ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ವೇಳಾಪಟ್ಟಿ ಫಿಕ್ಸ್..!
* 8ನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ದಿನಗಣನೆ ಆರಂಭ
* ಅಗಸ್ಟ್ 29ರಿಂದ 31ರವರೆಗೆ ನಡೆಯಲಿದೆ ಆಟಗಾರರ ಹರಾಜು
* 12 ಫ್ರಾಂಚೈಸಿಗಳಿಂದ ಕಬಡ್ಡಿ ಆಟಗಾರರ ಖರೀದಿ
ಮುಂಬೈ(ಆ.16): ಪ್ರೊ ಕಬಡ್ಡಿ 8ನೇ ಆವೃತ್ತಿಯ ಆಟಗಾರರ ಹರಾಜು ಆಗಸ್ಟ್ 29ರಿಂದ 31ರ ವರೆಗೂ ಮುಂಬೈನಲ್ಲಿ ನಡೆಯಲಿದೆ. ಹರಾಜಿನಲ್ಲಿ 500ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದು, 12 ತಂಡಗಳು ಆಟಗಾರರನ್ನು ಖರೀದಿಸಲಿವೆ. 8ನೇ ಆವೃತ್ತಿಯನ್ನು ಈ ವರ್ಷ ಡಿಸೆಂಬರ್‌ನಲ್ಲಿ ನಡೆಸಲು ಚಿಂತನೆ ನಡೆಸುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ತಾಂತ್ರಿಕ ಹಾಗೂ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಪ್ರೊ ಕಬಡ್ಡಿ ಟೂರ್ನಿ ಆಯೋಜನೆಗೊಂಡಿರಲಿಲ್ಲ. 2019ರಲ್ಲಿ ನಡೆದ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಯು ಆರು ಕಬಡ್ಡಿ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದಾಗಿದೆ.
905 ಕೋಟಿ ರುಪಾಯಿಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಸ್ಟಾರ್ ಸ್ಪೋರ್ಟ್ಸ್ ಪಾಲು..!
ಆಟಗಾರರ ಹರಾಜಿನಲ್ಲಿ ದೇಸಿ, ವಿದೇಶಿ ಹಾಗೂ ಹೊಸ ಆಟಗಾರರು ಪಾಲ್ಗೊಳ್ಳಲಿದ್ದು, ‘ಎ’, ‘ಬಿ’, ‘ಸಿ’ ಹಾಗೂ ‘ಡಿ’ ಎಂದು 4 ದರ್ಜೆಗಳಾಗಿ ವಿಂಗಡಿಸಲಾಗಿದೆ. ‘ಎ’ ದರ್ಜೆ ಆಟಗಾರರ ಮೂಲ ಬೆಲೆ 30 ಲಕ್ಷ ರುಪಾಯಿಗಳಾಗಿರಲಿದ್ದು, ‘ಬಿ’ ದರ್ಜೆ ಆಟಗಾರರ ಮೂಲ ಬೆಲೆ 20 ಲಕ್ಷ ರುಪಾಯಿ ಆಗಿರಲಿದೆ. ‘ಸಿ’ ದರ್ಜೆಗೆ 10 ಲಕ್ಷ ರುಪಾಯಿ ‘ಡಿ’ ದರ್ಜೆಗೆ 6 ಲಕ್ಷ ರುಪಾಯಿ ಮೂಲ ಬೆಲೆ ನಿಗದಿ ಮಾಡಲಾಗಿದೆ. ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ ಗರಿಷ್ಠ 4.4 ಕೋಟಿ ರು. ಬಳಸಬಹುದಾಗಿದೆ.