ಥಾಯ್ಲೆಂಡ್ ಓಪನ್: ಸಿಂಧು, ಸಮೀರ್‌ಗೆ ಸೋಲು; ಸಾತ್ವಿಕ್‌ಗೆ ಡಬಲ್ ಯಶಸ್ಸು
ಬ್ಯಾಂಕಾಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ ಸಿಂಧು ಹಾಗೂ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಹೋರಾಟ ಮುಗಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ಯಾಂಕಾಕ್(ಜ.23): ಥಾಯ್ಲೆಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಭಾರತಕ್ಕೆ ಮಿಶ್ರಫಲ ದೊರಕಿದೆ. ತಾರಾ ಶಟ್ಲರ್ ಪಿ.ವಿ. ಸಿಂಧು ಹಾಗೂ ಸಮೀರ್ ವರ್ಮಾ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲುಂಡು ಹೊರಬಿದ್ದಿದ್ದರೆ, ಮಿಶ್ರ ಡಬಲ್ಸ್ ಹಾಗೂ ಪುರುಷರ ಡಬಲ್ಸ್‌ನಲ್ಲಿ ಭಾರತೀಯ ಜೋಡಿಗಳು ಸೆಮಿಫೈನಲ್ ಪ್ರವೇಶಿಸಿವೆ.
ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ರಚನಾಕ್ ಇಂಟನಾನ್ ವಿರುದ್ಧ 13-21, 9-21 ಗೇಮ್‌ಗಳಲ್ಲಿ ಪರಾಭವಗೊಂಡರೆ, ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್, ಡೆನ್ಮಾರ್ಕ್ನ ಆಂಟೋನ್ಸನ್ ವಿರುದ್ಧ 13-21, 21-19, 20-22 ಗೇಮ್‌ಗಳಲ್ಲಿ ವಿರೋಚಿತ ಸೋಲು ಕಂಡರು. ಇದರೊಂದಿಗೆ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.
ಥಾಯ್ಲೆಂಡ್ ಓಪನ್: ಸಿಂಧು, ಸಮೀರ್ ಕ್ವಾರ್ಟರ್‌ಗೆ ಲಗ್ಗೆ
ಸಾತ್ವಿಕ್‌ಗೆ ಡಬಲ್ ಯಶಸ್ಸು: ಮಿಶ್ರ ಡಬಲ್ಸ್ ಕ್ವಾರ್ಟರ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ಜೋಡಿ, ಒಲಿಂಪಿಕ್ ಬೆಳ್ಳಿ ವಿಜೇತ ಮಲೇಷ್ಯಾದ ಪೆಂಗ್ ಸೂನ್ ಮತ್ತು ಲಿಯು ಯಂಗ್ ವಿರುದ್ಧ 18-21, 24-22, 22-20 ಗೇಮ್‌ಗಳಿಂದ ಗೆದ್ದು ಸೆಮೀಸ್‌ಗೇರಿತು. ಇನ್ನು ಪುರುಷರ ಡಬಲ್ಸ್ ಕ್ವಾರ್ಟರ್‌ನಲ್ಲಿ ಚಿರಾಗ್ ಶೆಟ್ಟಿ ಜೊತೆಗೂಡಿ ಸಾತ್ವಿಕ್ ವಿಶ್ವ ನಂ.15 ಮಲೇಷ್ಯಾದ ಟೀ ಯೆ ಇ ಹಾಗೂ ಒಂಗ್ ಯೀ ಸಿನ್ ಜೋಡಿ ಎದುರು 21-18, 24-22 ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಸೆಮೀಸ್ ಪ್ರವೇಶಿಸಿದರು.