PKL 2021 : ಬೆಂಗಳೂರು ಬುಲ್ಸ್ ಗೆ ಸೋಲಿನ ಗುದ್ದು, ತೆಲುಗು-ತಮಿಳ್ ಸೂಪರ್ ಟೈ
ಯು ಮುಂಬಾ ವಿರುದ್ಧ ದೊಡ್ಡ ಅಂತರದ ಸೋಲು ಕಂಡ ಬೆಂಗಳೂರು ಬುಲ್ಸ್
ತಮಿಳ್ ತಲೈವಾಸ್-ತೆಲುಗು ಟೈಟಾನ್ಸ್ ಪಂದ್ಯ ಟೈ ನಲ್ಲಿ ಅಂತ್ಯ
ಯುಪಿ ಯೋಧಾಕ್ಕೆ ಸೋಲಿನ ರುಚಿ ನೀಡಿದ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್
ಬೆಂಗಳೂರು (ಡಿ.22): ಕೋವಿಡ್-19 ಕಾರಣದಿಂದಾಗಿ ಒಂದು ವರ್ಷದ ಬ್ರೇಕ್ ಬಳಿಕ ಬಂದಿರುವ ಪ್ರೊ ಕಬಡ್ಡಿ ಲೀಗ್ ನ (Pro Kabaddi League ) ಎಂಟನೇ ಆವೃತ್ತಿಗೆ ಭರ್ಜರಿ ಆರಂಭ ಸಿಕ್ಕಿದೆ. ಮೊದಲ ದಿನದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ಸೋಲಿನ ರುಚಿ ಕಂಡರೆ, ತಮಿಳ್ ತಲೈವಾಸ್ (Tamil Thalaivas) ಹಾಗೂ ತೆಲುಗು ಟೈಟಾನ್ಸ್ (Telugu Titans) ನಡುವಿನ ಹೈ ವೋಲ್ಟೇಜ್ ಮುಖಾಮುಖಿ ಟೈ (Tie) ನಲ್ಲಿ ಅಂತ್ಯ ಕಂಡಿತು. ದಿನದ ಅಂತಿಮ ಪಂದ್ಯದಲ್ಲಿ ಬಹುತೇಕ ಕರ್ನಾಟಕ ಆಟಗಾರರನ್ನೇ ಹೊಂದಿರುವ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors)ತಂಡ ಯುಪಿ ಯೋಧಾ (UP Yoddha)ತಂಡದ ಸವಾಲನ್ನು ಸುಲಭವಾಗಿ ಎದುರಿಸುವ ಮೂಲಕ ಶುಭಾರಂಭ ಕಂಡಿತು.
ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ( Kanteerava Indoor Stadium)ಬುಧವಾರ ಆರಂಭಗೊಂಡ 8ನೇ ಸೀಸನ್ ನ ಪ್ರೊ ಕಬಡ್ಡಿಯಲ್ಲಿ ಮೂರು ಪಂದ್ಯಗಳು ನಿಗದಿಯಾಗಿದ್ದವು. ಮಾಜಿ ಚಾಂಪಿಯನ್ ಗಳಾದ ಯು ಮುಂಬಾ (U Mumba) ಹಾಗೂ ಬೆಂಗಳೂರು ಬುಲ್ಸ್ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಯು ಮುಂಬಾ 46-30 ಅಂಕಗಳ ಭರ್ಜರಿ ಗೆಲುವು ಕಂಡಿತು. ದಿನದ 2ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಕೊನೆಯ ರೈಡ್ ನಲ್ಲಿ ಎಡವಿದ್ದರಿಂದ ತೆಲುಗು ಟೈಟಾನ್ಸ್ ವಿರುದ್ಧ ಟೈ ಫಲಿತಾಂಶಕ್ಕೆ ಸಮಾಧಾನ ಪಟ್ಟಿತು. ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 38-33 ಅಂಕಗಳಿಂದ ಯುಪಿ ಯೋಧಾ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತು.
ಯು ಮುಂಬಾ ತಂಡದ ಭರ್ಜರಿ ಗೆಲುವಿಗೆ ಕಾರಣರಾಗಿದ್ದು ರೈಡರ್ ಅಭಿಷೇಕ್ ಸಿಂಗ್ (Abhishek Singh). 15 ರೈಡ್ ಪಾಯಿಂಟ್ ಸೇರಿದಂತೆ ಒಟ್ಟು 19 ಅಂಕ ಸಂಪಾದನೆ ಮಾಡಿದ ಅಭಿಷೇಕ್ ಸಿಂಗ್ ಏಕಾಂಗಿಯಾಗಿ ತಂಡದ ಜಯಕ್ಕೆ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಫಜಲ್ ಅತ್ರಾಚಲಿ ನೇತೃತ್ವದ ತಂಡದ ಡಿಫೆನ್ಸ್ ವಿಭಾಗ ಬೆಂಗಳೂರು ಬುಲ್ಸ್ ತಂಡ ಒಂದೊಂದು ಅಂಕ ಸಂಪಾದನೆ ಮಾಡಲು ಪರದಾಡುವಂತೆ ಮಾಡಿದರು. ಇನ್ನೊಂದೆಡೆ ಸ್ಟಾರ್ ರೈಡರ್ ಪವನ್ ಶೇರಾವತ್ (Pawan Sehrawat) ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟು ಕಣಕ್ಕಿಳಿದಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಅವರು ನಿರಾಸೆ ಮೂಡಿಸಿದರು.
ಅಗ್ರ ರೈಡರ್ ಗಳಾಗಿದ್ದ ಪವನ್ ಕುಮಾರ್ ಹಾಗೂ ಚಂದ್ರನ್ ರಂಜಿತ್ ತಲಾ 13 ಹಾಗೂ 12 ಅಂಕ ಸಂಪಾದನೆ ಮಾಡಿದರೆ, ತಂಡಕ್ಕೆ ಮೂರನೇ ರೈಡರ್ ಕೊರತೆ ಅತೀವವಾಗಿ ಕಾಡಿತು. ಡಿಫೆನ್ಸ್ ವಿಭಾಗದಲ್ಲಿ ಮಹೇಂದರ್ ಸಿಂಗ್, ಸೌರಭ್ ನಂದಾಲ್ ಕನಿಷ್ಠ ಒಂದೇ ಒಂದು ಅಂಕ ಸಂಪಾದಿಸಲು ಯಶಸ್ವಿಯಾಗಲಿಲ್ಲ.
PKL 2021: ಲೇ.. ಪಂಗಾ..! ಇಂದಿನಿಂದ ಪ್ರೊ ಕಬಡ್ಡಿ ಕಲರವ ಶುರು
ಕೋವಿಡ್-19 ಕಾರಣದಿಂದಾಗಿ ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಗಳಿಗೆ ಇದರಿಂದ ಯಾವುದೇ ಸಮಸ್ಯೆ ಆದಂತೆ ಕಾಣಲಿಲ್ಲ. ಹಾಲಿ ಸೀಸನ್ ನ ಮೊದಲ ರೈಡ್ ನಲ್ಲಿ ಹೈ ಫ್ಲೈಯರ್ ಪವನ್ ಕುಮಾರ್ ಶೇರಾವತ್ ಅವರನ್ನು ಯು ಮುಂಬಾ ತಂಡದ ಹರೇಂದ್ರ ಕುಮಾರ್ ಯಶಸ್ವಿಯಾಗಿ ಟ್ಯಾಕಲ್ ಮಾಡಿದರು. ಮೊದಲ ಕೆಲವು ನಿಮಿಷಗಳಲ್ಲಿಯೇ ಪಂದ್ಯದ ಮೇಲೆ ಯು ಮುಂಬಾ ತಂಡ ಸಂಪೂರ್ಣವಾಗಿ ಹಿಡಿತ ಸಾಧಿಸಲು ಅಭಿಷೇಕ್ ಸಿಂಗ್ ನೆರವಾದರು.
ತೆಲುಗು ಟೈಟಾನ್ಸ್-ತಮಿಳ್ ತಲೈವಾಸ್ ಪಂದ್ಯ ಟೈ: ಎರಡೂ ಅವಧಿಯ ಆಟದಲ್ಲಿ ಸ್ಥಿರ ನಿರ್ವಹಣೆ ತೋರಿದ ತೆಲುಗು ಟೈಟಾನ್ಸ್ ತಂಡ ಪಂದ್ಯದ ಕೊನೇ ಹಂತದಲ್ಲಿ ಸೋಲಿನಿಮದ ಪಾರಾಗಿ ತಮಿಳ್ ತಲೈವಾಸ್ ವಿರುದ್ಧ ಟೈ ಸಾಧಿಸುವಲ್ಲಿ ಯಶ ಕಂಡಿತು. ಮೊದಲ ಅವಧಿಯ ಆಟದಲ್ಲಿ 21-23 ರಿಂದ ತಮಿಳ್ ತಲೈವಾಸ್ ಮುನ್ನಡೆ ಕಂಡಿದ್ದರೂ, 2ನೇ ಅವಧಿಯ ಆಟದಲ್ಲಿ 19 ಅಂಕ ಕಲೆಹಾಕುವಲ್ಲಿ ಯಶ ಕಂಡ ತೆಲುಗು ಟೈಟಾನ್ಸ್ ರೋಚಕ ಟೈ ಸಾಧಿಸುವಲ್ಲಿ ಯಶ ಕಂಡಿತು. ತೆಲುಗು ಟೈಟಾನ್ಸ್ ಪರವಾಗಿ ಅಗ್ರ ರೈಡರ್ ಹಾಗೂ ನಾಯಕ ಸಿದ್ಧಾರ್ಥ್ ದೇಸಾಯಿ 11 ಅಂಕ ಸಂಪಾದನೆ ಮಾಡಿದರೆ, ತಮಿಳ್ ತಲೈವಾಸ್ ಪರವಾಗಿ ರೈಡರ್ ಮಂಜೀತ್ 12 ಅಂಕ ಸಂಪಾದಿಸಿದರು.
ಬೆಂಗಾಲ್ ವಾರಿಯರ್ಸ್ ಶುಭಾರಂಭ: ಬಹುತೇಕ ಕರ್ನಾಟಕ ಆಟಗಾರರನ್ನೇ ಹೊಂದಿರುವ ಬೆಂಗಾಲ್ ವಾರಿಯರ್ಸ್ 38-33 ಅಂಕಗಳಿಂದ ಪ್ರದೀಪ್ ನರ್ವಾಲ್ ಇರುವ ಯುಪಿ ಯೋಧಾ ತಂಡವನ್ನು ಸೋಲಿಸಿತು. ಬೆಂಗಾಲ್ ವಾರಿಯರ್ಸ್ ಪರವಾಗಿ ಮೊಹಮದ್ ನಭೀಬಕಾಶ್ (11) ಸೂಪರ್ ನಿರ್ವಹಣೆ ತೋರಿದರೆ, ಕರ್ನಾಟಕದ ಸುಖೇಶ್ ಹೆಗ್ಡೆ (8), ಜೆ. ದರ್ಶನ್ (3) ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.