Bengaluru Open 2022: ಪ್ರಿ ಕ್ವಾರ್ಟರ್ಗೆ ಪ್ರಜ್ನೇಶ್ ಗುಣೇಶ್ವರನ್ ಲಗ್ಗೆ
* ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಪ್ರಜ್ನೇಶ್ ಗುಣೇಶ್ವರನ್ ಪ್ರೀ ಕ್ವಾರ್ಟರ್ ಪ್ರವೇಶ
* ಟೂರ್ನಿಯಲ್ಲಿ ಶುಭಾರಂಭ ಮಾಡಿದ ಏಕೈಕ ಭಾರತೀಯ ಆಟಗಾರ
* ರಾಮ್‌ಕುಮಾರ್ ರಾಮನಾಥನ್, ಅರ್ಜುನ್ ಖಾಡೆ, ಪ್ರಜ್ವಲ್ ದೇವ್, ರಿಶಿ ರೆಡ್ಡಿ ಮೊದಲ ಸುತ್ತಿನಲ್ಲೇ ಸೋಲು
ಬೆಂಗಳೂರು(ಫೆ.09): ಭಾರತದ ತಾರಾ ಟೆನಿಸಿಗ ಪ್ರಜ್ನೇಶ್ ಗುಣೇಶ್ವರನ್ (Prajnesh Gunneswaran) ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ (Bengaluru Open ATP Tennis Tournament) ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ರೇಸ್‌ನಲ್ಲಿ ಉಳಿದುಕೊಂಡಿರುವ ಏಕೈಕ ಭಾರತೀಯ ಎನಿಸಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ನೇಶ್, ಫ್ರಾನ್ಸ್‌ನ ಮಥಾಯಸ್ ಬೊರ್ಗ್ ವಿರುದ್ಧ 7-6(4), 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ರಾಮ್‌ಕುಮಾರ್ ರಾಮನಾಥನ್, ಅರ್ಜುನ್ ಖಾಡೆ, ಪ್ರಜ್ವಲ್ ದೇವ್, ರಿಶಿ ರೆಡ್ಡಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಆಸ್ಪ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್ ವಿರುದ್ಧ 6-3, 0-6, 5-7 ಸೆಟ್‌ಗಳಲ್ಲಿ ರಾಮ್ ಸೋಲುಂಡರು. ಟರ್ಕಿಯ ಆಲ್ಟುಗ್ ವಿರುದ್ಧ ಖಾಡೆ 1-6, 2-6ರಲ್ಲಿ ಸೋತರೆ, ಬಲ್ಗೇರಿಯಾದ ಡಿಮಿಟರ್ ವಿರುದ್ಧ ಪ್ರಜ್ವಲ್ 2-6, 2-6ರಲ್ಲಿ ಪರಾಭವಗೊಂಡರು.
ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ ಹಾಗೂ ದಿವಿಜ್ ಶರಣ್ ಜೋಡಿ ಕ್ವಾರ್ಟರ್ ಫೈನಲ್‌ಗೇರಿತು. ಮೊದಲ ಸುತ್ತಿನಲ್ಲಿ ಟರ್ಕಿಯ ಆಲ್ಟುಗ್ ಹಾಗೂ ಸೆಮ್ ಜೋಡಿ 1-3ರಲ್ಲಿ ಹಿಂದಿದ್ದಾಗ ಪಂದ್ಯದಿಂದ ಹಿಂದೆ ಸರಿಯಿತು.
ಪ್ರೈಮ್ ವಾಲಿಬಾಲ್ ಲೀಗ್: ಬೆಂಗಳೂರು ತಂಡ ಶುಭಾರಂಭ
ಹೈದರಾಬಾದ್: ಚೊಚ್ಚಲ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್) ಟೂರ್ನಿಯಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ಕೊಚ್ಚಿ ಬ್ಲೂ ಸ್ಪೈಕ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ 14-15, 12-15, 15-13, 15-9, 15-14 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿತು.
Pro Kabaddi League: ಗುಜರಾತ್ ಎದುರು ಬೆಂಗಳೂರು ಬುಲ್ಸ್‌ಗೆ ಆಘಾತಕಾರಿ ಸೋಲು..!
ಮೊದಲೆರಡು ಸೆಟ್‌ಗಳಲ್ಲಿ ಸೋತರೂ, ಕೊನೆ 3 ಸೆಟ್‌ಗಳಲ್ಲಿ ಜಯಗಳಿಸುವ ಮೂಲಕ ಬೆಂಗಳೂರು ತಂಡ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಟಾರ್ಪಿಡೋಸ್ ಪರ ಪಂಕಜ್ ಶರ್ಮಾ 11, ಕರ್ನಾಟಕದ ಆಟಗಾರ ವರುಣ್ ಜಿ.ಎಸ್ 10 ಅಂಕ ಗಳಿಸಿದರು. ಕೊಚ್ಚಿ ಪರ ಭಾರತ ತಂಡದ ನಾಯಕ, ಕರ್ನಾಟಕದ ಕಾರ್ತಿಕ್ ಅಶೋಕ್ 16 ಅಂಕ ಗಳಿಸಿ ಗಮನ ಸೆಳೆದರು.
ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್ ತಂಡಗಳಿಗೆ ಜಯ
ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಮಂಗಳವಾರ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲ ಹಾಗೂ 2ನೇ ಸ್ಥಾನದಲ್ಲಿವೆ. ಪಾಟ್ನಾ, ಯು ಮುಂಬಾ ವಿರುದ್ಧ 47-36 ಅಂಕಗಳಿಂದ ಗೆದ್ದಿದ್ದು, 12ನೇ ಜಯ ಸಾಧಿಸಿದ ತಂಡ 65 ಅಂಕದೊಂದಿಗೆ ನಂ.1 ಸ್ಥಾನ ಭದ್ರಪಡಿಸಿಕೊಂಡಿದೆ. 48 ಅಂಕ ಪಡೆದಿರುವ ಮುಂಬಾ 6ನೇ ಸ್ಥಾನದಲ್ಲಿದೆ.
ಮಂಗಳವಾರದ ಇನ್ನೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ , ತಮಿಳ್ ತಲೈವಾಸ್ ವಿರುದ್ಧ 37-29 ಅಂಕಗಳಿಂದ ಗೆದ್ದು 2ನೇ ಸ್ಥಾನಕ್ಕೇರಿತು. ಹರ್ಯಾಣ 58 ಅಂಕ ಗಳಿಸಿದ್ದರೆ, 45 ಅಂಕದೊಂದಿಗೆ ತಲೈವಾಸ್ 8ನೇ ಸ್ಥಾನದಲ್ಲಿದೆ. ಬುಧವಾರ ತಲೈವಾಸ್-ಯುಪಿ ಯೋಧಾ, ಗುಜರಾತ್-ಟೈಟಾನ್ಸ್ ಮುಖಾಮುಖಿಯಾಗಲಿವೆ.
ಮಾರ್ಚ್ ತಿಂಗಳಿನಲ್ಲಿ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್
ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ ಮಾರ್ಚ್ ಮೊದಲ ವಾರದಲ್ಲಿ ಮಹಿಳೆಯರಿಗಾಗಿ ರಾಜ್ಯ ಮಾತೃ ಕಪ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಆಯೋಜಿಸಿದೆ. ಬೆಂಗಳೂರಿನ ಕಂಠಿರವ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಗೆ 2021ರಲ್ಲಿ ಹೆಸರು ನೋಂದಾಯಿಸಿದ್ದ ಆಟಗಾರ್ತಿಯರೂ ಅರ್ಹತೆಗಳಿಸಲಿದ್ದಾರೆ. ಹೆಸರು ನೋಂದಾಯಿಸಲು ಫೆ.20 ಕೊನೆ ದಿನಾಂಕ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.