ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರಿಗೆ ಆಘಾತ ಯುಪಿ ವಿರುದ್ಧ 42-27 ಅಂತರದಲ್ಲಿ ಸೋತ ಬುಲ್ಸ್ ಟೂರ್ನಿಯಲ್ಲಿ 2ನೇ ಸೋಲು ಕಂಡ ಬೆಂಗಳೂರು ಬುಲ್ಸ್

ನವದೆಹಲಿ(ಜ.09): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ(Pro Kabaddi League) ಆರ್ಭಟದೊಂದಿಗೆ ಮುನ್ನಗ್ಗುತ್ತಿದ್ದ ಬೆಂಗಳೂರು ಬುಲ್ಸ್‌ಗೆ(Bengaluru Bulls) ಹಿನ್ನಡೆಯಾಗಿದೆ. ಯುಪಿ ಯೋಧಾ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲು ಅನುಭವಿಸಿದೆ. ಯುಪಿ ವಿರುದ್ಧ(UP Yodha) 27-42 ಅಂಕಗಳ ಅಂತರದಲ್ಲಿ ಸೋಲು ಕಂಡಿದೆ.

ಯುಪಿ ಯೋಧಾ ಟ್ಯಾಕಲ್‌ಗೆ ಬೆಂಗಳೂರು ಸೋಲೊಪ್ಪಿಕೊಂಡಿದೆ. ಬರೋಬ್ಬರಿ 22 ಟ್ಯಾಕಲ್ ಪಾಯಿಂಟ್ಸ್ ಪಡೆಯುವ ಮೂಲಕ ಯುಪಿ ಯೋಧಾ ಭರ್ಜರಿ ಮೇಲುಗೈ ಸಾಧಿಸಿತು. ಇದರಲ್ಲಿ ಮೂರು ಸೂಪರ್ ಟ್ಯಾಕಲ್ ಪಾಯಿಂಟ್ಸ್(Tackle Points) ಸೇರಿದೆ. ಗೆಲುವಿನ ನಿರೀಕ್ಷೆ, ಗೇಮ್‌ಪ್ಲಾನ್‌ನೊಂದಿಗೆ ಅಖಾಡಕ್ಕಿಳಿದ ಬೆಂಗಳೂರು ಬುಲ್ಸ್ ತಂಡಕ್ಕೆ ಯುಪಿ ಯೋಧಾ ಟ್ಯಾಕಲ್ ಮುಳುವಾಯಿತು. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ 3 ಸೂಪರ್ ಟ್ಯಾಕಲ್ ಗರಿಷ್ಠವಾಗಿದೆ. ಈ ಮೂಲಕ ಮತ್ತೊಂದು ದಾಖಲೆಯನ್ನು ಯುಪಿ ಯೋಧಾ ಮಾಡಿದೆ.

Pro Kabaddi League: ಹರ್ಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌..!

ರೈಡರ್ ಶ್ರೀಕಾಂತ್ ಜಾಧವ್ ಮಿಂಚಿನ ದಾಳಿಯೂ ಯುಪಿ ಯೋಧಾಗೆ ನೆರವಾಯಿತು. 15 ಅಂಕ ಬಾಚಿಕೊಂಡ ಶ್ರೀಕಾಂತ್ ಯುಪಿ ಸುಲಭ ಗೆಲುವಿಗೆ ಕಾರಣರಾದರು. ಆದರೆ ಬೆಂಗಳೂರು ತಂಡದ ಪವನ್ ಶೆರಾವತ್ ಹಾಗೂ ಪವನ್ ಕುಮಾರ್ ನಿರೀಕ್ಷಿತ ಅಂಕ ತರುವಲ್ಲಿ ವಿಫಲರಾದರು. ಪವನ್ ಕೇವಲ 5 ಅಂಕಕ್ಕೆ ತೃಪ್ತಿಪಟ್ಟರೆ, ಪವನ್ ಅಂಕಗಳಿಸಲು ಸಾಧ್ಯವಾಗಿಲ್ಲ.

ಬೆಂಗಳೂರು ಬುಲ್ಸ್ ವಿರುದ್ಧದ ಭರ್ಜರಿ ಗೆಲುವು ಸಾಧಿಸಿದ ಯುಪಿ ಯೋಧಾ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಬೆಂಗಳೂರು ಬುಲ್ಸ್ 3ನೇ ಸ್ಥಾನದಲ್ಲಿದೆ. ಯುಪಿ ಯೋಧಾ ಈ ಬಾರಿಯ ಟೂರ್ನಿಯಲ್ಲಿ ಆಡಿದ 8 ಪಂದ್ಯದಲ್ಲಿ 2ನೇ ಗೆಲುವಾಗಿದೆ. ಇತ್ತ ಬುಲ್ಸ್ 8 ಪಂದ್ಯದಲ್ಲಿ 5 ಗೆಲುವು ಹಾಗೂ 2 ಸೋಲು ಕಂಡಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ಮೊದಾಲಾರ್ಧಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧಾ ಜಿದ್ದಾಜಿದ್ದಿನ ಹೋರಾಟ ನಡೆಸಿತ್ತು. ಬೆಂಗಳೂರು 14 ಅಂಕ ಸಂಪಾದಿಸಿದ್ದರೆ, ಯುಪಿ 19 ಅಂಕ ಪಡೆದು ಮುನ್ನಡೆ ಸಾಧಿಸಿತ್ತು. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ 9 ರೈಡ್ ಪಾಯಿಂಟ್ಸ್ ಕಬಳಿಸಿತ್ತು. ಆಧರೆ ಯುಪಿ 8 ರೈಡ್ ಅಂಕ ಪಡೆದಿತ್ತು. ಇಡೀ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಟ್ಯಾಕಲ್ ಮೊದಾಲಾರ್ಧದಲ್ಲೂ ಮೇಳೈಸಿತು. ಟ್ಯಾಕಲ್ ಮೂಲಕ ಯುಪಿ 11 ಅಂಕ ಗಳಿಸಿದ್ದರೆ, ಬುಲ್ಸ್ 5 ಅಂಕ ಗಳಿಸಿತ್ತು.

Pro Kabaddi League: ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ತಿವಿದ ಬೆಂಗಳೂರು ಬುಲ್ಸ್ ಮತ್ತೆ ನಂ.1

ಸೆಕೆಂಡ್ ಹಾಫ್‌ನಲ್ಲಿ ಯುಪಿ ಯೋಧಾ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. ಇದರ ಪರಿಣಾಮ ಬೆಂಗಳೂರು ಬುಲ್ಸ್ ಅಂಕಗಳಿಕೆಯಲ್ಲಿ ಹಿಂದೆ ಬಿದ್ದಿತು. ಸೆಕೆಂಡ್ ಹಾಫ್‌ನಲ್ಲಿ ಬುಲ್ಸ್ ಒಟ್ಟು 13 ಅಂಕಗಳನ್ನು ಪಡೆದುಕೊಂಡಿತು. ಆದರೆ ಯುಪಿ ಯೋಧಾ 23 ಅಂಕ ಬಾಚಿಕೊಂಡಿತು. ರೈಡ್ ಮೂಲಕ ಬೆಂಗಳೂರು ಬುಲ್ಸ್ 11 ಅಂಕ ಪಡೆದು ಮುನ್ನಡೆ ಸಾಧಿಸಿದೆ. ಇತ್ತ ಯುಪಿ ರೈಡ್ ಮೂಲಕ ಗಳಿಸಿರುವುದು 10 ಅಂಕ. ಬೆಂಗಳೂರು ಬುಲ್ಸ್ ಟ್ಯಾಕಲ್ ಮೂಲಕ ಕೇವಲ 2 ಅಂಕ ಸಂಪಾದಿಸಿತ್ತು. ಇತ್ತ ಯುಪಿ ಯೋಧಾ ಟ್ಯಾಕಲ್ ಮೂಲಕ 11 ಅಂಕ ಸಂಪಾದಿಸಿತು. ಇದರ ಜೊತೆಗೆ ಯುಪಿ ಯೋಧಾ ಎದುರಾಳಿ ಬುಲ್ಸ್ ತಂಡವನ್ನು ಆಲೌಟ್ ಮಾಡಿ 2 ಅಂಕ ಹೆಚ್ಚುವರಿಯಾಗಿ ಪಡೆದುಕೊಂಡಿತು.

ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದಿಲ್ಲಿ ದಬಾಂಗ್ ತಂಡ ವಿರಾಜಮಾನವಾಗಿದೆ. ಡೆಲ್ಲಿ ಆಡಿದ 7 ಪಂದ್ಯದಲ್ಲಿ 5 ಗೆಲುವು ಸಾಧಿಸಿದ್ದರೆ, 2 ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಎರಡನೇ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ಆಡಿದ 7 ಪಂದ್ಯದಲ್ಲಿ 5 ಗೆಲುವು, 1 ಸೋಲು ಹಾಗೂ ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂದಿದೆ.