Pro Kabaddi League: ಸೆಮಿಫೈನಲ್‌ಗೆ ಬೆಂಗಳೂರು ಬುಲ್ಸ್‌ ಲಗ್ಗೆ

* ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಬೆಂಗಳೂರು ಬುಲ್ಸ್‌

* ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ಗೆಲುವು

* ಬುಲ್ಸ್‌ ಸಂಘಟಿತ ಪ್ರದರ್ಶನಕ್ಕೆ ಒಲಿದ ಭರ್ಜರಿ ಗೆಲುವು

Pro Kabaddi League Bengaluru Bulls Thrash Gujarat Giants to Book Semi Final Spot kvn

- ರವಿಶಂಕರ್ ಭಟ್, ಕನ್ನಡಪ್ರಭ

ಬೆಂಗಳೂರು(ಫೆ.22): 2018ರ ಚಾಂಪಿಯನ್‌ ಬೆಂಗಳೂರು ಬುಲ್ಸ್‌ (Bengaluru Bulls) ತಂಡ ಪ್ರೊ ಕಬಡ್ಡಿ (Pro Kabaddi League) 8ನೇ ಆವೃತ್ತಿಯ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಸೋಮವಾರ ನಡೆದ 2ನೇ ಎಲಿಮಿನೇಟರ್‌ನಲ್ಲಿ ಗುಜರಾತ್‌ ಜೈಂಟ್ಸ್‌ (Gujarat Giants) ವಿರುದ್ಧ 20 ಅಂಕಗಳ (49-29) ಗೆಲುವು ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್‌ ಒಟ್ಟಾರೆ 5ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮೆರೆಯಿತು. ಬುಧವಾರ ಅದು 2ನೇ ಸೆಮಿಫೈನಲ್‌ನಲ್ಲಿ ದಬಾಂಗ್‌ ಡೆಲ್ಲಿ (Dabang Delhi) ವಿರುದ್ಧ ಹೋರಾಡಲಿದೆ.

ಭರ್ಜರಿ ಆಟ:

ಮೊದಲಾರ್ಧದ ಆರಂಭದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ಬಳಿಕ ಬುಲ್ಸ್‌ ದಾಳಿಗಾರರು ಚುರುಕಾದರು. ಲೀಗ್‌ನ 22 ಪಂದ್ಯಗಳಲ್ಲಿ 280ಕ್ಕೂ ಹೆಚ್ಚು ಅಂಕ ಕಲೆ ಹಾಕಿ ಈ ಆವೃತ್ತಿಯ ಗರಿಷ್ಠ ಅಂಕ ಗಳಿಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಾರಾ ದಾಳಿಗಾರ, ನಾಯಕ ಪವನ್‌ ಶೆರಾವತ್‌ (Pawan Sehrawat) ಹಾಗೂ ಮತ್ತೋರ್ವ ದಾಳಿಗಾರ ರಂಜಿತ್‌ ಚಂದ್ರನ್‌ ದಾಳಿಗೆ ಗುಜರಾತ್‌ ಕಂಗೆಟ್ಟಿತು. 14ನೇ ನಿಮಿಷದಲ್ಲಿ ಆಲೌಟ್‌ ಆಯಿತು. ಆಗ ಬುಲ್ಸ್‌ ಮುನ್ನಡೆ 19-10. ಕಡೆಯ 5 ನಿಮಿಷದಲ್ಲಿ ತಿರುಗಿ ಬೀಳಲು ಗುಜರಾತ್‌ ಪ್ರಯತ್ನಿಸಿತಾದರೂ, ಮಧ್ಯಂತರ ಅವಧಿಗೆ ಸ್ಕೋರ್‌ ಅಂತರವನ್ನು 24-17ಕ್ಕೆ ಇಳಿಸಲಷ್ಟೇ ಶಕ್ತವಾಯಿತು.

ದ್ವಿತೀಯಾರ್ಧದಲ್ಲಿ ಬುಲ್ಸ್‌ ದಾಳಿಗಾರರ ಆಕ್ರಮಣಕ್ಕೆ ತಂಡದ ರಕ್ಷಣಾ ಆಟಗಾರರೂ ಸಾಥ್‌ ನೀಡಿದರು. ಗುಜರಾತ್‌ ರೈಡರ್‌ಗಳನ್ನು ಹಿಡಿಹಿಡಿದು ಬೆಂಚ್‌ಗಟ್ಟಿದರು. 23ನೇ ನಿಮಿಷದಲ್ಲಿ ಭರ್ಜರಿ ದಾಳಿ ನಡೆಸಿದ ಬುಲ್ಸ್‌ನ ಭರತ್‌ 4 ಅಂಕಗಳ ಸೂಪರ್‌ ರೈಡ್‌ ದಾಖಲಿಸಿದರು. ಇದು ಗುಜರಾತ್‌ ಸೋಲಿನ ಅಂತಿಮ ಮೊಳೆ ಹೊಡೆಯಿತು ಎಂದರೆ ತಪ್ಪಾಗಲಾರದು. ಒಂದೆಡೆ ಮಿಂಚಿನ ದಾಳಿ, ಮತ್ತೊಂದೆಡೆ ಅಭೇದ್ಯ ರಕ್ಷಣಾ ಕೋಟೆ ಹೊಂದಿದ್ದ ಬುಲ್ಸ್‌ ತಂಡ ಎದುರಾಳಿ ಮೇಲೆ ಒತ್ತಡ ಹೇರುತ್ತಲೇ ಸಾಗಿತು. 25ನೇ ನಿಮಿಷದಲ್ಲಿ ಗುಜರಾತ್‌ 2ನೇ ಬಾರಿ ಆಲೌಟ್‌ ಆದಾಗ ಸ್ಕೋರ್‌ 35-21. ತೀವ್ರ ಒತ್ತಡಕ್ಕೆ ಸಿಲುಕಿದ ಗುಜರಾತ್‌ ಸತತ ದಾಳಿಗೆ ಪ್ರಯತ್ನಿಸಿದರೂ, ಯಶಸ್ಸು ಅದರದಾಗಲಿಲ್ಲ. ಅತ್ತ ಬುಲ್ಸ್‌ ಹಿಡಿತವನ್ನು ಒಂಚೂರೂ ಸಡಿಲಗೊಳಿಸಲಿಲ್ಲ. 17ನೇ ನಿಮಿಷದಲ್ಲಿ ಗುಜರಾತ್‌ 3ನೇ ಬಾರಿಗೆ ಸರ್ವ ಶರಣಾಗತಿ ತೋರಿತು. ಮತ್ತೊಮ್ಮೆ ಸೂಪರ್‌ ಟೆನ್‌ ದಾಳಿ ಮಾಡಿದ ಬುಲ್ಸ್‌ನ ಪವನ್‌ 13 ಅಂಕ ಗಳಿಸಿದರೆ, ಚಂದ್ರನ್‌ 7, ಭರತ್‌ 6 ಅಂಕ ಗಳಿಸಿದರು. ಗುಜರಾತ್‌ ಪರ ದಾಳಿಗಾರ ರಾಕೇಶ್‌ ಗರಿಷ್ಠ 8 ಅಂಕ ಗಳಿಸಿದರು.

ಪುಣೇರಿ ವಿರುದ್ಧ ಗೆದ್ದ ಯುಪಿ ಸೆಮೀಸ್‌ಗೆ

ಬೆಂಗಳೂರು: ತಾರಾ ದಾಳಿಗಾರ ಪ್ರದೀಪ್‌ ನರ್ವಾಲ್‌ ತ್ರಿವಳಿ ಸೂಪರ್‌ ರೈಡ್‌ ನೆರವಿನಿಂದ ಯುಪಿ ಯೋಧಾ (U.P. Yoddha) ತಂಡ 42-31ರಿಂದ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿ ಪ್ರೊ ಕಬಡ್ಡಿ 8ನೇ ಆವೃತ್ತಿಯ ಸೆಮಿಫೈನಲ್‌ ಪ್ರವೇಶಿಸಿದೆ. ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಯುಪಿ ತಂಡವು 3 ಬಾರಿಯ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧ ಸೆಣಸಲಿದೆ.

ಸೋಮವಾರ ನಡೆದ ಮೊದಲ ಎಲಿಮಿನೇಟರ್‌ನ ಮೊದಲಾರ್ಧದ ಕೆಲ ನಿಮಿಷಗಳನ್ನು ಹೊರತುಪಡಿಸಿ ಇಡೀ ಪಂದ್ಯದ ಮೇಲೆ ಯುಪಿ ಹಿಡಿತ ಸಾಧಿಸಿತ್ತು. 6ನೇ ನಿಮಿಷದ ವೇಳೆಗೆ 9-1ರಿಂದ ಮುಂದಿದ್ದ ಯುವ ತಂಡ ಪುಣೇರಿಗೆ ನಂತರ ಯುಪಿ ತನ್ನ ಅನುಭವದ ಪರಾಕ್ರಮ ತೋರಿತು. ಪ್ರದೀಪ್‌ ಅವರ 5 ಅಂಕಗಳ ಸೂಪರ್‌ ರೈಡ್‌ ನೆರವಿನಿಂದ ಮಧ್ಯಂತರ ವೇಳೆಗೆ 17-12ರ ಮುನ್ನಡೆ ಸಾಧಿಸಿತು.

Pro Kabaddi League: ಪ್ಲೇ-ಆಫ್ ಆರಂಭ, ಬೆಂಗಳೂರು ಬುಲ್ಸ್‌-ಗುಜರಾತ್ ಜೈಂಟ್ಸ್‌ ಎಲಿಮಿನೇಟರ್‌ ಮುಖಾಮುಖಿ

ದ್ವಿತೀಯಾರ್ಧವಿಡೀ ಯುಪಿಯದೇ ಆಗಿತ್ತು. ಮತ್ತೆರಡು ಬಾರಿ ಸೂಪರ್‌ ರೈಡ್‌ ನಡೆಸಿದ ಪ್ರದೀಪ್‌, ಪುಣೇರಿಗೆ ಚೇತರಿಸಲಾಗದ ಆಘಾತ ನೀಡಿದರು. ಈ ಆವೃತ್ತಿಯಲ್ಲಿ ಭಾರೀ ಲಯದಲ್ಲಿರದ ಪ್ರದೀಪ್‌ ನಿರ್ಣಾಯಕ ಪಂದ್ಯದಲ್ಲಿ 18 ಅಂಕ ಗಳಿಸಿ ತಂಡವನ್ನು ಸೆಮಿಫೈನಲ್‌ಗೆ ಒಯ್ದರು. ಮತ್ತೊಬ್ಬ ದಾಳಿಗಾರ ಸುರೇಂದರ್‌, ರಕ್ಷಣಾ ಆಟಗಾರ ಸುಮಿತ್‌ ತಲಾ 5 ಅಂಕ ಗಳಿಸಿದರು. ಪುಣೇರಿ ಪರ ದಾಳಿಗಾರ ಅಸ್ಲಾಂ ಇನಾಂದಾರ್‌ ಸೂಪರ್‌ ಟೆನ್‌ ಅಂಕ ಕಲೆ ಹಾಕಿದರಾದರೂ, ತಂಡವನ್ನು ಸೆಮಿಫೈನಲ್‌ಗೆ ಏರಿಸಲು ಅದು ಸಾಕಾಗಲಿಲ್ಲ.

Latest Videos
Follow Us:
Download App:
  • android
  • ios