905 ಕೋಟಿ ರುಪಾಯಿಗೆ ಪ್ರೊ ಕಬಡ್ಡಿ ಪ್ರಸಾರ ಹಕ್ಕು ಸ್ಟಾರ್ ಸ್ಪೋರ್ಟ್ಸ್ ಪಾಲು..!
ದೇಶದ ಎರಡನೇ ಅತಿ ಜನಪ್ರಿಯ ಕ್ರೀಡೆ ಎನಿಸಿರುವ ಪ್ರೊ ಕಬಡ್ಡಿ ಮಾಧ್ಯಮ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.21): ಪ್ರೊ ಕಬಡ್ಡಿಯ ಮಾಧ್ಯಮ ಪ್ರಸಾರ ಹಕ್ಕು ಮತ್ತೆ ಸ್ಟಾರ್ ಸ್ಪೋರ್ಟ್ಸ್ ಪಾಲಾಗಿದೆ. 5 ವರ್ಷಗಳಿಗೆ (2021ರಿಂದ 2025) 905 ಕೋಟಿ ರುಪಾಯಿಗೆ ಬಿಡ್ ಮಾಡಿ ಪ್ರಸಾರ ಹಕ್ಕನ್ನು ಸ್ಟಾರ್ ಸಂಸ್ಥೆ ಪಡೆದುಕೊಂಡಿದೆ.
ಇದೇ ಮೊದಲ ಬಾರಿಗೆ ಮಾಧ್ಯಮ ಪ್ರಸಾರ ಹಕ್ಕನ್ನು ಇ-ಹರಾಜು ನಡೆಸಲಾಗಿತ್ತು. ಹರಾಜಿನ ಮೂಲ ಬೆಲೆ 900 ಕೋಟಿ ರು.ಗೆ ನಿಗದಿ ಮಾಡಲಾಗಿತ್ತು. 6 ಪ್ರತಿಷ್ಠಿತ ಸಂಸ್ಥೆಗಳು ಆಸಕ್ತಿ ತೋರಿದ್ದವಾದರೂ, ಹರಾಜಿನಲ್ಲಿ ಪಾಲ್ಗೊಂಡಿದ್ದು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಮಾತ್ರ. ಮೂಲಬೆಲೆಗೆ ಕೇವಲ 5 ಕೋಟಿ ರು. ಹೆಚ್ಚುವರಿ ಸೇರಿಸಿ ಹಕ್ಕು ಖರೀದಿಸಿದೆ. ಲೀಗ್‌ನ ಮಾಲಿಕತ್ವದಲ್ಲಿ ಶೇ.74 ಪಾಲು ಹೊಂದಿರುವ ಸ್ಟಾರ್ ಸಂಸ್ಥೆಯೇ ಈ ಬಾರಿಯೂ ಮಾಧ್ಯಮ ಹಕ್ಕು ಪಡೆದುಕೊಂಡಿದೆ.
ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಆಯೋಜಕರು
ಹರಾಜು ಪ್ರಕ್ರಿಯೆ ಬಗ್ಗೆ ಕೆಲ ಫ್ರಾಂಚೈಸಿ ಮಾಲಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೀಗ್‌ನ ನಿಜವಾದ ಮೌಲ್ಯಕ್ಕಿಂತ ಕಡಿಮೆ ಮೊತ್ತಕ್ಕೆ ಪ್ರಸಾರ ಹಕ್ಕು ಮಾರಾಟವಾಗಿದೆ ಎಂದು ಮಾಲಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಯು ಮುಂಬಾ ತಂಡದ ಮಾಲಿಕ ರೋನಿ ಸ್ಕೂರ್ವಾಲಾ ತಂಡವನ್ನು ಮಾರಾಟ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.