* ಹರ್ಯಾಣ ಸ್ಟೀಲರ್ಸ್‌ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್* ಈ ಗೆಲುವಿನೊಂದಿಗೆ ಬುಲ್ಸ್‌ ತಂಡದ ಪ್ಲೇ ಆಫ್ಸ್‌ ಕನಸು ಜೀವಂತ* 22 ಪಂದ್ಯಗಳನ್ನು ಪೂರ್ಣಗೊಳಿಸಿದ ಬುಲ್ಸ್‌ 11 ಗೆಲುವು, 9 ಸೋಲು, 2 ಟೈ

ಬೆಂಗಳೂರು(ಫೆ.18): ಪ್ರೊ ಕಬಡ್ಡಿ 8ನೇ ಆವೃತ್ತಿಯ (Pro Kabaddi League) ಪ್ಲೇ-ಆಫ್ಸ್‌ ಪ್ರವೇಶಿಸುವ ಬೆಂಗಳೂರು ಬುಲ್ಸ್‌ (Bengaluru Bulls) ಕನಸು ಜೀವಂತವಾಗಿದೆ. ಗುರುವಾರ ಹರ್ಯಾಣ ಸ್ಟೀಲ​ರ್ಸ್‌ (Haryana Steelers) ವಿರುದ್ಧ ನಡೆದ ಪಂದ್ಯದಲ್ಲಿ 46-24 ಅಂಕಗಳ ಗೆಲುವು ಸಾಧಿಸಿತು. ಡಬಲ್‌ ರೌಂಡ್‌ ರಾಬಿನ್‌ ಹಂತದಲ್ಲಿ 22 ಪಂದ್ಯಗಳನ್ನು ಪೂರ್ಣಗೊಳಿಸಿದ ಬುಲ್ಸ್‌ 11 ಗೆಲುವು, 9 ಸೋಲು, 2 ಟೈನೊಂದಿಗೆ ಒಟ್ಟು 66 ಅಂಕ ಗಳಿಸಿದೆ. 

ಪವನ್ ಶೆರಾವತ್ (Pawan Sehrawat) ನೇತೃತ್ವದ ಬೆಂಗಳೂರು ಬುಲ್ಸ್‌ ತಂಡ ಪ್ಲೇ-ಆಫ್ಸ್‌ಗೇರಬೇಕಿದ್ದರೆ ಹರ್ಯಾಣ, ಜೈಪುರ, ಪುಣೆ ಹಾಗೂ ಗುಜರಾತ್‌ ತಂಡಗಳು ಸೋಲಬೇಕಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಯು.ಪಿ.ಯೋಧಾ 35-28ರ ಗೆಲುವು ಸಾಧಿಸಿತು.

ಒಂದೇ ಪಂದ್ಯದಲ್ಲಿ ಸೂಪರ್‌ 10, ಹೈ ಫೈವ್‌: ಪವನ್‌ ಮೊದಲಿಗ!

ಹರ್ಯಾಣ ವಿರುದ್ಧದ ಪಂದ್ಯದಲ್ಲಿ 13 ರೈಡ್‌ ಅಂಕ, 7 ಟ್ಯಾಕಲ್‌ ಅಂಕ ಪಡೆದು ಬುಲ್ಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪವನ್‌ ಶೆರಾವತ್‌ ಒಂದೇ ಪಂದ್ಯದಲ್ಲಿ ಸೂಪರ್‌ 10 (10 ಅಥವಾ 10ಕ್ಕಿಂತ ಹೆಚ್ಚು ರೈಡ್‌ ಅಂಕ) ಮತ್ತು ಹೈ ಫೈವ್‌(5 ಅಥವಾ ಅದಕ್ಕಿಂತ ಹೆಚ್ಚು ಟ್ಯಾಕಲ್‌ ಅಂಕ) ಸಾಧಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಬರೆದರು.

ಮಹಿಳಾ ಹಾಕಿ ವಿಶ್ವಕಪ್‌: ‘ಬಿ’ ಗುಂಪಿನಲ್ಲಿ ಭಾರತ

ಭುವನೇಶ್ವರ: ಜು.1ರಿಂದ ಸ್ಪೇನ್‌ ಹಾಗೂ ನೆದರ್‌ಲೆಂಡ್ಸ್‌ನಲ್ಲಿ ನಡೆಯಲಿರುವ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ (FIH Women's Hockey World Cup) ಟೂರ್ನಿಯಲ್ಲಿ ಭಾರತ ತಂಡ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಚೀನಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಇತ್ತೀಚೆಗೆ ಮಸ್ಕಟ್‌ನಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಭಾರತ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. ‘ಎ’ ಗುಂಪಿನಲ್ಲಿ ನೆದರ್‌ಲೆಂಡ್ಸ್‌, ಜರ್ಮನಿ, ಐರ್ಲೆಂಡ್‌, ಚಿಲಿ ತಂಡಗಳಿದ್ದು, ‘ಸಿ’ ಗುಂಪಿನಲ್ಲಿ ಸ್ಪೇನ್‌, ಅರ್ಜೆಂಟೀನಾ, ಕೊರಿಯಾ ಹಾಗೂ ಕೆನಡಾ ತಂಡಗಳಿವೆ. ‘ಡಿ’ ಗುಂಪಿನಲ್ಲಿ ಆಸ್ಪ್ರೇಲಿಯಾ, ಜಪಾನ್‌, ಬೆಲ್ಜಿಯಂ ಹಾಗೂ ದಕ್ಷಿಣ ಆಫ್ರಿಕಾ ಸ್ಥಾನ ಪಡೆದಿವೆ.

ಎಎಫ್‌ಸಿ ಅರ್ಹತಾ ಸುತ್ತಿಗೆ ಭಾರತ ಆತಿಥ್ಯ

ನವದೆಹಲಿ: 2023ರ ಎಎಫ್‌ಸಿ ಏಷ್ಯನ್‌ ಕಪ್‌ ಪುರುಷರ ಫುಟ್ಬಾಲ್‌ ಲೀಗ್‌ನ 3ನೇ ಸುತ್ತಿನ ಅರ್ಹತಾ ಪಂದ್ಯಗಳಿಗೆ ಭಾರತ ಆತಿಥ್ಯ ವಹಿಸಲಿದೆ. ಪಂದ್ಯಗಳು ಜೂನ್‌ 8ರಿಂದ 14ರ ವರೆಗೆ ಕೋಲ್ಕತಾದ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಧಾನ ಸುತ್ತು ಚೀನಾದಲ್ಲಿ ನಿಗದಿಯಾಗಿದ್ದು, ಭಾರತ ಕೂಡಾ ಅರ್ಹತೆ ಗಿಟ್ಟಿಸುವ ನಿರೀಕ್ಷೆಯಲ್ಲಿದೆ. ಭಾರತ ಈವರೆಗೆ ನಾಲ್ಕು ಬಾರಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದು, 1964ರಲ್ಲಿ ರನ್ನರ್‌-ಅಪ್‌ ಆಗಿತ್ತು. ಕಳೆದ ಬಾರಿ ನಾಕೌಟ್‌ ಹಂತ ತಲುಪಲು ವಿಫಲವಾಗಿತ್ತು.

ಬ್ಯಾಡ್ಮಿಂಟನ್‌: ಹಾಂಕಾಂಗ್‌ ವಿರುದ್ಧ ಭಾರತಕ್ಕೆ ಜಯ

ಶಾ ಆಲಂ(ಮಲೇಷ್ಯಾ): ಏಷ್ಯಾ ತಂಡ ಬ್ಯಾಡ್ಮಿಂಟನ್‌ ಟೂರ್ನಿಯ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಹಾಂಕಾಂಗ್‌ ವಿರುದ್ಧ 3-2ರ ಗೆಲುವು ಸಾಧಿಸಿದ ಭಾರತ, ನಾಕೌಟ್‌ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತ 0-5ರಲ್ಲಿ ಸೋಲುಂಡಿತ್ತು. 

Yuzvendra Chahal : "ಪಾಜಿ, ನಿಂಬು ಕಟ್ಟಾ ಹೇ" ರೀಲ್ ಗೆ ಸಖತ್ ರೆಸ್ಪಾನ್ಸ್!

ಲಕ್ಷ್ಯ ಸೆನ್‌, ಮಿಥುನ್‌ ಮಂಜುನಾಥ್‌ ಹಾಗೂ ಡಬಲ್ಸ್‌ನಲ್ಲಿ ಹರಿಹರನ್‌, ರುಬನ್‌ ರೆಥಿನಾಸಬಾಪತಿ ಗೆಲುವು ಸಾಧಿಸಿದರು. ಶುಕ್ರವಾರ ಹಾಲಿ ಚಾಂಪಿಯನ್‌ ಇಂಡೋನೇಷ್ಯಾ ವಿರುದ್ಧ ಭಾರತ 5-0ಯಲ್ಲಿ ಗೆದ್ದು, ಹಾಂಕಾಂಗ್‌ ವಿರುದ್ಧ ಕೊರಿಯಾ ಸೋತರೆ ಭಾರತ ನಾಕೌಟ್‌ ಪ್ರವೇಶಿಸಲಿದೆ.

ಟೆನಿಸ್‌: ಸೆಮೀಸ್‌ ತಲುಪಿದ ಸಾಕೇತ್‌-ರಾಮ್‌ ಜೋಡಿ

ಬೆಂಗಳೂರು: ಭಾರತದ ಸಾಕೇತ್‌ ಮೈನೇನಿ-ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ಬೆಂಗಳೂರು ಓಪನ್‌-2 (Bengaluru Open) ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಆದರೆ ಸಿಂಗಲ್ಸ್‌ನಲ್ಲಿ ಭಾರತ ಅಭಿಯಾನ ಅಂತ್ಯಗೊಂಡಿದೆ. 

ಗುರುವಾರ ನಡೆದ ಡಬಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಸಾಕೇತ್‌-ರಾಮ್‌ ಜೋಡಿ ಉಕ್ರೇನ್‌ನ ಒರ್ಲೊವ್‌-ಜರ್ಮನಿಯ ವೆಹ್ನೆಲ್ಟ್‌ ಜೋಡಿ ವಿರುದ್ಧ 6-4, 7-6(3) ಸೆಟ್‌ಗಳಲ್ಲಿ ಜಯ ಸಾಧಿಸಿತು. ಪ್ರಜ್ವಲ್‌ ದೇವ್‌-ನಿಕ್ಕಿ ಪೂಣಚ್ಚ ಜೋಡಿ ವಿರುದ್ಧ ಗೆದ್ದ ಅರ್ಜುನ್‌ ಖಾಡೆ-ಆಸ್ಟ್ರಿಯಾದ ಅಲೆಕ್ಸಾಂಡರ್‌ ಎರ್ಲೆರ್‌ ಜೋಡಿ ಹಾಗೂ ಶ್ರೀರಾಮ್‌ ಬಾಲಾಜಿ-ವಿಷ್ಣುವರ್ಧನ್‌ ಜೋಡಿ ಕೂಡಾ ಅಂತಿಮ 4ರ ಘಟ್ಟ ಪ್ರವೇಶಿಸಿತು. ಸಿಂಗಲ್ಸ್‌ನಲ್ಲಿ ಖಾಡೆ ಹಾಗೂ ಸಿದ್ಧಾಥ್‌ರ್‍ ರಾವತ್‌ ಸೋತು ಹೊರಬಿದ್ದರು.