* ಪ್ರೊ ಕಬಡ್ಡಿ ಲೀಗ್‌ನ ಸೆಮಿಫೈನಲ್‌ ಕದನಕ್ಕೆ ಕ್ಷಣಗಣನೆ* ಮೊದಲ ಸೆಮಿಫೈನಲ್‌ನಲ್ಲಿ ಯು.ಪಿ. ಯೋಧಾ ಹಾಗೂ ಪಾಟ್ನಾ ಪೈರೇಟ್ಸ್‌ ಮುಖಾಮುಖಿ* ಎರಡನೇ ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ-ಬೆಂಗಳೂರು ಬುಲ್ಸ್‌ ಸೆಣಸಾಟ

ಬೆಂಗಳೂರು(ಫೆ.23): 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ (Pro Kabaddi League) ಅಂತಿಮ ಹಂತ ತಲುಪಿದ್ದು, ಬುಧವಾರ ನಡೆಯಲಿರುವ ಸೆಮಿಫೈನಲ್‌ ಹಣಾಹಣಿಯಲ್ಲಿ 3 ಬಾರಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ (Patna Pirates) - ಯು.ಪಿ.ಯೋಧಾ (UP Yoddha) ಹಾಗೂ ಬೆಂಗಳೂರು ಬುಲ್ಸ್‌ (Bengaluru Bulls) -ದಬಾಂಗ್‌ ಡೆಲ್ಲಿ (Dabang Delhi) ಮುಖಾಮುಖಿಯಾಗಲಿವೆ. ಸೋಮವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದು ಸೆಮೀಸ್‌ ತಲುಪಿರುವ ಪವನ್‌ ಕುಮಾರ್‌ ಶೆರಾವತ್ (Pawan Sehrawat) ನಾಯಕತ್ವದ ಬುಲ್ಸ್‌, 3ನೇ ಬಾರಿ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. 

2015ರಲ್ಲಿ ಮೊದಲ ಬಾರಿ ಫೈನಲ್‌ ತಲುಪಿದ್ದ ಬೆಂಗಳೂರು ಬುಲ್ಸ್‌ ತಂಡ 2018ರಲ್ಲಿ ಗುಜರಾತ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಗಿತ್ತು. 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ತಂಡಕ್ಕೆ ಇದೀಗ ಡೆಲ್ಲಿ ಸವಾಲು ಎದುರಾಗಿದೆ. ರೌಂಡ್‌ ರಾಬಿನ್‌ ಹಂತದ 2 ಮುಖಾಮುಖಿಯಲ್ಲಿ ಬುಲ್ಸ್‌ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 61-22 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರೆ, 2ನೇ ಪಂದ್ಯ ಟೈ ಆಗಿತ್ತು. 23 ಪಂದ್ಯಗಳಲ್ಲಿ 286 ರೈಡ್‌ ಅಂಕ ಸಂಪಾದಿಸಿರುವ ಪವನ್‌ ಬುಲ್ಸ್‌ ಆಧಾರಸ್ತಂಭವಾಗಿದ್ದು, ಭರತ್‌ ಹಾಗೂ ಚಂದ್ರನ್‌ ರಂಜಿತ್‌ ಕೂಡಾ ಅಗತ್ಯ ನೆರವು ನೀಡುತ್ತಿದ್ದಾರೆ. ಸೌರಭ್‌ ನಂದಲ್‌, ಅಮಾನ್‌ ಹಾಗೂ ಮಹೇಂದ್ರ ಸಿಂಗ್‌ ಒಳಗೊಂಡ ರಕ್ಷಣಾ ಪಡೆಯೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಡೆಲ್ಲಿ ವಿರುದ್ಧವೂ ಮೇಲುಗೈ ಸಾಧಿಸುವ ತವಕದಲ್ಲಿದೆ. ಇನ್ನು, ರೌಂಡ್‌ ರಾಬಿನ್‌ ಹಂತದಲ್ಲಿ 2ನೇ ಸ್ಥಾನಿಯಾಗಿ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದ್ದ ಡೆಲ್ಲಿ ಆಲ್ರೌಂಡ್‌ ಆಟದ ಮೂಲಕ ಮಿಂಚುತ್ತಿದೆ. ತಾರಾ ರೈಡರ್‌ ನವೀನ್‌ ಕುಮಾರ್‌ರನ್ನು ಕಟ್ಟಿಹಾಕಿದರೆ ಮಾತ್ರ ಬುಲ್ಸ್‌ಗೆ ಗೆಲುವು ದಕ್ಕಲಿದೆ.

ಪಾಟ್ನಾಗೆ 4ನೇ ಫೈನಲ್‌ ಗುರಿ: 2016ರ ಬಳಿಕ ಹ್ಯಾಟ್ರಿಕ್‌ ಚಾಂಪಿಯನ್‌ ಆಗಿದ್ದ ಪಾಟ್ನಾ ಪೈರೇಟ್ಸ್‌ ಈ ಬಾರಿ ನಂ.1 ತಂಡವಾಗಿ ಸೆಮೀಸ್‌ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ಕನ್ನಡಿಗೆ ಪ್ರಶಾಂತ್‌ ಕುಮಾರ್‌ ನೇತೃತ್ವದ ತಂಡ ಬುಧವಾರ ಸೆಮೀಸ್‌ನಲ್ಲಿ ಯು.ಪಿ.ಯೋಧಾ ಸವಾಲನ್ನು ಮೆಟ್ಟಿನಿಲ್ಲುವ ನಿರೀಕ್ಷೆಯಲ್ಲಿದೆ. ತಾರಾ ರೈಡರ್‌ ಪ್ರದೀಪ್‌ ನರ್ವಾಲ್‌ ಸೇರಿದಂತೆ ಪ್ರಮುಖರನ್ನು ಒಳಗೊಂಡ ಯೋಧಾ ಮೊದಲ ಬಾರಿ ಫೈನಲ್‌ ಪ್ರವೇಶಿಸುವ ತವಕದಲ್ಲಿದೆ.

Scroll to load tweet…

ಪಂದ್ಯಗಳು:

ಪಾಟ್ನಾ-ಯು.ಪಿ.ಯೋಧಾ, ಸಂಜೆ 7.30ಕ್ಕೆ, 
ಬೆಂಗಳೂರು-ಡೆಲ್ಲಿ, ರಾತ್ರಿ 8.30ಕ್ಕೆ, 
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್

ಚೆಸ್‌: ಭಾರತದ ಪ್ರಜ್ಞಾನಂದಗೆ ಮತ್ತೆರಡು ಸುತ್ತಿನಲ್ಲಿ ಗೆಲುವು

ಚೆನ್ನೈ: ಐದು ಬಾರಿ ಚೆಸ್‌ ವಿಶ್ವ ಚಾಂಪಿಯನ್‌, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾಲ್‌ರ್‍ಸೆನ್‌ರನ್ನು ಸೋಲಿಸಿ ಗಮನ ಸೆಳೆದಿದ್ದ ಭಾರತದ ಯುವ ಗ್ರಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ (R Praggnanandhaa) ಮತ್ತೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಮಂಗಳವಾರ ಏರ್‌ಥಿಂಗ್ಸ್‌ ಮಾಸ್ಟ​ರ್ಸ್‌ ಆನ್‌ಲೈನ್‌ ರ‍್ಯಾಪಿಡ್‌ ಚೆಸ್‌ ಟೂರ್ನಿಯ 10ನೇ ಸುತ್ತಿನಲ್ಲಿ ರಷ್ಯಾದ ಆ್ಯಂಡ್ರೆ ಎಸಿಪೆಂಕೊ ಹಾಗೂ 12ನೇ ಸುತ್ತಿನಲ್ಲಿ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್‌ ವಿರುದ್ಧ ಗೆಲುವು ಸಾಧಿಸಿದರು. ಆದರೆ 11ನೇ ಸುತ್ತಿನಲ್ಲಿ ರಷ್ಯಾದ ಇಯಾನ್‌ ನೆಪೋಮ್ನಿಯಾಚಿ ವಿರುದ್ಧ ಸೋಲನುಭವಿಸಿದರು. 2 ಗೆಲುವಿನ ಹೊರತಾಗಿಯೂ ಪ್ರಜ್ಞಾನಂದ 15 ಅಂಕದೊಂದಿಗೆ 12ನೇ ಸ್ಥಾನದಲ್ಲಿದ್ದಾರೆ. ಅಗ್ರ 8 ಆಟಗಾರರು ಮಾತ್ರ ನಾಕೌಟ್‌ ಹಂತ ಪ್ರವೇಶಿಸಲಿದ್ದಾರೆ.

Pro Kabaddi League: ಸೆಮಿಫೈನಲ್‌ಗೆ ಬೆಂಗಳೂರು ಬುಲ್ಸ್‌ ಲಗ್ಗೆ

ಈ ಮೊದಲು ಪ್ರಜ್ಞಾನಂದ, ನಾರ್ವೆಯ ದಿಗ್ಗಜ ಆಟಗಾರ ಮ್ಯಾಗ್ನಸ್‌ ಕಾಲ್‌ರ್‍ಸೆನ್‌ ವಿರುದ್ಧ ಗೆದ್ದ ಭಾರತದ 3ನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಐದು ಬಾರಿ ಚೆಸ್‌ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಹಾಗೂ ಕಿರಿಯರ ವಿಶ್ವ ಚಾಂಪಿಯನ್‌ ಪಿ.ಹರಿಕೃಷ್ಣ ಅವರು ಮ್ಯಾಗ್ನಸ್‌ರನ್ನು ಸೋಲಿಸಿದ್ದರು.