Pro Kabaddi League: ಬೆಂಗಳೂರು ಬುಲ್ಸ್‌ಗೆ ಜೈಪುರ ಮಣಿಸಿ ಅಗ್ರಸ್ಥಾನಕ್ಕೇರುವ ಗುರಿ

* ಬೆಂಗಳೂರು ಬುಲ್ಸ್‌ ತಂಡಕ್ಕಿಂದು ಜೈಪುರ ಪಿಂಕ್ ಪ್ಯಾಂಥರ್ಸ್‌ ಸವಾಲು

* ಸತತ ಗೆಲುವಿನ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿರುವ ಪವನ್ ಶೆರಾವತ್ ಪಡೆ

* ಜೈಪುರ ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ ಬುಲ್ಸ್‌ ಪಡೆ

Pro Kabaddi League Bengaluru Bulls take on Jaipur Pink Panthers Challenge kvn

ಬೆಂಗಳೂರು(ಜ.06) 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League 2022) ಸತತ 5 ಪಂದ್ಯಗಳಲ್ಲಿ ಸೋಲು ಕಾಣದೆ ಮುನ್ನುಗ್ಗುತ್ತಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ (Bengaluru Bulls) ತಂಡ ಗುರುವಾರ, ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ (Jaipur Pink Panthers) ಸವಾಲನ್ನು ಎದುರಿಸಲಿದೆ. ಹಿಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಬುಲ್ಸ್‌ ತಂಡವನ್ನು ಡೆಲ್ಲಿ ಹಿಂದಿಕ್ಕಿದ್ದು, ಗುರುವಾರ ಮತ್ತೊಂದು ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಲು ಪವನ್‌ ಶೆರಾವತ್‌ (Pawan Sehrawat) ಪಡೆ ಕಾತರಿಸುತ್ತಿದೆ.

ಯು ಮುಂಬಾ (U Mumba) ವಿರುದ್ಧ ಸೋಲುವ ಮೂಲಕ ಅಭಿಯಾನ ಆರಂಭಿಸಿದ್ದ ಬುಲ್ಸ್‌, ಬಳಿಕ ಹ್ಯಾಟ್ರಿಕ್‌ ಗೆಲುವು ಸೇರಿದಂತೆ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 1ರಲ್ಲಿ ಟೈ ಸಾಧಿಸಿದೆ. ಸದ್ಯ 23 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಲೀಗ್‌ನಲ್ಲಿ 2ನೇ ಅತೀ ಹೆಚ್ಚು ರೈಡ್‌ ಹಾಗೂ ಅತಿಹೆಚ್ಚು ಟ್ಯಾಕಲ್‌ ಅಂಕಗಳನ್ನು ಪಡೆದಿರುವ ಬುಲ್ಸ್‌, ತನ್ನ ಆಲ್ರೌಂಡ್‌ ಪ್ರದರ್ಶನದ ಮೂಲಕವೇ ಎದುರಾಳಿಗಳನ್ನು ಕಾಡುತ್ತಿದೆ. 6 ಪಂದ್ಯಗಳಲ್ಲಿ 73 ರೈಡಿಂಗ್‌ ಅಂಕ ಸಂಪಾದಿಸಿರುವ ಪವನ್‌ಗೆ ಚಂದ್ರನ್‌ ರಂಜಿತ್‌(42 ರೈಡಿಂಗ್‌ ಅಂಕ) ಉತ್ತಮ ಬೆಂಬಲ ನೀಡುತ್ತಿದ್ದಾರೆ. ಸೌರಭ್‌ ನಂದಲ್‌, ಅಮನ್‌, ಮಹೇಂದ್ರ ಸಿಂಗ್‌ ಡಿಫೆನ್ಸ್‌ನಲ್ಲಿ ಮಿಂಚುತ್ತಿದ್ದಾರೆ.

ಇನ್ನು, ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿರುವ ಜೈಪುರ ಹ್ಯಾಟ್ರಿಕ್‌ ಸೋಲು ತಪ್ಪಿಸಲು ಎದುರು ನೋಡುತ್ತಿದೆ. ರೈಡಿಂಗ್‌ನಲ್ಲಿ ಅರ್ಜುನ್‌ ದೇಶ್ವಾಲ್‌ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಉಳಿದವರಿಂದ ನಿರೀಕ್ಷಿತ ನೆರವು ಸಿಗುತ್ತಿಲ್ಲ. ನಾಯಕ ದೀಪಕ್‌ ನಿವಾಸ್‌ ಹೂಡಾ ವೈಫಲ್ಯ ಅನುಭವಿಸುತ್ತಿದ್ದಾರೆ. ದುರ್ಬಲ ರಕ್ಷಣಾ ಪಡೆಯನ್ನು ಹೊಂದಿರುವ ಜೈಪುರ, ಬುಲ್ಸ್‌ ವಿರುದ್ಧ ಸಾಂಘಿಕ ಪ್ರದರ್ಶನ ನೀಡಿದರಷ್ಟೇ ಜಯ ದಕ್ಕಲಿದೆ.

ಇಂದಿನ ಪಂದ್ಯಗಳು

ಪಾಟ್ನಾ ಪೈರೇಟ್ಸ್‌-ತಮಿಳ್‌ ತಲೈವಾಸ್‌, ಸಂಜೆ 7.30ಕ್ಕೆ
ಬೆಂಗಳೂರು ಬುಲ್ಸ್‌-ಜೈಪುರ ಪಿಂಕ್‌ ಪ್ಯಾಂಥ​ರ್ಸ್‌, ರಾತ್ರಿ 8.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಅಗ್ರಸ್ಥಾನಕ್ಕೇರಿದ ಅಜೇಯ ದಬಾಂಗ್ ಡೆಲ್ಲಿ!

ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ 6 ಪಂದ್ಯಗಳಲ್ಲಿ 100 ರೈಡಿಂಗ್‌ ಅಂಕ ಗಳಿಸಿದ ದಬಾಂಗ್‌ ಡೆಲ್ಲಿಯ (Dabang Delhi) ಯುವ ರೈಡರ್‌ ನವೀನ್‌ ಕುಮಾರ್‌(Naveen Kumar), ತಮ್ಮ ತಂಡ 4ನೇ ಗೆಲುವು ಸಾಧಿಸಲು ನೆರವಾದರು. ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ, ತೆಲುಗು ಟೈಟಾನ್ಸ್‌ (Telugu Titans) ವಿರುದ್ಧ 36-35 ಅಂಕಗಳಿಂದ ಜಯಗಳಿಸಿತು. ಪಂದ್ಯದುದ್ದಕ್ಕೂ ಏಕಾಂಗಿ ಹೋರಾಟ ಪ್ರದರ್ಶಿಸಿ 25 ರೈಡ್‌ ಅಂಕ ಹೆಕ್ಕಿದ ನವೀನ್‌, ಈ ಆವೃತ್ತಿಯಲ್ಲಿ ಸತತ 6ನೇ ‘ಸೂಪರ್‌ 10’ ಸಾಧನೆಗೈದರು. ಈ ಗೆಲುವಿನೊಂದಿಗೆ ಡೆಲ್ಲಿ 26 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಟೈಟಾನ್ಸ್‌ ಮೊದಲ ಗೆಲುವಿಗಾಗಿ ಇನ್ನಷ್ಟುಕಾಯಬೇಕಾಯಿತು.

Pro Kabaddi League: ತಮಿಳ್ ತಲೈವಾಸ್‌ಗೆ ಭರ್ಜರಿ ಜಯ

ಗುಜರಾತ್‌ ವಿರುದ್ಧ ಗೆದ್ದ ಪುಣೇರಿ ಪಲ್ಟನ್‌

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧ ಪುಣೇರಿ ಪಲ್ಟನ್‌ (Puneri Paltan) 33-26 ಅಂಕಗಳಿಂದ ಜಯಗಳಿಸಿತು. ಬಲಿಷ್ಠ ರಕ್ಷಣಾ ಪಡೆಗೆ ಹೆಸರುವಾಸಿಯಾದ ಗುಜರಾತ್‌ ಸತತ 5ನೇ ಪಂದ್ಯದಲ್ಲೂ ಗೆಲ್ಲಲು ವಿಫಲವಾದರೆ, ಪುಣೆ 2ನೇ ಗೆಲುವು ದಾಖಲಿಸಿತು. ಮೋಹಿತ್‌ ಗೋಯತ್‌ 10 ರೈಡ್‌ ಅಂಕ ಪಡೆದರು. ಗುಜರಾತ್‌ನ ಅಜಯ್‌ 10, ರಾಕೇಶ್‌ 8 ರೈಡಿಂಗ್‌ ಅಂಕ ಗಳಿಸಿದರು.

Latest Videos
Follow Us:
Download App:
  • android
  • ios