Asianet Suvarna News Asianet Suvarna News

Pro Kabaddi League: ಪವನ್ ಶೆರಾವತ್ ಬಿರುಗಾಳಿ, ಡೆಲ್ಲಿ ಎದುರು ಬುಲ್ಸ್‌ಗೆ ಭರ್ಜರಿ ಜಯಭೇರಿ

* ಬೆಂಗಳೂರು ಬುಲ್ಸ್‌ ತಂಡಕ್ಕೆ ಡೆಲ್ಲಿ ಎದುರು ಭರ್ಜರಿ ಗೆಲುವು

* ದಬಾಂಗ್ ಡೆಲ್ಲಿ ಎದುರು ಏಕಾಂಗಿಯಾಗಿ 27 ಅಂಕ ಗಳಿಸಿದ ಪವನ್ ಶೆರಾವತ್

* ಅಂಕಪಟ್ಟಿಯಲ್ಲಿ ಡೆಲ್ಲಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್ 

Pro Kabaddi League Pawan Sehrawat one Man Show helps Bengaluru Bulls Thrash Dabang Delhi kvn
Author
Bengaluru, First Published Jan 13, 2022, 8:56 AM IST

ಬೆಂಗಳೂರು(ಜ.13): ರೈಡ್‌ ಮಷಿನ್‌ ಪವನ್‌ ಶೆರಾವತ್‌ರ (Pawan Sehrawat) ಅಸಾಧಾರಣ ಪ್ರದರ್ಶನದ ನೆರವಿನಿಂದ ಪ್ರೊ ಕಬಡ್ಡಿ ಲೀಗ್ 8ನೇ (Pro Kabaddi League) ಆವೃತ್ತಿಯ ದಬಾಂಗ್‌ ಡೆಲ್ಲಿ (Dabang Delhi) ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ (Bengaluru Bulls) 61-22ರ ಅಧಿಕಾರಯುತ ಗೆಲುವು ಸಾಧಿಸಿತು. ಬುಧವಾರ ನಡೆದ ಪಂದ್ಯದಲ್ಲಿ 39 ಅಂಕಗಳ ಅಂತರದಲ್ಲಿ ಗೆದ್ದ ಬುಲ್ಸ್‌, ಪ್ರೊ ಕಬಡ್ಡಿ ಇತಿಹಾಸದಲ್ಲಿ 2ನೇ ಅತಿದೊಡ್ಡ ಗೆಲುವು ದಾಖಲಿಸಿತು. ಇದರ ಜತೆಗೆ ದಬಾಂಗ್ ಡೆಲ್ಲಿಯನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

27 ರೈಡ್‌ಗಳಲ್ಲಿ ಬರೋಬ್ಬರಿ 27 ಅಂಕಗಳನ್ನು ಕಲೆಹಾಕಿದ ಪವನ್‌, ಡೆಲ್ಲಿ ಮೇಲೆ ಸವಾರಿ ಮಾಡಿದರು. ಬುಲ್ಸ್‌ ಡಿಫೆಂಡರ್‌ಗಳೂ ಅಮೋಘ ಪ್ರದರ್ಶನ ತೋರಿ 5 ಬಾರಿ ಎದುರಾಳಿ ಪಡೆಯನ್ನು ಆಲೌಟ್‌ ಮಾಡಿದರು. ಯುವ ರೈಡ್‌ ನವೀನ್‌ ಕುಮಾರ್‌ರ (Naveen Kumar) ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಿತು. ಈ ಗೆಲುವಿನೊಂದಿಗೆ ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಸತತ 2ನೇ ಸೋಲು ಕಂಡ ಡೆಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. ಮೊದಲಾರ್ಧದ ಅಂತ್ಯಕ್ಕೆ 27-11ರ ಮುನ್ನಡೆ ಪಡೆದ ಬುಲ್ಸ್‌, ದ್ವಿತೀಯಾರ್ಧದಲ್ಲಿ ಮತ್ತಷ್ಟು ಪ್ರಾಬಲ್ಯ ಮೆರೆಯಿತು. ಬುಲ್ಸ್‌ ಅಂಕ ಗಳಿಕೆಯನ್ನು ತಡೆಯಲು ಡೆಲ್ಲಿ ಬಳಿ ಯಾವುದೇ ರಣತಂತ್ರ ಇರಲಿಲ್ಲ.

ದಬಾಂಗ್ ಡೆಲ್ಲಿ ತಂಡವು ಬಲಿಷ್ಠ ಬೆಂಗಳೂರು ಬುಲ್ಸ್‌ ಎದುರು ಎಲ್ಲಾ ವಿಭಾಗದಲ್ಲೂ ಹಿನ್ನೆಡೆ ಅನುಭವಿಸಿತು. ಅನ್ಶು ಮಲಿಕ್ 6 ಅಂಕಗಳಿಸಿದ್ದೇ ಡೆಲ್ಲಿ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಅಂಕ ಎನಿಸಿತು. ಇನ್ನುಳಿದಂತೆ ವಿಜಯ್ 4 ಹಾಗೂ ಅಜಯ್ ಠಾಕೂರ್ ಕೇವಲ 3 ಅಂಗಳನ್ನು ಗಳಿಸಿದರು. ಬೆಂಗಳೂರು ತಂಡದ ಪರ ಭರತ್ 7 ಹಾಗೂ ಚಂದ್ರನ್ ರಂಜಿತ್ 5 ಅಂಕಗಳನ್ನು ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು.

ಹರ್ಯಾಣ ಸ್ಟೀಲರ್ಸ್‌- ಯುಪಿ ಯೋಧಾ ಪಂದ್ಯ ಟೈ

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲ​ರ್ಸ್‌ (Haryana Steelers) ಹಾಗೂ ಯು.ಪಿ.ಯೋಧಾ (UP Yoddha) 36-36ರಲ್ಲಿ ಟೈಗೆ ತೃಪ್ತಿಪಟ್ಟವು. ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಯ ರೈಡ್‌ನಲ್ಲಿ ಹರ್ಯಾಣ ಸ್ಟೀಲರ್ಸ್ ತಂಡದ ನಾಯಕ ವಿಕಾಸ್ ಕಂಡೋಲಾ ಬೋನಸ್ ಹಾಗೂ ಟಚ್‌ ಪಾಯಿಂಟ್ ಗಳಿಸುವ ಮೂಲಕ ಪಂದ್ಯ ರೋಚಕ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಹರ್ಯಾಣ ಸ್ಟೀಲ​ರ್ಸ್‌ ಪರ ನಾಯಕ ವಿಕಾಸ್‌ ಕಂಡೋಲಾ 17 ಅಂಕ ಗಳಿಸಿದರೆ, ಯೋಧಾ ಪರ ಸುರೀಂದರ್‌ ಗಿಲ್‌ 14 ಅಂಕ ಕಲೆಹಾಕಿದರು.

ಇಂದಿನ ಪಂದ್ಯಗಳು: 
ಬೆಂಗಾಲ್‌-ತಲೈವಾಸ್‌, ಸಂಜೆ 7.30ಕ್ಕೆ
ಮುಂಬಾ-ಪುಣೇರಿ, ರಾತ್ರಿ 8.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಮಹಿಳಾ ಏಷ್ಯಾಕಪ್‌ ಹಾಕಿ: ಭಾರತಕ್ಕೆ ಸವಿತಾ ನಾಯಕಿ
 
ನವದೆಹಲಿ: ಜನವರಿ 21ರಿಂದ 28ರ ವರೆಗೂ ಒಮಾನ್‌ನ ಮಸ್ಕಟ್‌ನಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್‌ ಹಾಕಿ ಟೂರ್ನಿಗೆ (Asian Women's Hockey Team) ಭಾರತ ತಂಡ ಪ್ರಕಟಗೊಂಡಿದ್ದು, ಗೋಲ್‌ಕೀಪರ್‌ ಸವಿತಾ ಪೂನಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಣಿ ರಾಂಪಾಲ್‌ (Rani Rampal) ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಸವಿತಾಗೆ ನಾಯಕತ್ವ ನೀಡಲಾಗಿದೆ. 

Pro Kabaddi League ಯುಪಿ ಯೋಧರ ಮುಂದೆ ಮುಗ್ಗರಿಸಿದ ಬೆಂಗಳೂರು ಬುಲ್ಸ್!

ಈ ಟೂರ್ನಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು 2022ರ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಹಾಲಿ ಚಾಂಪಿಯನ್‌ ಭಾರತ ‘ಎ’ ಗುಂಪಿನಲ್ಲಿದ್ದು, ಜನವರಿ 21ರಂದು ತನ್ನ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೆಣಸಲಿದೆ. ಜನವರಿ 23ಕ್ಕೆ ಜಪಾನ್‌, ಜನವರಿ 24ಕ್ಕೆ ಸಿಂಗಾಪುರ ವಿರುದ್ಧ ಆಡಲಿದೆ.

Follow Us:
Download App:
  • android
  • ios