Pro Kabaddi League: ಪ್ಲೇ-ಆಫ್ ಆರಂಭ, ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ಎಲಿಮಿನೇಟರ್ ಮುಖಾಮುಖಿ
* ಪ್ರೊ ಕಬಡ್ಡಿ ಲೀಗ್‌ನಲ್ಲಿ ಪ್ಲೇ-ಆಫ್ ಪಂದ್ಯಗಳ ಕ್ಷಣಗಣನೆ
* ಮೊದಲ ಎಲಿಮಿನೇಟರ್‌ನಲ್ಲಿ ಪುಣೇರಿ ಪಲ್ಟನ್-ಯು.ಪಿ.ಯೋಧಾ ಮುಖಾಮುಖಿ
* 2ನೇ ಎಲಿಮಿನೇಟರ್‌ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್ ಮುಖಾಮುಖಿ
ಬೆಂಗಳೂರು(ಫೆ.21): 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಪ್ಲೇ-ಆಫ್ ಹಂತದ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಪಾಟ್ನಾ ಪೈರೇಟ್ಸ್(Patna Pirates), ದಬಾಂಗ್ ಡೆಲ್ಲಿ (Dabang Delhi) ಬಳಿಕ ಸೆಮಿಫೈನಲ್ ಪ್ರವೇಶಿಸುವ ಇನ್ನೆರಡು ತಂಡಗಳು ಯಾವುದೆಂದು ಸೋಮವಾರ ನಿರ್ಧಾರವಾಗಲಿದೆ. ಮೊದಲ ಎಲಿಮಿನೇಟರ್‌ನಲ್ಲಿ ಪುಣೇರಿ ಪಲ್ಟನ್ (Puneri Paltan)-ಯು.ಪಿ.ಯೋಧಾ (U.P Yoddha), 2ನೇ ಎಲಿಮಿನೇಟರ್‌ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) -ಗುಜರಾತ್ ಜೈಂಟ್ಸ್ (Gujarat Giants) ಮುಖಾಮುಖಿಯಾಗಲಿವೆ. ಗೆಲ್ಲುವ ತಂಡಗಳು ಸೆಮಿಫೈನಲ್ ಪ್ರವೇಶಿಸಿದರೆ, ಸೋಲುವ ತಂಡಗಳು ಲೀಗ್‌ನಿಂದ ನಿರ್ಗಮಿಸಲಿವೆ.
ಅಂಕ ಪಟ್ಟಿಯಲ್ಲಿ 6ನೇ ಸ್ಥಾನಿಯಾಗಿ ಪ್ಲೇ-ಆಫ್ ತಲುಪಿದ ಪುಣೆ, 3ನೇ ಸ್ಥಾನದಲ್ಲಿದ್ದ ಯು.ಪಿ.ಯೋಧಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೊದಲ ಸೆಮೀಸ್‌ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ. ಪಾಟ್ನಾ ಪೈರೇಟ್ಸ್ ತಂಡವು ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಪ್ಲೇ ಆಫ್ಸ್‌ಗೆ ಮೊದಲ ತಂಡವಾಗಿ ಅರ್ಹತೆಯನ್ನು ಗಿಟ್ಟಿಸಿಕೊಂಡಿತ್ತು.
ಇನ್ನು, 66 ಅಂಕದೊಂದಿಗೆ 5ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿರುವ ಪವನ್ ಕುಮಾರ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್‌ಗೆ 4ನೇ ಸ್ಥಾನ ಪಡೆದ ಗುಜರಾತ್ ಜೈಂಟ್ಸ್ ಸವಾಲು ಎದುರಾಗಲಿದೆ. ಡಬಲ್ ರೌಂಡ್ ರಾಬಿನ್ ಹಂತದ 2 ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿದ್ದು, ಈ ಪಂದ್ಯದಲ್ಲಿ ಗುಜರಾತ್ ರಕ್ಷಣಾ ಪಡೆಯನ್ನು ಹಿಮ್ಮೆಟ್ಟಿಸಿ ಸೆಮೀಸ್ ತಲುಪಲು ಬೆಂಗಳೂರು ಬುಲ್ಸ್ ಕಾತರಿಸುತ್ತಿದೆ. ಗೆಲ್ಲುವ ತಂಡ 2ನೇ ಸೆಮೀಸ್‌ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಆಡಲಿದೆ. ಬೆಂಗಳೂರು ಬುಲ್ಸ್ ತಂಡವು ರೈಡಿಂಗ್ ಹಾಗೂ ಡಿಫೆನ್ಸ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದರೆ ಗುಜರಾತ್ ಜೈಂಟ್ಸ್ ತಂಡವನ್ನು ಬಗ್ಗುಬಡಿಯುವುದು ಕಷ್ಟವೇನಲ್ಲ.
Pro Kabaddi League: ಬೆಂಗಳೂರು ಬುಲ್ಸ್‌ಗೆ ಒಲಿದ ಪ್ಲೇ-ಆಫ್ ಅದೃಷ್ಟ
ಪಂದ್ಯ:
ಪುಣೇರಿ ಪಲ್ಟನ್- ಯು.ಪಿ. ಯೋಧಾ, ಸಂಜೆ 7.30ಕ್ಕೆ
ಬೆಂಗಳೂರು ಬುಲ್ಸ್ - ಗುಜರಾತ್ ಜೈಂಟ್ಸ್, ರಾತ್ರಿ 8.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್
ಬೆಂಗಳೂರು ಓಪನ್: ಅಲೆಕ್ಸಾಂಡರ್ ವುಕಿಚ್ ಸಿಂಗಲ್ಸ್ ಚಾಂಪಿಯನ್
ಬೆಂಗಳೂರು: ಬೆಂಗಳೂರು ಓಪನ್-2 ಎಟಿಪಿ ಟೆನಿಸ್ ಟೂರ್ನಿಯಲ್ಲಿ (Bengaluru Open) ಆಸ್ಪ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ವುಕಿಚ್, ಬಲ್ಗೇರಿಯಾದ ಡಿಮಿಟರ್ ಕುಜ್ಮನೊವ್ ವಿರುದ್ಧ 6-4, 6-4 ನೇರ ಸೆಟ್‌ಗಳಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. 25 ವರ್ಷದ ವುಕಿಚ್ 7200 ಅಮೆರಿಕನ್ ಡಾಲರ್(ಸುಮಾರು 5.4 ಲಕ್ಷ ರುಪಾಯಿ) ಬಹುಮಾನ ಪಡೆದಿದ್ದಾರೆ.
ವಾಲಿಬಾಲ್: ಬೆಂಗಳೂರು ತಂಡಕ್ಕೆ 3ನೇ ಸೋಲು
ಹೈದರಾಬಾದ್: ಚೊಚ್ಚಲ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್)ನಲ್ಲಿ ಬೆಂಗಳೂರು ಟಾರ್ಪೆಡೊಸ್ ತಂಡದ ಸೆಮಿಫೈನಲ್ ಹಾದಿ ಕಠಿಣಗೊಂಡಿದೆ. ಭಾನುವಾರ ನಡೆದ ರೌಂಡ್ ರಾಬಿನ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ತಂಡ, ಚೆನ್ನೈ ಬ್ಲಿಟ್ಜ್ ವಿರುದ್ಧ 15-9, 12-15, 13-15, 9-15, 15-12 ಸೆಟ್‌ಗಳಲ್ಲಿ ಸೋಲುಂಡಿತು. ಇದರೊಂದಿಗೆ 6 ಪಂದ್ಯಗಳಲ್ಲಿ ತಲಾ 3 ಗೆಲುವು, ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದಿದೆ.
ಒಟ್ಟು 7 ತಂಡಗಳು ಸ್ಪರ್ಧಿಸುತ್ತಿರುವ ಲೀಗ್‌ನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮೀಸ್ ಪ್ರವೇಶಿಸಲಿವೆ. ರೌಂಡ್ ರಾಬಿನ್ ಹಂತದಲ್ಲಿ 3 ಪಂದ್ಯಗಳು ಬಾಕಿ ಉಳಿದಿದ್ದು, ಈ ಪಂದ್ಯಗಳ ಫಲಿತಾಂಶ ಬೆಂಗಳೂರು ಟಾರ್ಪೆಡೊಸ್ ತಂಡ ಸೆಮೀಸ್ ಭವಿಷ್ಯವನ್ನು ನಿರ್ಧರಿಸಲಿವೆ.