ಫ್ರೆಂಚ್ ಓಪನ್: ಇಗಾ ಸ್ವಿಟೆಕ್ ಚಾಂಪಿಯನ್..!
ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಟೂರ್ನಿಯಲ್ಲಿ ಪೊಲೆಂಡ್‌ನ 19 ವರ್ಷದ ಆಟಗಾರ್ತಿ ಇಗಾ ಸ್ವಿಟೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಪ್ಯಾರಿಸ್(ಅ.11): ಶ್ರೇಯಾಂಕ ರಹಿತೆ ಪೋಲೆಂಡ್‌ನ ಇಗಾ ಸ್ವಿಟೆಕ್, ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಗ್ರ್ಯಾನ್‌ಸ್ಲಾಮ್ ಗೆದ್ದ ಮೊದಲ ಪೋಲೆಂಡ್ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಸ್ವಿಟೆಕ್ ಪಾಲಾಗಿದೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸ್ವಿಟೆಕ್, ವಿಶ್ವ ನಂ.4ನೇ ಶ್ರೇಯಾಂಕಿತೆ ಅಮೆರಿಕದ ಸೋಫಿಯಾ ಕೆನಿನ್ ಎದುರು 6-4, 6-4 ನೇರ ಸೆಟ್‌ಗಳಲ್ಲಿ ಗೆದ್ದು ಬೀಗಿದರು.
1990ರ ಬಳಿಕ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ಎನ್ನುವ ಶ್ರೇಯವೂ ಈಗ ಸ್ವಿಟೆಕ್ ಪಾಲಾಗಿದೆ. 1990ರಲ್ಲಿ ಸರ್ಬಿಯಾದ 16 ವರ್ಷದ ಮೋನಿಕಾ ಸೀಲ್ಸ್ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ ಎನಿಸಿದ್ದರು. 2005ರಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ 19 ವರ್ಷದವರಿದ್ದಾಗ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಕ್ಲೇ ಕೋರ್ಟ್ ಟೂರ್ನಿಯಲ್ಲಿ ಸ್ವಿಟೆಕ್ ಒಂದು ಸೆಟ್‌ನಲ್ಲಿಯೂ ಹಿನ್ನಡೆ ಅನುಭವಿಸದೇ ಗೆಲುವು ಸಾಧಿಸಿದ್ದು ಮತ್ತೊಂದು ವಿಶೇಷ.
ಫ್ರೆಂಚ್ ಓಪನ್ 2020: ಪ್ರಶಸ್ತಿಗಾಗಿ ನಡಾಲ್-ಜೋಕೋ ನಡುವೆ ಸೆಣಸಾಟ
ಇಂದು ರಾಫೆಲ್-ಜೋಕೋ ಫೈಟ್: ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ವಿಶ್ವ ನಂ.2 ಆಟಗಾರ ಸ್ಪೇನ್‌ನ ರಾಫೆಲ್ ನಡಾಲ್, ವಿಶ್ವದ ನಂ.1 ಆಟಗಾರ ಸರಬಿಯಾದ ನೊವಾಕ್ ಜೋಕೋವಿಚ್ ಅವರನ್ನು ಎದುರಿಸಲಿದ್ದಾರೆ.