ಬೆಂಗಳೂರು: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಆಯೋಜನೆಗೆ ಕ್ರೀಡಾ ಇಲಾಖೆ ಅವಕಾಶ ನಿರಾಕರಿಸಿದೆ. ಫೆ.3ರಿಂದ ಮಿನಿ ಒಲಿಂಪಿಕ್ಸ್‌ ನಡೆಯಲಿರುವ ಕಾರಣ, ಫೆ.5 ರಿಂದ 9 ರವರೆಗೆ ನಡೆಯಬೇಕಿದ್ದ ಬೆಂಗಳೂರು ಚರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಬೆಂಗಳೂರಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ.

ಡಿ.24 ರಂದು ನಡೆದ ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಸಭೆಯಲ್ಲಿ ಮಿನಿ ಒಲಿಂಪಿಕ್ಸ್‌ ಕೂಟದ ದಿನಾಂಕವನ್ನು ನಿಗದಿಗೊಳಿಸಲಾಯಿತು. ಇದಕ್ಕೂ ಮುಂಚಿತವಾಗಿಯೇ ಸುಮಾರು 2 ತಿಂಗಳು ಮುನ್ನ ಪಿಬಿಎಲ್‌ ಆಡಳಿತ ಮಂಡಳಿ ಒಳಾಂಗಣ ಕ್ರೀಡಾಂಗಣವನ್ನು ನೀಡಲು ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸಿದ್ದಾಗಿ ಬೆಂಗಳೂರು ರ್ಯಾಪ್ಟರ್ಸ್‌ ತಂಡದ ಕೋಚ್‌ ಅರವಿಂದ್‌ ಭಟ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಆದರೂ ಕೆಒಎ ಸಭೆಯಲ್ಲಿ ಮಿನಿ ಒಲಿಂಪಿಕ್ಸ್‌ನ ಕಾರಣ ಹೇಳಿ ಪಿಬಿಎಲ್‌ ಅನ್ನು ಬೆಂಗಳೂರಿನಿಂದ ಎತ್ತಂಗಡಿ ಮಾಡಲಾಗಿದೆ.

ಜನವರಿ 20 ರಿಂದ ಪಿಬಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್ ಬೆಂಗಳೂರು ರ್ಯಾಪ್ಟರ್ಸ್ ಸೇರಿದಂತೆ 7 ತಂಡಗಳ ಈ ಬಾರಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.