ಫ್ರೆಂಚ್ ಓಪನ್: ನಡಾಲ್, ಜ್ವರೆವ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಪ್ರಿ ಕ್ವಾರ್ಟರ್ ಹಂತ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಅ.04): ದಾಖಲೆಯ 13ನೇ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ರಾಫೆಲ್, ಇಟಲಿಯ ಸ್ಟೇಫಾನೊ ಟ್ರವಾಗ್ಲಿಯಾ ವಿರುದ್ಧ 6-1, 6-4, 6-0 ಸೆಟ್‌ಗಳಲ್ಲಿ ಗೆಲುವನ್ನು ಪಡೆದರು. ಈ ಗೆಲುವಿನೊಂದಿಗೆ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್‌ನಲ್ಲಿ 96ನೇ ಗೆಲುವು ದಾಖಲಿಸಿದರು. ಒಟ್ಟಾರೆ 19 ಗ್ರ್ಯಾನ್‌ಸ್ಲಾಮ್ ಗೆದ್ದಿರುವ ನಡಾಲ್, ಸ್ವಿಟ್ಜರ್‌ಲೆಂಡ್‌ನ ದಾಖಲೆಯ ಗ್ರ್ಯಾನ್‌ಸ್ಲಾಮ್ ವಿಜೇತ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟುವ ಉತ್ಸಾಹದಲ್ಲಿದ್ದಾರೆ. ರೋಜರ್ ಫೆಡರರ್ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಫ್ರೆಂಚ್ ಓಪನ್: ಮೂರನೇ ಸುತ್ತಿಗೆ ಜೋಕೋವಿಚ್ ಲಗ್ಗೆ
ಇನ್ನು ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್, ಇಟಲಿಯ ಮಾರ್ಕೊ ಕೆಚಿನಾಟೊ ವಿರುದ್ಧ 6-1, 7-5, 6-3 ಸೆಟ್‌ಗಳಲ್ಲಿ ಗೆದ್ದು ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ. ಉಳಿದಂತೆ ಗ್ರೀಸ್‌ನ ಸ್ಟೆಫಾನೋ ಟಿಟ್ಸಿಪಾಸ್, ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೊವ್ ಪ್ರಿ ಕ್ವಾರ್ಟರ್‌ಗೇರಿದರು. ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಲ್ಲಿ ಅಮೆರಿಕದ ಸೋಫಿಯಾ ಕೆನಿನ್, ರೋಮೇನಿಯಾದ ಇರಿನಾ ಬಾರಾ ವಿರುದ್ಧ 6-2, 6-0 ಸೆಟ್‌ಗಳಲ್ಲಿ ಗೆಲುವು ಪಡೆದು ಅಂತಿಮ 16ರ ಸುತ್ತಿಗೆ ಲಗ್ಗೆಯಿಟ್ಟರು.