ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹಿಂದಿಕ್ಕಿ ಬೆಂಗಾಲ್ ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಗ್ರೇಟರ್ ನೋಯ್ಡಾ[ಅ.10]: ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ 14ನೇ ಗೆಲುವು ಸಾಧಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಪ್ರೊ ಕಬಡ್ಡಿ: ಗುಜರಾತ್‌ಗೆ ಗೆಲುವಿನ ವಿದಾಯ
ಬುಧವಾರ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಾಲ್, ತಮಿಳ್ ತಲೈವಾಸ್ ವಿರುದ್ಧ 33-29 ಅಂಕಗಳಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ 83 ಅಂಕ ಕಲೆಹಾಕಿದ ಬೆಂಗಾಲ್, ದಬಾಂಗ್ ಡೆಲ್ಲಿಯನ್ನು 2ನೇ ಸ್ಥಾನಕ್ಕೆ ತಳ್ಳುವ ಮೂಲಕ ಮೊದಲ ಸ್ಥಾನ ಪಡೆಯಿತು. ಶುಕ್ರವಾರ ಡೆಲ್ಲಿ ತಂಡ, ಯು ಮುಂಬಾ ಎದುರು ತನ್ನ ಕೊನೆಯ ಪಂದ್ಯವನ್ನಾಡಲಿದ್ದು, ಒಂದೊಮ್ಮೆ ಡೆಲ್ಲಿ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೇರಲಿದ್ದು, ಬೆಂಗಾಲ್‌ಗೆ 2ನೇ ಸ್ಥಾನಕ್ಕಿಳಿಯಲಿದೆ.
ಪಂದ್ಯದ ಮೊದಲಾರ್ಧದಲ್ಲಿ 13-13 ಅಂಕಗಳಿಂದ ಸಮಬಲ ಸಾಧಿಸಿದ್ದ ಬೆಂಗಾಲ್ ತಂಡ, ದ್ವಿತೀಯಾರ್ಧದಲ್ಲಿ ತಲೈವಾಸ್ ಆಟಗಾರರ ಮೇಲೆ ಸವಾರಿ ಮಾಡಿತು. ರೈಡಿಂಗ್‌ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದರೆ, ಡಿಫೆನ್ಸ್‌ನಲ್ಲಿ ಬೆಂಗಾಲ್ ಪ್ರಾಬಲ್ಯ ಸಾಧಿಸಿತು. ಅಲ್ಲದೇ ಒಂದು ಬಾರಿ ತಲೈವಾಸ್‌ನ್ನು ಆಲೌಟ್‌ಗೆ ಗುರಿ ಪಡಿಸಿದ ಬೆಂಗಾಲ್ ಅಂಕಗಳಿಕೆಯಲ್ಲಿ ಏರಿಕೆ ಕಂಡಿತು. ಬೆಂಗಾಲ್ ಪರ ಕರ್ನಾಟಕದ ಸುಕೇಶ್ ಹೆಗ್ಡೆ (6 ರೈಡ್ ಅಂಕ) ನಬಿಬಕ್ಷ್ ಆಲ್ರೌಂಡ್ ಆಟ ತಂಡದ ಜಯಕ್ಕೆ ನೆರವಾಯಿತು.
ಟೈಟಾನ್ಸ್‌ಗೆ 6ನೇ ಜಯ:
ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್, ಯು.ಪಿ ಯೋಧಾ ವಿರುದ್ಧ 41-36ರಲ್ಲಿ ಜಯ ಸಾಧಿಸಿತು. ಮೊದಲಾರ್ಧದಲ್ಲಿ ಯೋಧಾ 20-14ರಲ್ಲಿ ಮುನ್ನಡೆ ಹೊಂದಿತ್ತು. 35ನೇ ನಿಮಿಷದಲ್ಲಿ ಸಿದ್ಧಾರ್ಥ್ ಗಳಿಸಿದ 4 ಅಂಕಗಳ ಸೂಪರ್ರೈಡ್ ಟೈಟಾನ್ಸ್ ಜಯಕ್ಕೆ ಕಾರಣವಾಯಿತು.