ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್; ಭಾರತದ ಸವಾಲು ಅಂತ್ಯ
ಭಾರತದ ಶಟ್ಲರ್‌ಗಳಾದ ಪಿವಿ ಸಿಂಧು, ಸೈನಾನ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತದ ಹೋರಾಟ ಅಂತ್ಯವಾಗಿದೆ.
ಕೌಲಾಲಂಪುರ(ಜ.11): ಒಲಿಂಪಿಕ್ ಪದಕ ವಿಜೇತ ಶಟ್ಲರ್‌ಗಳಾದ ಭಾರತದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲುಂಡು ನಿರ್ಗಮಿಸಿದ್ದಾರೆ. ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ ಬಳಿಕ ಬೆಂಗ್ಳೂರಿಂದ ಪಿಬಿಎಲ್ ಎತ್ತಂಗಡಿ!
2020ರ ಮೊದಲ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ಶಟ್ಲರ್‌ಗಳು ಕ್ವಾರ್ಟರ್ ಹಂತದಲ್ಲೇ ಹೊರಬಿದ್ದಂತಾಗಿದೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಸಿಂಧು ವಿಶ್ವ ನಂ.1, ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ 16-21, 16-21 ಗೇಮ್‌ಗಳಲ್ಲಿ ಪರಾಭವಗೊಂಡರು.
ಸಿಂಧು ವಿರುದ್ಧ ತೈ ತ್ಸು ಯಿಂಗ್‌ಗೆ ಇದು 12ನೇ ಗೆಲುವಾಗಿದೆ. ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ, ಒಲಿಂಪಿಕ್ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ 8-21, 7-21 ಗೇಮ್‌ಗಳ ಹೀನಾಯ ಸೋಲು ಕಂಡರು. ಮರಿನ್ ವಿರುದ್ಧ ಸೈನಾಗಿದು 6ನೇ ಸೋಲು. ಜ.14ರಿಂದ ಇಂಡೋನೇಷ್ಯಾ ಮಾಸ್ಟರ್ಸ್ ಟೂರ್ನಿ ಆರಂಭಗೊಳ್ಳಲಿದ್ದು, ಭಾರತೀಯ ಶಟ್ಲರ್‌ಗಳು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.