Pro Kabaddi League: ಗುಜರಾತ್ ಎದುರು ಬೆಂಗಳೂರು ಬುಲ್ಸ್‌ಗೆ ಆಘಾತಕಾರಿ ಸೋಲು..!
* ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ಗೆ 8ನೇ ಸೋಲು
* ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋತ ಪವನ್ ಶೆರಾವತ್ ಪಡೆ
* ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದ ಬುಲ್ಸ್
ಬೆಂಗಳೂರು(ಫೆ.07): 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಬೆಂಗಳೂರು ಬುಲ್ಸ್ (Bengaluru Bulls) 8ನೇ ಸೋಲು ಕಂಡಿದೆ. ಭಾನುವಾರ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ ಬುಲ್ಸ್ 40-46 ಅಂಕಗಳಿಂದ ಸೋಲನುಭವಿಸಿತು. ಬುಲ್ಸ್ ನಾಯಕ ಪವನ್ ಕುಮಾರ್ 12, ಭರತ್ 11 ರೈಡ್ ಅಂಕ ಗಳಿಸಿದರು. 55 ಅಂಕಗಳಿಸಿದ ಬುಲ್ಸ್ 3ನೇ ಸ್ಥಾನದಲ್ಲಿದ್ದು, ಗುಜರಾತ್ 43 ಅಂಕದೊಂದಿಗೆ 9ನೇ ಸ್ಥಾನಕ್ಕೇರಿದೆ. ಪಂದ್ಯ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡು ಕಣಕ್ಕಿಳಿದಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಸಾಂಘಿಕ ಪ್ರದರ್ಶನದ ಮೂಲಕ ಗುಜರಾತ್ ಜೈಂಟ್ಸ್ ಶಾಕ್ ನೀಡುವಲ್ಲಿ ಯಶಸ್ವಿಯಾಯಿತು.
ಗುಜರಾತ್ ಜೈಂಟ್ಸ್ ಪರ ಪ್ರದೀಪ್ ಕುಮಾರ್ 14 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಸುನೀಲ್ ಕುಮಾರ್ 4 ಟ್ಯಾಕಲ್ ಪಾಯಿಂಟ್ ಸಹಿತ ಒಟ್ಟು 5 ಅಂಕಗಳನ್ನು ಗಳಿಸಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಗುಜರಾತ್ ಜೈಂಟ್ಸ್ 15-14 ರಿಂದ ಕೇವಲ ಒಂದು ಅಂಕಗಳ ಮುನ್ನಡೆ ಸಾಧಿಸಿತ್ತು. ಪಂದ್ಯ ಮುಕ್ತಾಯಕ್ಕೆ ಕೊನೆಯ 8 ನಿಮಿಷಗಳು ಭಾಕಿ ಇದ್ದಾಗ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಗುಜರಾತ್ ತಂಡವು 20-26ರಿಂದ ಆರು ಅಂಕಗಳ ಮುನ್ನಡೆ ಸಾಧಿಸಿತು.
ಆದರೆ ಪಂದ್ಯ ಮುಕ್ತಾಯಕ್ಕೆ ಒಂದೂವರೆ ನಿಮಿಷಗಳು ಬಾಕಿ ಇದ್ದಾಗ ಕಮ್‌ಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ ತಂಡವು ಯಶಸ್ವಿಯಾಯಿತು. ಗುಜರಾತ್ ತಂಡವನ್ನು ಆಲೌಟ್ ಮಾಡುವ ಮೂಲಕ ಬುಲ್ಸ್ 35-35 ಅಂಕಗಳ ಸಮಬಲ ಸಾಧಿಸಿತು. ಆದರೆ ಕೊನೆಯ ಕ್ಷಣದಲ್ಲಿ ಬುಲ್ಸ್ ಮಾಡಿಕೊಂಡ ಎಡವಟ್ಟಿನಿಂದಾಗಿ ಪಂದ್ಯವನ್ನು ಕೈಚೆಲ್ಲಿತು.
Pro Kabaddi League: ಫೆಬ್ರವರಿ 13ರ ವರೆಗಿನ ಪಂದ್ಯಗಳ ವೇಳಾಪಟ್ಟಿ ಪ್ರಕಟ
ಇನ್ನು ಬೆಂಗಳೂರು ಬುಲ್ಸ್ ತಂಡದ ಪರ ನಾಯಕ ಪವನ್ ಶೆರಾವತ್ (Pawan Sehrawat) ಹಾಗೂ ಭರತ್ (Bharat) ಇಬ್ಬರೂ ಸಹಾ ಸೂಪರ್ 10 ಪಡೆದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಬೆಂಗಳೂರು ಬುಲ್ಸ್ ತಂಡವು ಆರಂಭದಲ್ಲಿ ರಕ್ಷಣ ಪಡೆಯು ಮಿಂಚಿನ ಪ್ರದರ್ಶನ ತೋರಿತು. ಆದರೆ ನಿರ್ಣಾಯಕ ಘಟ್ಟದಲ್ಲಿ ಸೂಕ್ತವಾದ ರಣತಂತ್ರ ಹೆಣೆಯುವಲ್ಲಿ ಬುಲ್ಸ್ ಪಡೆಯು ವಿಫಲವಾಯಿತು. ಸದ್ಯ ಈ ಪಂದ್ಯದ ಸೋಲಿನ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿದಿದೆ. ಆದರೆ ಒಂದು ವೇಳೆ ಇನ್ನೆರಡು ಪಂದ್ಯಗಳಲ್ಲಿ ಬುಲ್ಸ್ ಪಡೆ ಮುಗ್ಗರಿಸಿದರೆ, ಪ್ಲೇ ಆಫ್ ಹಾದಿ ದುರ್ಗಮವೆನಿಸಲಿದೆ. ಅಪಾಯ ಎದುರಾಗುವ ಮುಂಚೆ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಎಚ್ಚೆತ್ತುಕೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ (Bengal ವಿರುದ್ಧ 38-29 ಅಂಕಗಳಿಂದ ಗೆದ್ದ ಪಾಟ್ನಾ ಪೈರೇಟ್ಸ್ 60 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ಬೆಂಗಾಲ್ ಹ್ಯಾಟ್ರಿಕ್ ಸೋಲಿನೊಂದಿಗೆ 11ನೇ ಸ್ಥಾನಕ್ಕೆ ಕುಸಿದಿದೆ. ಸೋಮವಾರ ಗುಜರಾತ್-ಜೈಪುರ, ಬೆಂಗಾಲ್-ಟೈಟಾನ್ಸ್ ಮುಖಾಮುಖಿಯಾಗಲಿವೆ.
ಟಾಟಾ ಓಪನ್ ಪ್ರಶಸ್ತಿ ಗೆದ್ದ ಬೋಪಣ್ಣ-ರಾಮ್ ಜೋಡಿ
ಪುಣೆ: ಭಾರತದ ರೋಹಣ್ ಬೋಪಣ್ಣ (Rohan Bopanna) ಹಾಗೂ ರಾಮ್‌ಕುಮಾರ್ ರಾಮನಾಥನ್ ಜೋಡಿ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಈ ಜೋಡಿ ಆಸ್ಪ್ರೇಲಿಯಾದ ಲ್ಯೂಕ್ ಸೆವಿಲ್ಲೆ-ಜಾನ್ ಪ್ಯಾಟ್ರಿಕ್ ಸ್ಮಿತ್ ಜೋಡಿ ವಿರುದ್ಧ 6-7(10), 6-3, 10-6 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು.
ಭಾರತದ ಈ ಜೋಡಿಗೆ ಇದು ಎರಡನೇ ಎಟಿಪಿ ವಲ್ಡ್‌ರ್ ಟೂರ್ ಪ್ರಶಸ್ತಿಯಾಗಿದ್ದು, ಕಳೆದ ತಿಂಗಳು ಅಡಿಲೇಡ್ ಇವೆಂಟ್‌ನಲ್ಲಿ ಈ ಜೋಡಿ ಚಾಂಪಿಯನ್ ಆಗಿತ್ತು. ಬೋಪಣ್ಣಗೆ ಇದು 21ನೇ ಎಟಿಪಿ ಡಬಲ್ಸ್ ಪ್ರಶಸ್ತಿಯಾಗಿದ್ದು, ರಾಮ್‌ಕುಮಾರ್ 2ನೇ ಬಾರಿ ಪ್ರಶಸ್ತಿ ಗೆದ್ದರು.