Asianet Suvarna News Asianet Suvarna News

PKL 8 in Strict Bio Bubble: ಬಯೋ ಬಬಲ್ ಭದ್ರಕೋಟೆಯಲ್ಲಿ ಪ್ರೊ ಕಬಡ್ಡಿ ಕಲರವ..!

* 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಡಿಸೆಂಬರ್ 22ರಿಂದ ಆರಂಭ

* ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿದೆ ಸಂಪೂರ್ಣ ಕಬಡ್ಡಿ ಟೂರ್ನಿ

* ಕೋವಿಡ್ ಭೀತಿಯ ನಡುವೆಯೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಟೂರ್ನಿ ಆರಂಭ

Pro Kabaddi Season 8 Tournament Will be Held Strict Bio Bubble in Bengaluru kvn
Author
Bengaluru, First Published Dec 8, 2021, 12:58 PM IST

-ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಡಿ.08): ಪ್ರೊ ಕಬಡ್ಡಿ ಲೀಗ್‌ನ (Pro Kabaddi League) 8ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಹೆಚ್ಚೂ ಕಡಿಮೆ 2 ವರ್ಷಗಳ ಬಳಿಕ ಟೂರ್ನಿ ನಡೆಯಲಿದ್ದು, ಫ್ರಾಂಚೈಸಿಗಳು, ಆಯೋಜಕರು, ಆಟಗಾರರು ಉತ್ಸುಕಗೊಂಡಿದ್ದಾರೆ. ಕೋವಿಡ್‌ ಭೀತಿ (COVID 19 Threat) ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಟೂರ್ನಿ ಒಂದೇ ನಗರದಲ್ಲಿ, ಹೋಟೆಲ್‌ ಆವರಣದಲ್ಲಿ ನಡೆಯಲಿದೆ. ಒಂದೇ ಸ್ಥಳದಲ್ಲಿ 3 ತಿಂಗಳುಗಳ ಕಾಲ ಟೂರ್ನಿ ಆಯೋಜಿಸುವುದು ಪ್ರೊ ಕಬಡ್ಡಿಯ ಆಯೋಜಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು. ಇದಕ್ಕಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ವ್ಯವಸ್ಥೆಯನ್ನು ಬಹಳ ಲೆಕ್ಕಾಚಾರದೊಂದಿಗೆ ಕೈಗೊಳ್ಳಲಾಗುತ್ತಿದೆ.

ಬೆಂಗಳೂರಿನ (Bengaluru) ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ ಹಾಗೂ ಕನ್ವೆಷನ್‌ ಸೆಂಟರ್‌ನಲ್ಲಿ ಇಡೀ ಟೂರ್ನಿ ನಡೆಯಲಿದೆ. 12 ತಂಡಗಳು ಒಂದೇ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದು, ಇದೇ ಹೋಟೆಲ್‌ನಲ್ಲಿರುವ ಕನ್ವೆಷನ್‌ ಸೆಂಟರ್‌(ಸಭಾಂಗಣ)ನಲ್ಲಿ ಪಂದ್ಯಗಳು ನಡೆಯಲಿವೆ. ಇದೇ ಡಿಸೆಂಬರ್ 22ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ

ಕಠಿಣ ಬಯೋ-ಬಬಲ್‌ ವ್ಯವಸ್ಥೆ

ಪ್ರತಿ ತಂಡಕ್ಕೆ ಹೋಟೆಲ್‌ನ ಒಂದೆರಡು ಮಹಡಿಗಳನ್ನು ಮೀಸಲಿಡಲಾಗುತ್ತದೆ. ಆಟಗಾರರಿಗೆ ಆ ಮಹಡಿಗಳಲ್ಲಿ ಕೊಠಡಿಗಳನ್ನು ನೀಡಲಾಗುತ್ತದೆ. ನಿಗದಿಪಡಿಸಿದ ಮಹಡಿಗಳನ್ನು ಬಿಟ್ಟು ಆಟಗಾರರು, ತಂಡದ ಸಹಾಯಕ ಸಿಬ್ಬಂದಿ ಬೇರೆಡೆ ಹೋಗುವಂತಿಲ್ಲ. ಇದೊಂದು ರೀತಿ ಟೋಕಿಯೋ ಒಲಿಂಪಿಕ್ಸ್‌ನ (Tokyo Olympics) ಕ್ರೀಡಾಗ್ರಾಮದಲ್ಲಿ ಮಾಡಿದ್ದ ವ್ಯವಸ್ಥೆಯಂತಿದೆ. ಅಲ್ಲಿಯೂ ಪ್ರತಿ ದೇಶಗಳಿಗೆ ಒಂದೊಂದು ಮಹಡಿಗಳಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

ಆಟಗಾರರು ಜಿಮ್‌, ಈಜುಕೊಳ ಬಳಸಲು ಕೆಲ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಸಾಧ್ಯವಾದಷ್ಟು ತಮ್ಮ ಕೊಠಡಿಗಳಲ್ಲೇ ವ್ಯಾಯಾಮ ಮಾಡುವಂತೆ ಸೂಚಿಸಲಾಗಿದೆ. ಆಟಗಾರರಿಗೆ ಪ್ರತಿ 2 ಇಲ್ಲವೇ 3 ದಿನಕ್ಕೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ಆಟಗಾರರು ಅಭ್ಯಾಸ, ಆಟದ ಸಮಯ ಹೊರತುಪಡಿಸಿ ಉಳಿದೆಡೆ ಇರುವಾಗ ಮಾಸ್ಕ್‌ ಧರಿಸುವಂತೆ ಸೂಚಿಸಲಾಗಿದೆ.

ಅಭ್ಯಾಸಕ್ಕೆ 4 ಪ್ರತ್ಯೇಕ ಅಂಕಣ

ಹೋಟೆಲ್‌ನ ಕೆಳಮಹಡಿ ವಿಶಾಲವಾಗಿದ್ದು, ಅಲ್ಲಿ ತಂಡಗಳ ಅಭ್ಯಾಸಕ್ಕೆಂದೇ ನಾಲ್ಕು ಪ್ರತ್ಯೇಕ ಕೋರ್ಟ್‌(ಅಂಕಣ)ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಪ್ರತಿ ತಂಡದ ಅಭ್ಯಾಸಕ್ಕೂ ಆಯೋಜಕರು ವೇಳಾಪಟ್ಟಿ ಸಿದ್ಧಪಡಿಸಲಿದ್ದು, ಅದರ ಪ್ರಕಾರವೇ ಅಭ್ಯಾಸ ನಡೆಸಬೇಕಿದೆ. ಒಂದೇ ಸ್ಥಳದಲ್ಲಿ ಅಭ್ಯಾಸ ನಡೆಯುವ ಕಾರಣ ಒಂದು ತಂಡದ ರಣತಂತ್ರ ಮತ್ತೊಂದು ತಂಡಕ್ಕೆ ತಿಳಿಯುವ ಸಾಧ್ಯತೆಯೂ ಇರಲಿದೆ.

ಜಿಪಿಎಸ್‌ ಟ್ರ್ಯಾಕರ್‌ ಬಳಕೆ ಇಲ್ಲ

ಐಪಿಎಲ್‌ (IPL) ವೇಳೆ ಆಟಗಾರರ ಓಡಾಟದ ಮೇಲೆ ಕಣ್ಣಿಡಲು ಜಿಪಿಎಸ್‌ ಟ್ರ್ಯಾಕರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ಪ್ರೊ ಕಬಡ್ಡಿಯಲ್ಲಿ ಆ ವ್ಯವಸ್ಥೆ ಇಲ್ಲ. ಐಪಿಎಲ್‌ನಲ್ಲಿ ಆಟಗಾರರು ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ, ಕ್ರೀಡಾಂಗಣದಿಂದ ಹೋಟೆಲ್‌ಗೆ ಪ್ರಯಾಣಿಸುತ್ತಿದ್ದರು. ಬಯೋಬಬಲ್‌ನಿಂದ ಹೊರ ಹೋಗುವ ಸಾಧ್ಯತೆ ಇರುತ್ತಿತ್ತು. ಆದರೆ ಪ್ರೊ ಕಬಡ್ಡಿಯಲ್ಲಿ ಆಟಗಾರರು ಹೋಟೆಲ್‌ ಬಿಟ್ಟು ಹೊರಕ್ಕೆ ಕಾಲಿಡಲು ಅವಕಾಶವೇ ಇಲ್ಲ. ಹೀಗಾಗಿ ಜಿಪಿಎಸ್‌ ಟ್ರ್ಯಾಕರ್‌ನ ಅವಶ್ಯಕತೆ ಇರುವುದಿಲ್ಲ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Pro Kabaddi League: ಬೆಂಗಳೂರಿನಲ್ಲಿ ಕಬಡ್ಡಿ ತಂಡಗಳ ಕ್ವಾರಂಟೈನ್‌ ಆರಂಭ

ಇದಲ್ಲದೇ ಪಂದ್ಯಗಳ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್ (Star Sports) ವಾಹಿನಿಯ ಸಿಬ್ಬಂದಿಯನ್ನು ಪ್ರತ್ಯೇಕ ಹೋಟೆಲ್‌ನಲ್ಲ ಇರಿಸಲು ಆಯೋಜಕರು ನಿರ್ಧರಿಸಿದ್ದಾರೆ. ಟೂರ್ನಿ ನಡೆಯುವ ಹೋಟೆಲ್‌ನಲ್ಲಿ ಕೇವಲ ತಂಡಗಳು ಮಾತ್ರ ಉಳಿದುಕೊಳ್ಳಲಿವೆ. ಆಟಗಾರರು, ಸಹಾಯಕ ಸಿಬ್ಬಂದಿ ಇತರರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಬಯೋ ಬಬಲ್‌ನೊಳಗೆ ನಡೆದ ತಂಡಗಳ ಅಭ್ಯಾಸ ಶಿಬಿರ

ಸೆಪ್ಟೆಂಬರ್‌ನಲ್ಲಿ ಆಟಗಾರರು ಪ್ರಕ್ರಿಯೆ ನಡೆದ ನಂತರ ಎಲ್ಲಾ ತಂಡಗಳು ಅಕ್ಟೋಬರ್‌ ಅಂತಿಮ ವಾರ, ನವೆಂಬರ್‌ ಮೊದಲ ವಾರದಲ್ಲಿ ಅಭ್ಯಾಸ ಶಿಬಿರಗಳನ್ನು ಆರಂಭಿಸಿದ್ದವು. ಬೆಂಗಳೂರು ಬುಲ್ಸ್‌ (Bengaluru Bulls) ಪುಣೆಯಲ್ಲಿ ಶಿಬಿರ ನಡೆಸಿದರೆ, ಬೆಂಗಾಲ್‌ ವಾರಿಯ​ರ್ಸ್ (Bengal Warriors) ಬೆಂಗಳೂರಿನಲ್ಲಿ ಶಿಬಿರ ನಡೆಸಿತು. ಜೈಪುರ ತಂಡ ಡೆಹರಾಡೂನ್‌ನಲ್ಲಿ, ಯು ಮುಂಬಾ (U Mumba) ಮುಂಬೈನಲ್ಲಿ, ಹರ್ಯಾಣ ಸ್ಟೀಲ​ರ್ಸ್ (Haryana Steelers) ಸೋನೆಪತ್‌ನಲ್ಲಿ, ಗುಜರಾತ್‌ ತಂಡ ಅಹಮದಾಬಾದ್‌ನಲ್ಲಿ, ಯು.ಪಿ.ಯೋಧಾ ನೋಯ್ಡಾದಲ್ಲಿ ಶಿಬಿರ ಆಯೋಜಿಸಿದ್ದವು. ಅಭ್ಯಾಸ ಶಿಬಿರಕ್ಕೂ ಬಯೋಬಬಲ್‌ ವ್ಯವಸ್ಥೆ ಮಾಡಲಾಗಿತ್ತು. ಆಗಲೂ ಆಟಗಾರರು ನಿರಂತರವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗುತ್ತಿದ್ದರು ಎಂದು ತಿಳಿದುಬಂದಿದೆ.

ಬಯೋಬಬಲ್‌ ಬಗ್ಗೆ ಚಿಂತೆಯಿಲ್ಲ, ಲೀಗ್‌ ಶುರುವಾಗ್ತಿರೋದೆ ಖುಷಿ

ಪ್ರೊ ಕಬಡ್ಡಿ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದೆವು. ಲೀಗ್‌ ಆರಂಭಗೊಳ್ಳುತ್ತಿರುವುದು ಬಹಳ ಖುಷಿ ನೀಡಿದೆ. ಬಯೋಬಬಲ್‌ನೊಳಗೆ 3-4 ತಿಂಗಳು ಇರಬೇಕು ಎನ್ನುವ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲ ಎಂದು ಜೈಪುರ ಪಿಂಕ್‌ಪ್ಯಾಂಥ​ರ್ಸ್‌ ತಂಡದ ನಾಯಕ, ತಾರಾ ಆಲ್ರೌಂಡರ್‌ ದೀಪಕ್‌ ನಿವಾಸ್‌ ಹೂಡಾ (Deepak Niwas Hooda) ತಿಳಿಸಿದ್ದಾರೆ.

Pro Kabaddi League:ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಡಿ.22ರಿಂದ ಬೆಂಗಳೂರಿನಲ್ಲಿ ಟೂರ್ನಿ ಆರಂಭ!

ಲೀಗ್‌ಗೆ ತಮ್ಮ ತಂಡ ನಡೆಸುತ್ತಿರುವ ಸಿದ್ಧತೆಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡ ಅವರು, ‘ನಾವೀಗಾಗಲೇ ಒಂದೂವರೆ ತಿಂಗಳಿಂದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದೇವೆ. ಶಿಬಿರವೂ ಬಯೋಬಬಲ್‌ನೊಳಗೇ ನಡೆಯಿತು. ಬಹುತೇಕ ಪ್ರತಿನಿತ್ಯ ಕೋವಿಡ್‌ ಪರೀಕ್ಷೆಗೆ ಒಳಗಾಗುತ್ತಿದ್ದೇವೆ. ಕೋವಿಡ್‌ನಿಂದ ದೂರವಿರಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನೂ ಪಾಲಿಸುತ್ತಿದ್ದೇವೆ’ ಎಂದರು.

ರೆಫ್ರಿಗಳಿಗೆ ಆನ್‌ಲೈನ್‌ ಕಾರ್ಯಾಗಾರ

ಪ್ರೊ ಕಬಡ್ಡಿಯಲ್ಲಿ ಕಾರ‍್ಯನಿರ್ವಹಿಸಲಿರುವ ರೆಫ್ರಿಗಳಿಗೆ ಕಳೆದ ಒಂದೂವರೆ ತಿಂಗಳಿಂದಲೇ ಆನ್‌ಲೈನ್‌ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಹಿಂದಿನ ಆವೃತ್ತಿಗಳ ಪಂದ್ಯಗಳಲ್ಲಿ ಆದ ಸನ್ನಿವೇಶಗಳನ್ನು ಉದಾಹರಣೆಯಾಗಿರಿಸಿಕೊಂಡು ಮಾಹಿತಿ ವಿನಿಮಯ ನಡೆಸಲಾಗಿದೆ. ಈ ಆವೃತ್ತಿಯು ಬಯೋಬಬಲ್‌ನೊಳಗೆ ನಡೆಯಲಿರುವ ಕಾರಣ, ರೆಫ್ರಿ ಹಾಗೂ ಪಂದ್ಯದ ಅಧಿಕಾರಿಗಳಿಗೆ ಅದರ ಪರಿಚಯ ಮಾಡಿಕೊಡಲಾಗಿದೆ. 3 ತಿಂಗಳು ಒಂದೇ ಸ್ಥಳದಲ್ಲಿ ಕಳೆಯಬೇಕಿದ್ದು, ಮಾನಸಿಕವಾಗಿ ಸಿದ್ಧರಾಗಿ ಬರುವಂತೆಯೂ ಸೂಚಿಸಲಾಗಿದೆ ಎಂದು ಹಿರಿಯ ರೆಫ್ರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
 

Follow Us:
Download App:
  • android
  • ios