್ ನಲ್ಲಿ ತನ್ನ ಎದುರಾಳಿ ಹಾಗೂ 7 ಬಾರಿಯ ಚಾಂಪಿಯನ್ ಮರ್ಸಿಡೀಸ್ ತಂಡದ ಲೆವಿಸ್ ಹ್ಯಾಮಿಲ್ಟನ್ ರನ್ನು ಮಣಿಸಿದ ವರ್ಸ್ಟಾಪೆನ್, ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ನೊಂದಿಗೆ (Abu Dhabi Grand Prix) ತಮ್ಮ ಮೊಟ್ಟಮೊದಲ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನೂ ಜಯಿಸಿದರು.
ಅಬುಧಾಬಿ ರೇಸ್ ನ ಕೊನೆಯ ಚರಣದಲ್ಲಿ ವರ್ಸ್ಟಾಪೆನ್ ತೆಗೆದುಕೊಂಡ ಓವರ್ ಟೇಕ್ ಬಗ್ಗೆ ವಿವಾದಗಳು ಎದುರಾಗಿ ಈ ನಿಟ್ಟಿನಲ್ಲಿ ಮರ್ಸಿಡೀಸ್ (Mercedes)ತಂಡ ಅಧಿಕೃತ ದೂರು ದಾಖಲಿಸಿದ್ದರೂ, ವರ್ಸ್ಟಾಪೆನ್ ಪ್ರಶಸ್ತಿಗೆ ಮುತ್ತಿಡುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಬ್ರಿಟನ್ ಚಾಲಕ ಲೆವಿಸ್ ಹ್ಯಾಮಿಲ್ಟನ್ ( Lewis Hamilton) ಅವರ ಮರ್ಸಿಡೀಸ್ ತಂಡ, ಕನ್ ಸ್ಟ್ರಕ್ಟರ್ ಚಾಂಪಿಯನ್ ಷಿಪ್ (ಟೀಮ್ ಚಾಂಪಿಯನ್ ಷಿಪ್ ಎನ್ನುವ ಅರ್ಥ) ಅನ್ನು ಸತತ ಎಂಟನೇ ವರ್ಷ ಗೆದ್ದುಕೊಂಡಿತು.
2014ರಿಂದಲೂ ಮರ್ಸಿಡೀಸ್ ತಂಡ ಡ್ರೈವರ್ಸ್ ಹಾಗೂ ಕನ್ ಸ್ಟ್ರಕ್ಟರ್ಸ್ ಎರಡೂ ಚಾಂಪಿಯನ್ ಷಿಪ್ ಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿತ್ತು. 24 ವರ್ಷದ ವರ್ಸ್ಟಾಪೆನ್, ಮರ್ಸಿಡೀಸ್ ತಂಡದ ಅವಳಿ ಪ್ರಭುತ್ವಕ್ಕೆ ಭರ್ಜರಿ ನಿರ್ವಹಣೆಯ ಮೂಲಕ ಕೊನೆ ಹಾಡಿದ್ದಾರೆ.ವರ್ಷದ ಕೊನೆಯ ರೇಸ್ ಗೂ ಮುನ್ನ ವರ್ಸ್ಟಾಪೆನ್ ಹಾಗೂ ಹ್ಯಾಮಿಲ್ಟನ್ ಇಬ್ಬರೂ 369.5 ಅಂಕ ಸಂಪಾದನೆ ಮಾಡಿದ್ದರು.
ಕಳೆದ 47 ವರ್ಷಗಳಲ್ಲಿ ಟೈ ಅಂಕದೊಂದಿಗೆ ವರ್ಷದ ಕೊನೆಯ ಎಫ್ 1 ರೇಸ್ ನಡೆದಿದ್ದು ಇದೇ ಮೊದಲ ಬಾರಿ. "ನನಗೆ ಈ ಸಾಧನೆಯನ್ನು ನಂಬಲಾಗುತ್ತಿಲ್ಲ ಗೆಳೆಯರೇ.. ಹೀಗೆ ಜೊತೆಗಿದ್ದರೆ ಇನ್ನು 10-15 ವರ್ಷ ಈ ಸಾಧನೆ ಮಾಡಬಹುದು' ಎಂದು ರೇಡಿಯೋ ಮೂಲಕ ವರ್ಸ್ಟಾಪೆನ್ ತಮ್ಮ ಗೆಲುವನ್ನು ತಮ್ಮ ಟೀಮ್ ನ ಜೊತೆ ಸಂಭ್ರಮಿಸಿದರು. ಈ ಗೆಲುವಿಗೆ ನಮಗೆ ಒಂದು ಸ್ವಲ್ಪ ಅದೃಷ್ಟ ಬೇಕಿತ್ತು ಹಾಗೂ ಅದು ನಮಗೆ ಸಿಕ್ಕಿದೆ ಎಂದು ರೆಡ್ ಬುಲ್ (Red Bull) ತಂಡದ ಬಾಸ್ ಕ್ರಿಸ್ಟಿಯನ್ ಹಾರ್ನರ್ ಸಂಭ್ರಮಿಸಿದ್ದಾರೆ.
Formula One: ಕಳೆದ 47 ವರ್ಷಗಳ ಇತಿಹಾಸದ ಅತ್ಯಂತ ನಿಕಟ ಚಾಂಪಿಯನ್ ಷಿಪ್ ರೇಸ್ ಗೆ ರೆಡಿಯಾಗಿದೆ ಎಫ್ 1
ಯಾಸ್ ಮರೀನಾ ಸರ್ಕೂಟ್ ನಲ್ಲಿ ನಡೆದ ರೇಸ್ ನ ಆರಂಭ ಹಾಗೂ ಅಂತ್ಯ ವಿವಾದದಿಂದ ಕೂಡಿತ್ತಾದರೂ, ರೇಸ್ ನ ಕೊನೆಯಲ್ಲಿ ಇಡೀ ರೆಡ್ ಬುಲ್ ತಂಡದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಕೈಗೆಟುಕುವ ಹಂತದಲ್ಲಿ ವಿಶ್ವ ಚಾಂಪಿಯನ್ ಷಿಪ್ ತಪ್ಪಿ ಹೋದ ಬಗ್ಗೆ ಮರ್ಸಿಡೀಸ್ ತಂಡದಲ್ಲಿ ಕ್ರೋಧ ಮನೆಮಾಡಿತ್ತು. ಹಾಗೂ ಈ ಎಲ್ಲಾ ಸಿಟ್ಟುಗಳು ಆಸ್ಟ್ರೇಲಿಯಾದ ರೇಸ್ ಡೈರೆಕ್ಟರ್ ಮೈಕೆಲ್ ಮಾಸಿ ವಿರುದ್ದ ತೋರಿಸಿತು.
ಎಫ್1 ರೇಸ್: ಪ್ರಾಣಾಪಾಯದಿಂದ ಪಾರಾದ ಹ್ಯಾಮಿಲ್ಟನ್..!
2021ರ ಫಾರ್ಮುಲಾ ಒನ್ ಋತುವನ್ನು ಮ್ಯಾಕ್ಸ್ ವರ್ಸ್ಟಾಪೆನ್ 10 ಗೆಲುವುಗಳೊಂದಿಗೆ ಮುಗಿಸಿದರೆ, ಹ್ಯಾಮಿಲ್ಟನ್ 8 ಗೆಲುವುಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವರ್ಷದಲ್ಲಿ ನಡೆದ ದಾಖಲೆ 22 ರೇಸ್ ಗಳ ಅಂತ್ಯಕ್ಕೆ ವರ್ಸ್ಟಾಪೆನ್ 395.5 ಅಂಕದೊಂದಿಗೆ ಚಾಂಪಿಯನ್ ಎನಿಸಿದರೆ, ಹ್ಯಾಮಿಲ್ಟನ್ 387.5 ಅಂಕದೊಂದಿಗೆ 2ನೇ ಸ್ಥಾನ ಪಡೆದರು.