Pro Kabaddi League: ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ತಿವಿದ ಬೆಂಗಳೂರು ಬುಲ್ಸ್ ಮತ್ತೆ ನಂ.1

* ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್

* ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿದ ಪವನ್ ಶೆರಾವತ್ ಪಡೆ

* 25 ರೈಡ್‌ಗಳಲ್ಲಿ 18 ಅಂಕ ಸಂಪಾದಿಸಿದ ಬುಲ್ಸ್‌ ನಾಯಕ ಶೆರಾವತ್

Pro Kabaddi League Bengaluru Bulls thrashes Jaipur Pink Panthers and Climb No 1 Spot kvn

ಬೆಂಗಳೂರು(ಜ.07): ತಾರಾ ರೈಡರ್‌ ಪವನ್‌ ಕುಮಾರ್‌ (Pawan Sehrawat) 5ನೇ ‘ಸೂಪರ್‌ 10’ ಸಾಹಸದಿಂದ ಬೆಂಗಳೂರು ಬುಲ್ಸ್‌ (Bengaluru Bulls) 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) 5ನೇ ಜಯಗಳಿಸಿತು. ಗುರುವಾರದ ಪಂದ್ಯದಲ್ಲಿ ಬುಲ್ಸ್‌ , ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ (Jaipur Pink Panthers) ವಿರುದ್ಧ 38-31 ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮಾಜಿ ಚಾಂಪಿಯನ್‌ ಬುಲ್ಸ್‌ ಮತ್ತೆ ಅಗ್ರಸ್ಥಾನಕ್ಕೇರಿದ್ದು, ಹ್ಯಾಟ್ರಿಕ್‌ ಸೋಲುಂಡ ಜೈಪುರ 10ನೇ ಸ್ಥಾನದಲ್ಲೇ ಉಳಿಯಿತು.

ಪಂದ್ಯದ ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಸವಾರಿ ಮಾಡಿದ ಬುಲ್ಸ್‌, ಮೊದಲಾರ್ಧದಲ್ಲಿ 20-14 ಅಂಕಗಳಿಂದ ಮುನ್ನಡೆಯಲ್ಲಿತ್ತು. ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿದ ಜೈಪುರ, ಸತತ ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿತು. ಪಂದ್ಯದುದ್ದಕ್ಕೂ ಏಕಾಂಗಿ ಹೋರಾಟ ಪ್ರದರ್ಶಿಸಿದ ಪವನ್‌, 25 ರೈಡ್‌ಗಳಲ್ಲಿ 18 ಅಂಕ ಸಂಪಾದಿಸಿದರು. ಸೌರಭ್‌ ಹಾಗೂ ಮೋರೆ ತಲಾ 3 ಟ್ಯಾಕಲ್‌ ಅಂಕ ಪಡೆದರು. ಜೈಪುರದ ಅರ್ಜುನ್‌ ದೇಶ್ವಾಲ್‌ ಈ ಆವೃತ್ತಿಯ ಸತತ 6ನೇ ಪಂದ್ಯದಲ್ಲೂ ‘ಸೂಪರ್‌ 10’ ಸಾಧನೆಗೈದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಪಾಟ್ನಾ ಪೈರೇಟ್ಸ್‌ - ತಮಿಳ್ ತಲೈವಾಸ್‌ ಪಂದ್ಯ ಟೈ

ಬೆಂಗಳೂರು: ಗುರುವಾರದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌-ತಮಿಳ್‌ ತಲೈವಾಸ್‌ ನಡುವಿನ ಪಂದ್ಯ 30-30 ಅಂಕಗಳಿಂದ ಟೈ ಆಯಿತು. ಪಂದ್ಯದ ಆರಂಭದಲ್ಲಿ ಪ್ರಾಬಲ್ಯ ಸಾಧಿಸಿದ ಪಾಟ್ನಾ ಮೊದಲಾರ್ಧಕ್ಕೆ 18-12ರಿಂದ ಮುನ್ನಡೆಯಲ್ಲಿತ್ತು. ಆದರೆ ಅಜಿಂಕ್ಯಾ ಪವಾರ್‌ (12 ರೈಡ್‌ ಅಂಕ), ಅಥುಲ್‌(06) ಹೋರಾಟದಿಂದ ತಲೈವಾಸ್‌ ಸಮಬಲ ಸಾಧಿಸಿತು.

ಇಂದಿನ ಪಂದ್ಯಗಳು

ಬೆಂಗಾಲ್‌-ಹರ್ಯಾಣ, ಸಂಜೆ 7.30ಕ್ಕೆ, 
ಪುಣೇರಿ-ಜೈಪುರ, ರಾತ್ರಿ 8.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ವರ್ಷದ ನೆಚ್ಚಿನ ಹಾಕಿ ಪಂದ್ಯ ರೇಸಲ್ಲಿ ಭಾರತದ 4 ಪಂದ್ಯಗಳು

ನವದೆಹಲಿ: 2021ರ ಎಫ್‌ಐಎಚ್‌ ವರ್ಷದ ನೆಚ್ಚಿನ ಹಾಕಿ ಪಂದ್ಯ ಪ್ರಶಸ್ತಿ ರೇಸ್‌ಗೆ ನಾಮನಿರ್ದೇಶನಗೊಂಡ 10 ಪಂದ್ಯಗಳಲ್ಲಿ ಭಾರತವನ್ನು ಒಳಗೊಂಡಿದ್ದ 4 ಪಂದ್ಯಗಳು ಸ್ಥಾನ ಪಡೆದಿವೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಗುರುವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನ (Tokyo Olympics) ಭಾರತ-ಜರ್ಮನಿ ನಡುವಿನ ಕಂಚಿನ ಪದಕದ ಪಂದ್ಯವೂ ಒಳಗೊಂಡಿದೆ. 

Pro Kabaddi League: ಬೆಂಗಳೂರು ಬುಲ್ಸ್‌ಗೆ ಜೈಪುರ ಮಣಿಸಿ ಅಗ್ರಸ್ಥಾನಕ್ಕೇರುವ ಗುರಿ

ಉಳಿದಂತೆ ಭಾರತ ಮಹಿಳೆಯರ ತಂಡ (Indian Women's Hockey Team) ಒಲಿಂಪಿಕ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ 1-0 ಗೋಲುಗಳಿಂದ ಗೆದ್ದ ಪಂದ್ಯ ಹಾಗೂ ಗ್ರೇಟ್‌ ಬ್ರಿಟನ್‌ ವಿರುದ್ಧ ಸೋತ ಕಂಚಿನ ಪದಕದ ಪಂದ್ಯ ಕೂಡಾ ಸ್ಥಾನ ಪಡೆದಿವೆ. ಜೊತೆಗೆ, ಭಾರತ ಜೂನಿಯರ್‌ ಹಾಕಿ ತಂಡ ವಿಶ್ವಕಪ್‌ನಲ್ಲಿ ಫ್ರಾನ್ಸ್‌ ವಿರುದ್ಧ ಸೋತ ಪಂದ್ಯವೂ ನಾಮನಿರ್ದೇಶನಗೊಂಡಿದೆ.

ಮಂಗಳೂರು ವಿವಿಯ ಭಾನುಗೆ ಡಿಸ್ಕಸ್‌ ಕಂಚು

ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಅಂತರ್‌ ವಿಶ್ವ ವಿದ್ಯಾನಿಲಯಗಳ ಪುರುಷ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 3ನೇ ದಿನವಾದ ಗುರುವಾರ ಆತಿಥೇಯ ಮಂಗಳೂರು ವಿವಿಯ ಭಾನು ಶರ್ಮಾ ಡಿಸ್ಕಸ್‌ ಥ್ರೋನಲ್ಲಿ ಕಂಚಿನ ಪದಕ ಜಯಿಸಿದರು. 

ಗುರುವಾರ ಒಟ್ಟು ಮೂರು ಹೊಸ ಕೂಟ ದಾಖಲೆಗಳು ನಿರ್ಮಾಣವಾದವು. ಇದರೊಂದಿಗೆ ಒಟ್ಟು ಕೂಟ ದಾಖಲೆಗಳ ಸಂಖ್ಯೆ ಆರಕ್ಕೇರಿತು. ತಲಾ 2 ಚಿನ್ನ, ಬೆಳ್ಳಿ, 3 ಕಂಚಿನ ಪದಕಗಳೊಂದಿಗೆ 44 ಅಂಕಗಳನ್ನು ಗಳಿಸಿರುವ ಮಂಗಳೂರು ವಿವಿ ಕ್ರೀಡಾಕೂಟದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಶುಕ್ರವಾರ ಕೂಟದ ಅಂತಿಮ ದಿನವಾಗಿದ್ದು, ಹತ್ತು ಕ್ರೀಡಾ ವಿಭಾಗದ ಫೈನಲ್‌ಗಳು ನಡೆಯಲಿವೆ.

Latest Videos
Follow Us:
Download App:
  • android
  • ios