ಪ್ರೊ ಕಬಡ್ಡಿ 2019: ನೇರ ಸೆಮೀಸ್‌ಗೆ ಡೆಲ್ಲಿ, ಬೆಂಗಾಲ್
7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಗ್ರೇಟರ್ ನೋಯ್ಡಾ[ಅ.12]: ಪ್ರೊ ಕಬಡ್ಡಿ 7ನೇ ಆವೃತ್ತಿ ಅತಿ ಹೆಚ್ಚು ಪೈಪೋಟಿಗೆ ಸಾಕ್ಷಿಯಾಗಿದ್ದು, ಅ.14 ರಿಂದ 6 ತಂಡಗಳ ನಡುವೆ ಪ್ಲೇ ಆಫ್ ಹಂತ ಶುರುವಾಗಲಿದೆ. ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಅಥವಾ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವುದೇ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಪಟ್ಟಿಯಲ್ಲಿ ಕ್ರಮವಾಗಿ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯುಪಿ ಯೋಧಾ, ಯು ಮುಂಬಾ, ಹರ್ಯಾಣ ಸ್ಟೀಲರ್ಸ್ ಹಾಗೂ ಬೆಂಗಳೂರು ಬುಲ್ಸ್ ಪ್ಲೇ ಆಫ್ನಲ್ಲಿ ಜಿದ್ದಾಜಿದ್ದಿನ ಸೆಣಸಾಟಕ್ಕೆ ಸಜ್ಜಾಗಿವೆ.
ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್
ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ. ಪಟ್ಟಿಯಲ್ಲಿ ಮೊದಲ 2 ಸ್ಥಾನಗಳಿಸಿದ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದವು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವನ್ನು ಬಗ್ಗು ಬಡಿದ ಯುಪಿ ಯೋಧಾ 3ನೇ ಸ್ಥಾನಿಯಾಗಿದ್ದು, ಅ. 14 ರಂದು ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಎದುರಿಸಲಿದೆ. 4 ಮತ್ತು 5ನೇ ಸ್ಥಾನ ಪಡೆದ ಯು ಮುಂಬಾ ಹಾಗೂ ಹರಾರಯಣ ಸ್ಟೀಲರ್ಸ್ 2ನೇ ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಎಲಿಮಿನೇಟರ್‌ನಲ್ಲಿ ಸೋತ ತಂಡಗಳು ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ. ಅ. 16 ರಂದು 2 ಸೆಮೀಸ್ ಪಂದ್ಯಗಳು ನಡೆಯಲಿವೆ. 19ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ಪ್ಲೇ ಆಫ್‌ನ ಎಲ್ಲಾ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿವೆ.
ಯೋಧಾಗೆ ಮಣಿದ ಬುಲ್ಸ್:
ಪ್ರೊ ಕಬಡ್ಡಿ 7ನೇ ಆವೃತ್ತಿಯ ಲೀಗ್ ಹಂತ ಶುಕ್ರವಾರ ಮುಕ್ತಾಯ ಕಂಡಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಯುಪಿ ಯೋಧಾ ವಿರುದ್ಧ 33-45 ಅಂಕಗಳಲ್ಲಿ ಪರಾಭವ ಹೊಂದಿತು. ಮೊದಲಾರ್ಧದಲ್ಲಿ 22-20 ರಿಂದ ಮುನ್ನಡೆ ಸಾಧಿಸಿದ್ದ ಬೆಂಗಳೂರು ತಂಡ, ದ್ವಿತೀಯಾರ್ಧದಲ್ಲಿ ಹಿನ್ನಡೆ ಅನುಭವಿಸಿತು. ಈ ಪಂದ್ಯ ಗೆದ್ದಿದ್ದರೇ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮೇಲಕ್ಕೇರುತ್ತಿತ್ತು.
ಇದಕ್ಕೂ ಮುನ್ನ ದಬಾಂಗ್ ಡೆಲ್ಲಿ ಹಾಗೂ ಯು ಮುಂಬಾ ವಿರುದ್ಧದ ಪಂದ್ಯ 37-37 ಅಂಕಗಳಲ್ಲಿ ಟೈನಲ್ಲಿ ಅಂತ್ಯವಾಯಿತು. ಈ ಆವೃತ್ತಿಯ ಟೂರ್ನಿಯಲ್ಲಿ ಇದು 13ನೇ ಟೈ ಆಗಿದೆ. ಮೊದಲಾರ್ಧದಲ್ಲಿ ಡೆಲ್ಲಿ, ಮುಂಬಾ ವಿರುದ್ಧ 24-13ರಲ್ಲಿ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಪಂದ್ಯ ಟೈ ಆಯಿತು.