Pro Kabaddi League: 930 ಮಂದಿ, 5 ತಿಂಗಳು ಬಯೋಬಬಲ್ ವನವಾಸ..!
* 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಯಶಸ್ವಿ
* ನಿರ್ಣಾಯಕ ಘಟ್ಟ ತಲುಪಿದ ಪ್ರೊ ಕಬಡ್ಡಿ ಲೀಗ್
* 235 ಆಟಗಾರರು ಸೇರಿ ಒಟ್ಟು 930 ಮಂದಿ ಸತತ 5 ತಿಂಗಳ ಕಾಲ ಬಯೋಬಬಲ್‌ನಲ್ಲಿ ಭಾಗಿ
- ಸ್ಪಂದನ್ ಕಣಿಯಾರ್, ಕನ್ನಡಪ್ರಭ
ಬೆಂಗಳೂರು(ಫೆ.24): ಕಬಡ್ಡಿ ಒಳಾಂಗಣ ಕ್ರೀಡೆ. ಆಟಗಾರರು ಪರಸ್ಪರ ಸಂಪರ್ಕಕ್ಕೆ ಬರದೆ ಆಟ ನಡೆಯುವುದಿಲ್ಲ. ಕೋವಿಡ್‌ನಿಂದಾಗಿ ಕಳೆದ ವರ್ಷ ನಡೆಯದೆ ಪ್ರೊ ಕಬಡ್ಡಿ ಟೂರ್ನಿಯನ್ನು (Pro Kabaddi League) ಈ ಸಲ ನಡೆಸಲು ಇದ್ದಿದ್ದು ಒಂದೇ ಆಯ್ಕೆ. ಅದು ಬಯೋಬಬಲ್‌ನೊಳಗೆ (bio bubble) ನಡೆಸುವುದು. 8ನೇ ಆವೃತ್ತಿಯ ಪ್ರೊ ಕಬಡ್ಡಿ ಫೈನಲ್ ಹಂತ ತಲುಪಿರುವಾಗ ಟೂರ್ನಿ ಯಶಸ್ಸಿನ ಹಿಂದಿರುವ ರಹಸ್ಯವೇನು ಎನ್ನುವುದಕ್ಕೆ ಬಯೋಬಬಲ್ ಎನ್ನುವುದೇ ಉತ್ತರ. 235 ಆಟಗಾರರು ಸೇರಿ ಒಟ್ಟು 930 ಮಂದಿ ಸತತ 5 ತಿಂಗಳ ಕಾಲ ಬಯೋಬಬಲ್‌ನೊಳಗೆ ಇದ್ದಿದ್ದರಿಂದ ಟೂರ್ನಿ ಯಶಸ್ಸು ಕಾಣಲು ಸಾಧ್ಯವಾಯಿತು.
ಟೂರ್ನಿ ನಡೆಸಲು ಆಯೋಜಕರು ಆಯ್ದುಕೊಂಡಿದ್ದು ಬೆಂಗಳೂರನ್ನು (Bengaluru). ನಗರದ ಹೊರವಲಯದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ತಂಡಗಳ ವಾಸ್ತವ್ಯ. ಪ್ರಸಾರಕರು ಸೇರಿ ಉಳಿದ ಸಿಬ್ಬಂದಿಗೆ ಮತ್ತೊಂದು ಹೋಟೆಲ್. ಹೋಟೆಲ್ ಆವರಣದಲ್ಲಿರುವ ಕನ್ವೆನ್ಷನ್ ಹಾಲ್ ಅನ್ನೇ ಕಬಡ್ಡಿ ಅಂಕಣವನ್ನಾಗಿ ಪರಿವರ್ತಿಸಿ ಪ್ರೇಕ್ಷಕರಿಲ್ಲದೆ 3 ತಿಂಗಳು ಟೂರ್ನಿ ನಡೆಸಲಾಗಿದೆ. ಇಷ್ಟು ಕೇಳಲು ಸರಳವೆನಿಸಿದರೂ, ವಾಸ್ತವದಲ್ಲಿ ಬಹಳ ಕಠಿಣ. ಟೂರ್ನಿ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ಕನಿಷ್ಠ ಒಂದೂವರೆ ಎರಡು ತಿಂಗಳ ಕಾಲ ಅಭ್ಯಾಸ ಶಿಬಿರ ಆಯೋಜಿಸಿದ್ದವು.
ನಿತ್ಯ ಕೋವಿಡ್ ಪರೀಕ್ಷೆ: ಆಟಗಾರರಿಗೆ ನಿತ್ಯ ಕೋವಿಡ್ ಪರೀಕ್ಷೆ (COVID Test) ನಡೆಸಲಾಗುತ್ತಿತ್ತು. ಸಿಬ್ಬಂದಿಯನ್ನೂ ನಿರಂತರ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಅತ್ಯಂತ ಕಠಿಣ ಬಯೋಬಬಲ್‌ನೊಳಗಿದ್ದರೂ ಕೆಲ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಆಯೋಜಕರು ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿಯಾದರು.
Pro Kabaddi League : ಬೆಂಗಳೂರು ಬುಲ್ಸ್ ಗೆ ನಿರಾಸೆ, ಪಟನಾ-ದೆಹಲಿ ಪ್ರಶಸ್ತಿ ಕಾದಾಟ!
ಆರಂಭದಲ್ಲಿ ಆತಂಕವಿತ್ತು. ಆದರೆ ಆಯೋಜಕರು ಯಾವುದಕ್ಕೂ ಕೊರತೆ ಮಾಡಿಲ್ಲ. ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ. ಈ ಆವೃತ್ತಿಯ ಯಶಸ್ಸು ಟೂರ್ನಿಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಸಲ್ಲಬೇಕು. - ರಾಮ್‌ಮೆಹೆರ್ ಸಿಂಗ್, ಪಾಟ್ನಾ ಕೋಚ್
ಡೆಲ್ಲಿ vs ಪಾಟ್ನಾ ಪ್ರೊ ಕಬಡ್ಡಿ ಫೈನಲ್
ರೈಡ್ ಮಷಿನ್ ಪವನ್ ಕುಮಾರ್‌ರ ಏಕಾಂಗಿ ಹೋರಾಟ ಬೆಂಗಳೂರು ಬುಲ್ಸ್ (Bengaluru Bulls) ಫೈನಲ್‌ಗೇರಲು ಸಾಕಾಗಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಡಿಫೆಂಡರ್‌ಗಳು, ಸಹಾಯಕ ರೈಡರ್‌ಗಳು ವೈಫಲ್ಯ ಅನುಭವಿಸಿದ ಪರಿಣಾಮ, 8ನೇ ಆವೃತ್ತಿಯ ಪ್ರೊ ಕಬಡ್ಡಿ ಸೆಮಿಫೈನಲ್‌ನಲ್ಲಿ ಬೆಂಗಳೂರು ತಂಡ ದಬಾಂಗ್ ಡೆಲ್ಲಿ (Dabang Delhi) ವಿರುದ್ಧ 35-40ರಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿತ್ತು.
7ನೇ ಆವೃತ್ತಿಯ ಸೆಮಿಫೈನಲ್‌ನಲ್ಲೂ ಬುಲ್ಸ್, ಡೆಲ್ಲಿಗೆ ಶರಣಾಗಿತ್ತು. ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ, ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಯು.ಪಿ.ಯೋಧಾಗೆ ಸೋಲುಣಿಸಿದ ಪಾಟ್ನಾ ಪೈರೇಟ್ಸ್ 4ನೇ ಬಾರಿಗೆ ಫೈನಲ್‌ಗೇರಿತು.
ಪ್ರದೀಪ್ ಕಟ್ಟಿಹಾಕಿದ ಪಾಟ್ನಾಕ್ಕೆ ಯಶಸ್ಸು!
ಪಾಟ್ನಾ ಪೈರೇಟ್ಸ್‌ಗೆ ಗೆಲುವಿನ ಸೂತ್ರ ಸುಲಭವಾಗಿತ್ತು. ಯು.ಪಿ.ಯೋಧಾದ ತಾರಾ ರೈಡರ್, ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತಿಹೆಚ್ಚು ಅಂಕ ಗಳಿಸಿರುವ ಪ್ರದೀಪ್ ನರ್ವಾಲ್‌ರನ್ನು ಕಟ್ಟಿಹಾಕಿದರೆ ಪಂದ್ಯ ಗೆದ್ದಂತೆ ಎನ್ನುವುದು ಪಾಟ್ನಾಕ್ಕೆ ತಿಳಿದಿತ್ತು. ಈ ಹಿಂದೆ ಪಾಟ್ನಾಗೆ 3 ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ ಪ್ರದೀಪ್ 16 ಬಾರಿ ದಾಳಿಗಿಳಿದು ಗಳಿಸಿದ್ದು ಕೇವಲ 4 ಅಂಕಗಳನ್ನು. 6 ಬಾರಿ ಔಟಾಗಿ ಹೆಚ್ಚು ಸಮಯ ಅಂಕಣದಿಂದ ಹೊರಗೇ ಕಳೆದರು. ಇದು ಪಾಟ್ನಾ 38-27ರ ದೊಡ್ಡ ಗೆಲುವು ಸಂಪಾದಿಸಲು ಕಾರಣವಾಯಿತು.
ಮೊದಲಾರ್ಧದಲ್ಲೇ ಯೋಧಾ ಪಡೆ 2 ಬಾರಿ ಆಲೌಟ್ ಆಯಿತು. ಮಧ್ಯಂತರಕ್ಕೆ 23-9ರ ಮುನ್ನಡೆ ಸಂಪಾದಿಸಿ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ದ್ವಿತೀಯಾರ್ಧದಲ್ಲಿ ಯೋಧಾ ಪ್ರತಿರೋಧ ಒಡ್ಡಿದರೂ, ಸಾಕಾಗಲಿಲ್ಲ. ಶ್ರೀಕಾಂತ್ ಜಾಧವ್‌ರ 10 ಅಂಕಗಳ ಹೋರಾಟ ಫಲ ನೀಡಲಿಲ್ಲ. ಪಾಟ್ನಾ ಪರ ಗುಮಾನ್ ಸಿಂಗ್ 8 ರೈಡ್ ಅಂಕಗಳನ್ನು ಗಳಿಸಿದರೆ, ಮೊಹಮದ್‌ರೆಜಾ ಶಾದ್ರ್ಲೂ 6 ಟ್ಯಾಕಲ್ ಅಂಕ ಗಳಿಸಿ ಮಿಂಚಿದರು.
ಶುಕ್ರವಾರ ಫೈನಲ್ ಹಣಾಹಣಿ
ಪಾಟ್ನಾ ಪೈರೇಟ್ಸ್ ಹಾಗೂ ದಬಾಂಗ್ ಡೆಲ್ಲಿ ನಡುವಿನ ಫೈನಲ್ ಪಂದ್ಯ ಶುಕ್ರವಾರ ನಡೆಯಲಿದೆ. ಪಂದ್ಯ ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ. ಪಾಟ್ನಾ 4ನೇ ಬಾರಿಗೆ ಚಾಂಪಿಯನ್ ಆಗಲು ಎದುರು ನೋಡುತ್ತಿದ್ದರೆ, ಡೆಲ್ಲಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.