ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ
* ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ
* ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
* ನೈರೋಬಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಒಲಿದ 3 ಪದಕ
ನವದೆಹಲಿ(ಆ.24): ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
‘ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ 2 ಬೆಳ್ಳಿ, ಒಂದು ಕಂಚಿನ ಪದಕ ತಂದುಕೊಟ್ಟ ಕ್ರೀಡಾಪಟುಗಳಿಗೆ ಧನ್ಯವಾದಗಳು. ದೇಶದ ಎಲ್ಲೆಡೆ ಅಥ್ಲೆಟಿಕ್ಸ್ ಬೆಳೆಯುತ್ತಿದೆ. ಇದು ಭಾರತದ ಭವಿಷ್ಯಕ್ಕೆ ಉತ್ತಮ ಸಂಕೇತ. ಕಠಿಣ ಪರಿಶ್ರಮಪಡುತ್ತಿರುವ ಅಥ್ಲೀಟ್‌ಗಳಿಗೆ ಶುಭವಾಗಲಿ’ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, ಕಿರಿಯರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದ 11 ಕ್ರೀಡಾಪಟುಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಅಂಡರ್-20 ಅಥ್ಲೆಟಿಕ್ಸ್: ಭಾರತ ಹೊಸ ದಾಖಲೆ
ನೈರೋಬಿ: ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಭಾನುವಾರ ತೆರೆ ಬಿದ್ದಿದ್ದು, ಭಾರತದ ಪಾಲಿಗೆ ಉತ್ತಮ ಫಲಿತಾಂಶ ನೀಡಿದ ಕ್ರೀಡಾಕೂಟ ಎನಿಸಿದೆ. ಇದೇ ಮೊದಲ ಬಾರಿಗೆ ಭಾರತ ಆವೃತ್ತಿಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಸಾಧನೆ ಮಾಡಿದೆ. ಈ ಬಾರಿ ಭಾರತ 2 ಬೆಳ್ಳಿ, 1 ಕಂಚಿನ ಪದಕ ಜಯಿಸಿತು.
ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಬೆಳ್ಳಿ ಪದಕ ಗೆದ್ದ ಶೈಲಿ ಸಿಂಗ್
ವೇಗದ ನಡಿಗೆ ಸ್ಪರ್ಧೆಯಲ್ಲಿ ಅಮಿತ್ ಖತ್ರಿ, ಲಾಂಗ್‌ಜಂಪ್‌ನಲ್ಲಿ ಶೈಲಿ ಸಿಂಗ್ ಬೆಳ್ಳಿ ಗೆದ್ದರೆ, 4*400 ಮಿಶ್ರ ರಿಲೇ ಓಟದಲ್ಲಿ ಕಂಚಿನ ಪದಕ ದೊರೆಯಿತು. ಈ ಮೊದಲು 2002ರಲ್ಲಿ ಡಿಸ್ಕಸ್ ಥ್ರೋ ಪಟು ಸೀಮಾ ಆ್ಯಂಟಿಲ್ ಬೆಳ್ಳಿ, 2014ರಲ್ಲಿ ಡಿಸ್ಕಸ್ ಥ್ರೋ ಪಟು ನವ್‌ಜೀತ್ ಕೌರ್ ಕಂಚು, 2016ರಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ, 2018ರಲ್ಲಿ ಮಹಿಳೆಯರ 400 ಮೀ. ಓಟದಲ್ಲಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದರು.