Asianet Suvarna News Asianet Suvarna News

PKL 2021: ಲೇ.. ಪಂಗಾ..! ಇಂದಿನಿಂದ ಪ್ರೊ ಕಬಡ್ಡಿ ಕಲರವ ಶುರು

* 20 ತಿಂಗಳ ಬಳಿಕ ದೇಶದಲ್ಲಿ ಕಬಡ್ಡಿ ಕಲರವ ಆರಂಭ

* 8ನೇ ಆವೃತ್ತಿಯ ಸಂಪೂರ್ಣ ಪಿಕೆಎಲ್‌ಗೆ ಬೆಂಗಳೂರು ಆತಿಥ್ಯ

* ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್‌ಗೆ ಯು ಮುಂಬಾ ಸವಾಲು

PKL 2021 Bengaluru Bulls take on U Mumba in the Inaugural Match kvn
Author
Bengaluru, First Published Dec 22, 2021, 8:37 AM IST

ಬೆಂಗಳೂರು(ಡಿ.22): ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ (Pro Kabaddi League) 8ನೇ ಆವೃತ್ತಿಗೆ ಬುಧವಾರ ಚಾಲನೆ ಸಿಗಲಿದೆ. 20 ತಿಂಗಳ ಬಳಿಕ ದೇಶದಲ್ಲಿ ಕಬಡ್ಡಿ ಹಬ್ಬ ನಡೆಯಲಿದ್ದು, ಮುಂದಿನ 3 ತಿಂಗಳು ಅಭಿಮಾನಿಗಳಿಗೆ ಬರಪೂರ ಮನರಂಜನೆ ದೊರೆಯಲಿದೆ. ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3 ಪಂದ್ಯಗಳನ್ನು ನಡೆಸುವ ಪ್ರಯೋಗಕ್ಕೆ ಆಯೋಜಕರು ಕೈಹಾಕಿದ್ದಾರೆ. ಮೊದಲ 4 ದಿನ ನಿತ್ಯ 3 ಪಂದ್ಯಗಳು ನಡೆಯಲಿವೆ. ಲೀಗ್‌ನ ಆರಂಭದಲ್ಲೇ ಎಲ್ಲಾ ತಂಡಗಳು ಪಂದ್ಯಗಳನ್ನಾಡಲಿ ಎನ್ನುವ ಉದ್ದೇಶದಿಂದ ಈ ರೀತಿ ವೇಳಾಪಟ್ಟಿ ಸಿದ್ಧಪಡಿಸಿರುವುದಾಗಿ ಆಯೋಜಕರು ಹೇಳಿದ್ದಾರೆ. ಅಲ್ಲದೇ ಪ್ರತಿ ಶನಿವಾರ ತಲಾ 3 ಪಂದ್ಯಗಳು ನಡೆಯಲಿವೆ.

ಕೋವಿಡ್‌ ಭೀತಿಯಿಂದಾಗಿ (Coronavirus Threat) ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಂಚತಾರಾ ಹೋಟೆಲ್‌ ಆವರಣದಲ್ಲಿ ಇಡೀ ಟೂರ್ನಿ ನಡೆಯಲಿದೆ. ಒಟ್ಟಾರೆ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸದಿದ್ದರೂ, ಟೂರ್ನಿಯ ನಡೆಯುವ ಒಟ್ಟು ಸಮಯವನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಲಾಗಿದೆ. ಬಯೋಬಬಲ್‌ನಲ್ಲಿ (Bio-Bubble) ಟೂರ್ನಿ ನಡೆಯಲಿರುವ ಕಾರಣ ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ.

ತಾರಾ ಆಟಗಾರರು ಈ ಸಲ ಯಾವ ತಂಡಗಳಲ್ಲಿದ್ದಾರೆ?

ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ ಭಾರೀ ಬದಲಾವಣೆ ಆಗಿದೆ. ಒಂದು ತಂಡದೊಂದಿಗೆ ಗುರುತಿಸಿಕೊಂಡಿದ್ದ ಆಟಗಾರರು ಈಗ ಆ ತಂಡದಲ್ಲಿಲ್ಲ. ಪಾಟ್ನಾ ಪೈರೇಟ್ಸ್‌ ಪರ ಹಲವು ವರ್ಷ ಆಡಿದ್ದ ಪ್ರದೀಪ್‌ ನರ್ವಾಲ್‌ ಈ ಬಾರಿ ಯು.ಪಿ.ಯೋಧಾ ತಂಡದಲ್ಲಿದ್ದಾರೆ. ಬೆಂಗಳೂರು ತಂಡದ ನಾಯಕರಾಗಿದ್ದ ರೋಹಿತ್‌ ಕುಮಾರ್‌ ಈ ಬಾರಿ ತೆಲುಗು ಟೈಟಾನ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅಜಯ್‌ ಠಾಕೂರ್‌, ಮನ್‌ಜೀತ್‌ ಚಿಲ್ಲಾರ್‌ ಡೆಲ್ಲಿ ಜೆರ್ಸಿ ತೊಡಲಿದ್ದು, ರಾಹುಲ್‌ ಚೌಧರಿ ಪುಣೇರಿ ಪಲ್ಟನ್‌ ಪರ ಆಡಲಿದ್ದಾರೆ. ಧರ್ಮರಾಜ್‌ ಚೆರಲಾತನ್‌ ಜೈಪುರ ತಂಡದಲ್ಲಿದ್ದಾರೆ.

ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್‌ ತಂಡ

ಮಾಜಿ ಚಾಂಪಿಯನ್ನರಾದ ಬೆಂಗಳೂರು ಬುಲ್ಸ್‌ (Bengaluru Bulls) ಹಾಗೂ ಯು ಮುಂಬಾ (U Mumba) ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ. ಕಳೆದ ಆವೃತ್ತಿಯ ಶ್ರೇಷ್ಠ ರೈಡರ್‌ ಪವನ್‌ ಶೆರಾವತ್‌ (Pawan Kumar Sehrawat) ಹಾಗೂ ಶ್ರೇಷ್ಠ ಡಿಫೆಂಡರ್‌ ಫಜಲ್‌ ಅತ್ರಾಚೆಲಿ (Fazel Atrachali ) ಪರಸ್ಪರ ಸೆಣಸಲಿದ್ದಾರೆ. ಬೆಂಗಳೂರು ಬುಲ್ಸ್‌ ಈ ಬಾರಿ ಸಮತೋಲನದಿಂದ ಕೂಡಿದೆ. ರೈಡಿಂಗ್‌ ವಿಭಾಗದಲ್ಲಿ ಪವನ್‌ ಜೊತೆ ಚಂದ್ರನ್‌ ರಂಜಿತ್‌, ಇರಾನ್‌ನ ಅಬೋಲ್‌ಫಜಲ್‌ ಮಗ್ಸೂದ್ಲು, ದೀಪಕ್‌ ನರ್ವಾಲ್‌, ಜಿ.ಬಿ.ಮೋರೆ ಇದ್ದಾರೆ. ಮಹೇಂದರ್‌ ಸಿಂಗ್‌ ಡಿಫೆನ್ಸ್‌ ವಿಭಾಗವನ್ನು ಮುನ್ನಡೆಸಲಿದ್ದು ಕಾರ್ನರ್‌ಗಳಲ್ಲಿ ಅಮಿತ್‌ ಶೆರೊನ್‌ ಹಾಗೂ ಸೌರಭ್‌ ನಂದಲ್‌ ಕಾರ‍್ಯನಿರ್ವಹಿಸುವುದು ಬಹುತೇಕ ಖಚಿತ. ಕೊರಿಯಾದ ಡೊಂಗ್‌ ಜಿಯೊನ್‌ ಲೀ ಸಹ ಉಪಯುಕ್ತ ಕೊಡುಗೆ ನೀಡಬಲ್ಲರು.

PKL 2021: ಕಬಡ್ಡಿ ಹಬ್ಬ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭ

ಇನ್ನು ಮುಂಬೈ ತನ್ನ ತಾರಾ ರೈಡರ್‌ ಅಭಿಷೇಕ್‌ ಸಿಂಗ್‌ ಮೇಲೆ ಹೆಚ್ಚು ಅವಲಂಬಿತಗೊಳ್ಳಬಹುದು. ತಂಡಕ್ಕೆ ಅನುಭವಿ ರೈಡರ್‌ಗಳ ಕೊರತೆ ಎದುರಾದರೆ ಅಚ್ಚರಿಯಿಲ್ಲ. ಡಿಫೆನ್ಸ್‌ನಲ್ಲಿ ಅತ್ರಾಚೆಲಿಗೆ ಸುನಿಲ್‌ ಸಿದ್ಗಾವಲಿ ಉತ್ತಮ ಬೆಂಬಲ ನೀಡಬೇಕಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ, 
ನೇರ ಪ್ರಸಾರ ಸ್ಟಾರ್‌ ಸ್ಪೋರ್ಟ್ಸ್‌

ಹಾಲಿ ಚಾಂಪಿಯನ್‌ ಬೆಂಗಾಲ್‌ಗೆ ಪ್ರದೀಪ್‌ ನರ್ವಾಲ್‌ ಚಾಲೆಂಜ್‌!

7ನೇ ಆವೃತ್ತಿಯ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್ಸ್‌ ತನ್ನ ಮೊದಲ ಪಂದ್ಯದಲ್ಲೇ ರೈಡ್‌ ಮಷಿನ್‌ ಪ್ರದೀಪ್‌ ನರ್ವಾಲ್‌ ಸವಾಲು ಎದುರಾಗಲಿದೆ. ಯು.ಪಿ.ಯೋಧಾ ಪರ ಆಡಲಿರುವ ಪ್ರದೀಪ್‌ ತಮ್ಮ ಹೊಸ ತಂಡಕ್ಕೆ ಗೆಲುವಿನ ಆರಂಭ ಒದಗಿಸಲು ಎದುರು ನೋಡುತ್ತಿದ್ದಾರೆ. ಬೆಂಗಾಲ್‌ ಸಹ ಅತ್ಯಂತ ಬಲಿಷ್ಠವಾಗಿದೆ. ದಿನದ ಮತ್ತೊಂದು ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ಹಾಗೂ ತೆಲುಗು ಟೈಟಾನ್ಸ್‌ ಎದುರಾಗಲಿವೆ.

ತಲೈವಾಸ್‌-ಟೈಟಾನ್ಸ್‌ ಪಂದ್ಯ: ರಾತ್ರಿ 8.30ಕ್ಕೆ, 
ಯೋಧಾ-ಬೆಂಗಾಲ್‌ ಪಂದ್ಯ: ರಾತ್ರಿ 9.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios