ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೂರ್ನಿಯಿಂದ ಹೊರಬಿದ್ದ ರಾಫೆಲ್ ನಡಾಲ್
* 2021ರ ಅಭಿಯಾನ ಅಂತ್ಯಗೊಳಿಸಿದ ರಾಫೆಲ್ ನಡಾಲ್
* ಯುಎಸ್ ಓಪನ್ ಗ್ರ್ಯಾನ್‌ಸ್ಲಾಂನಿಂದ ಹೊರಬಿದ್ದ ಕಿಂಗ್ ಆಫ್ ಕ್ಲೇ ಕೋರ್ಟ್
* ಯುಎಸ್ ಓಪನ್ ಟೂರ್ನಿ ಆಗಸ್ಟ್ 30ರಿಂದ ಆರಂಭ
ಸ್ಪೇನ್(ಆ.20): ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ 2021ರ ತಮ್ಮ ಸವಾಲು ಮುಕ್ತಾಯಗೊಂಡಿರುವುದಾಗಿ ಇಂದು(ಆ.20) ತಿಳಿಸಿದ್ದಾರೆ. ಪಾದದ ನೋವಿನಿಂದ ಬಳಲುತ್ತಿರುವ ಸ್ಪೇನ್ ಎಡಗೈ ಟೆನಿಸಿಗ ಈ ಮೊದಲೇ ಸಿನ್ಸಿನಾಟಿ ಹಾರ್ಡ್‌ಕೋರ್ಟ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ 2021ನೇ ಸಾಲಿನ ಹೋರಾಟಕ್ಕೆ ನಡಾಲ್ ತೆರೆ ಎಳೆದಿರುವಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಲೋ, ನಾನು ನಿಮಗೊಂದು ವಿಚಾರ ತಿಳಿಸಬೇಕು, ದುರಾದೃಷ್ಟವಶಾತ್ 2021 ಆವೃತ್ತಿಯಲ್ಲಿ ನನ್ನ ಹೋರಾಟ ಕೊನೆಗೊಂಡಿದೆ. ನಾನು ಸಾಕಷ್ಟು ಪಾದದ ನೋವಿನಿಂದ ಬಳಲುತ್ತಿದ್ದು, ಸುದಾರಿಸಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ ಎಂದು ನಡಾಲ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಆಗಸ್ಟ್ 30ರಿಂದ ಆರಂಭವಾಗಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ನಡಾಲ್ ಹಿಂದೆ ಸರಿದಂತೆ ಆಗಿದೆ.
ಆವೆ ಮಣ್ಣಿನಂಕಣದ ರಾಜ ಎಂದೇ ಗುರುತಿಸಲ್ಪಡುವ 35 ವರ್ಷದ ನಡಾಲ್ ಈ ಬಾರಿಯ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ವಿಶ್ವ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್‌ಗೆ ಶರಣಾಗಿದ್ದರು. ಇದಾದ ಬಳಿಕ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಹಾಗೂ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದಲೂ ನಡಾಲ್ ಹಿಂದೆ ಸರಿದಿದ್ದರು.
ರೋಜರ್ ಫೆಡರರ್‌ಗೆ ಮತ್ತೆ ಶಸ್ತ್ರಚಿಕಿತ್ಸೆ, ಟೆನಿಸ್ ಬದುಕು ಅಂತ್ಯ?
ಸದ್ಯ ರೋಜರ್ ಫೆಡರರ್, ನೊವಾಕ್ ಜೋಕೋವಿಚ್ ಹಾಗೂ ರಾಫೆಲ್ ನಡಾಲ್ ತಲಾ 20 ಗ್ರ್ಯಾನ್ ಸ್ಲಾಂ ಟ್ರೋಫಿ ಜಯಿಸಿ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈಗಾಗಲೇ ಗಾಯದ ಸಮಸ್ಯೆಯಿಂದ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಕೂಡಾ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸರ್ಬಿಯಾದ ಜೋಕೋವಿಚ್ 21 ಗ್ರ್ಯಾನ್ ಸ್ಲಾಂ ಗೆಲ್ಲುವ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.