Pro Kabaddi League: ತೆಲುಗು ಟೈಟಾನ್ಸ್‌ಗೆ 10ನೇ ಸೋಲು..!
ಸೋಲಿನ ಸುಳಿಯಿಂದ ಹೊರಬರಲು ಪರಡಾಡುತ್ತಿರುವ ತೆಲುಗು ಟೈಟಾನ್ಸ್
ತಮಿಳ್ ತಲೈವಾಸ್ ಎದುರು ಮತ್ತೆ ಸೋಲಿನ ಕಹಿ ಅನುಭವಿಸಿದ ಟೈಟಾನ್ಸ್
ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿದ ತಮಿಳ್ ತಲೈವಾಸ್
ಪುಣೆ(ನ.06): 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ 10ನೇ ಸೋಲು ಅನುಭವಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡದ ಎದುರು 31-39 ಅಂಕಗಳಿಂದ ಪರಾಭವಗೊಂಡಿತು. ಟೂರ್ನಿಯಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ತಮಿಳ್ ತಲೈವಾಸ್ ತಂಡಕ್ಕಿದು 4ನೇ ಗೆಲುವಾಗಿದೆ.
ಮೊದಲ 20 ನಿಮಿಷದ ಮುಕ್ತಾಯಕ್ಕೆ ತೆಲುಗು ಟೈಟಾನ್ಸ್ 16-13 ಅಂಕಗಳಿಂದ ಮುಂದಿದ್ದರೂ ಬಳಿಕ ಪುಟಿದೆದ್ದ ತಮಿಳ್ ತಲೈವಾಸ್ ಭರ್ಜರಿ ಗೆಲವು ಸಾಧಿಸಿತು. ಅಜಿಂಕ್ಯಾ ಪವಾರ್ 11 ರೈಡ್ ಪಾಯಿಂಟ್, ಸಾಗರ್ 8 ಟ್ಯಾಕಲ್ ಅಂಕ ಗಳಿಸಿದರೂ ತೆಲುಗು ಟೈಟಾನ್ಸ್‌ಗೆ ಗೆಲುವು ಸಿಗಲಿಲ್ಲ. ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ದ ಬೆಂಗಾಲ್ ವಾರಿಯರ್ಸ್ 45-40 ಅಂಕಗಳಿಂದ ಜಯಗಳಿಸಿತು. ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಸಿಂಗ್ 20 ಅಂಕಗಳಿಸಿ ಮಿಂಚಿದರು. ಇನ್ನು ಯುಪಿ ಯೋಧಾಸ್ ಹಾಗೂ ಹರ್ಯಾಣ ಸ್ಟೀಲರ್ಸ್ ನಡುವಿನ ಪಂದ್ಯ36-36 ಅಂಕಗಳಿಂದ ಟೈ ಆಯಿತು.
Khel Ratna ಪ್ರಶಸ್ತಿಗೆ ಶರತ್ ಕಮಲ್ ಹೆಸರು ಶಿಫಾರಸು, ಲಕ್ಷ್ಯ ಸೆನ್‌ಗೆ ಒಲಿಯಲಿದೆ ಅರ್ಜುನ ಪ್ರಶಸ್ತಿ
ಸದ್ಯ ಪುಣೇರಿ ಪಲ್ಟಾನ್ ತಂಡವು 6 ಗೆಲುವು, 2 ಸೋಲು ಹಾಗೂ 2 ಟೈ ಪಂದ್ಯಗಳೊಂದಿಗೆ 37 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಬುಲ್ಸ್ ತಂಡವು 10 ಪಂದ್ಯಗಳಿಂದ 6 ಗೆಲುವು, 3 ಸೋಲು ಹಾಗೂ ಒಂದು ಟೈ ಪಂದ್ಯಗಳೊಂದಿಗೆ 35 ಅಂಕಗಳಿಸಿದ್ದು, ಇಂದಿನ ಪಂದ್ಯ ಜಯಿಸಿದರೇ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಇನ್ನು ತೆಲುಗು ಟೈಟಾನ್ಸ್ ತಂಡವು 11 ಪಂದ್ಯಗಳನ್ನಾಡಿ 1 ಗೆಲುವು ಹಾಗೂ 10 ಸೋಲು ಸಹಿತ 8 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದೆ.
ಇಂದಿನ ಪಂದ್ಯಗಳು:
ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್, ಸಂಜೆ 7.30ಕ್ಕೆ
ಪುಣೇರಿ ಪಲ್ಟಾನ್-ತಮಿಳ್ ತಲೈವಾಸ್, ರಾತ್ರಿ 8.30ಕ್ಕೆ.
ವಿಶ್ವ ಹಾಕಿಗೆ ತಯ್ಯಬ್ ಅಧ್ಯಕ್ಷ
ಲಾಸನ್: ಭಾರತದ ನರೇಂದ್ರ ಬಾತ್ರಾ ರಾಜೀನಾಮೆಯಿಂದ ತೆರವಾಗಿದ್ದ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಅಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನದ ತಯ್ಯಬ್ ಇಕ್ರಂ ಆಯ್ಕೆಯಾಗಿದ್ದಾರೆ. ಹಾಲಿ ಏಷ್ಯನ್ ಹಾಕಿ ಫೆಡರೇಶ್‌ನ ಸಿಇಒ ಆಗಿರುವ ಇಕ್ರಂ ಚುನಾವಣೆಯಲ್ಲಿ ಬೆಲ್ಜಿಯಂನ ಮಾರ್ಕ್ ಕುಡ್ರೊನ್‌ರನ್ನು 79-47 ಮತಗಳಿಂದ ಸೋಲಿಸಿದರು. 2016ರಲ್ಲಿ ಎಫ್‌ಐಎಚ್ ಅಧ್ಯಕ್ಷ ಸ್ಥಾನಕ್ಕೇರಿದ್ದ ಬಾತ್ರಾ ಕಳೆದ ಜುಲೈನಲ್ಲಿ ಹುದ್ದೆ ತೊರೆದಿದ್ದರು.
ಏಷ್ಯನ್ ಬಾಕ್ಸಿಂಗ್: ಪ್ರೀತಿ, ಮೀನಾಕ್ಷಿ ಸೆಮೀಸ್‌ಗೆ ಲಗ್ಗೆ
ಅಮ್ಮಾನ್(ಜೋರ್ಡನ್): ಭಾರತದ ತಾರಾ ಬಾಕ್ಸಿಂಗ್ ಪಟುಗಳಾದ ಮೀನಾಕ್ಷಿ ಹಾಗೂ ಪ್ರೀತಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ. ಮೀನಾಕ್ಷಿ ಮಹಿಳೆಯರ 52 ಕೆ.ಜಿ. ವಿಭಾಗದಲ್ಲಿ ಫಿಲಿಪ್ಪೀನ್ಸ್‌ನ ಐರಿಶ್ ಮಾಗ್ನೊ ವಿರುದ್ಧ 4-1ರಿಂದ ಗೆದ್ದರೆ, 57 ಕೆ.ಜಿ. ವಿಭಾಗದಲ್ಲಿ ಪ್ರೀತಿ ಉಜ್ಬೇಕಿಸ್ತಾನದ ತುರ್ದಿಬೆಕೋವಾರನ್ನು 5-0 ಅಂತರದಲ್ಲಿ ಸೋಲಿಸಿದರು. ಆದರೆ ಸಾಕ್ಷಿ(54 ಕೆ.ಜಿ.) ಕ್ವಾರ್ಟರ್‌ನಲ್ಲಿ ಸೋಲನುಭವಿಸಿದರು.