ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ತಂಡದಲ್ಲೇ ಉಳಿದ ಪವನ್, ಪ್ರದೀಪ್ ನರ್ವಾಲ್‌ಗೆ ಪಾಟ್ನಾ ಗೇಟ್‌ಪಾಸ್
* ದಿನದಿಂದ ದಿನಕ್ಕೆ ಕಾವೇರುತ್ತಿದೆ 8ನೇ ಆವೃತ್ತಿಯ ಪ್ರೊ ಕಬಡ್ಡಿ ಹವಾ
* ಆಗಸ್ಟ್ 29ರಿಂದ 31ರ ವರೆಗೂ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ
* ಪವನ್ ಕುಮಾರ್ ಶೆರಾವತ್ ಅವರನ್ನು ತನ್ನಲ್ಲೇ ಉಳಿಸಿಕೊಂಡ ಬೆಂಗಳೂರು ಬುಲ್ಸ್
ನವದೆಹಲಿ(ಆ.20): ಪ್ರೊ ಕಬಡ್ಡಿ 8ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಎಲ್ಲಾ 12 ತಂಡಗಳು ತಲಾ 6 ಆಟಗಾರರನ್ನು ಉಳಿಸಿಕೊಂಡಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಅಚ್ಚರಿಯ ಸಂಗತಿಯೆಂಬಂತೆ ಪಾಟ್ನಾ ಪೈರೇಟ್ಸ್ ತನ್ನ ಸ್ಟಾರ್ ಆಟಗಾರ ಪ್ರದೀಪ್ ನರ್ವಾಲ್ ಅವರನ್ನು ತನ್ನ ತಂಡದಿಂದ ಕೈಬಿಟ್ಟಿದೆ. ಆಗಸ್ಟ್ 29ರಿಂದ 31ರ ವರೆಗೂ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ತಾರಾ ರೈಡರ್ ಪವನ್ ಶೆರಾವತ್ ಸೇರಿ 6 ಆಟಗಾರರನ್ನು ಉಳಿಸಿಕೊಂಡಿದೆ. ಅಮಿತ್ ಶೆರೊನ್, ಸೌರಭ್ ನಂದಲ್, ಬಂಟಿ, ಮೋಹಿತ್ ಶೆರಾವತ್ ಹಾಗೂ ವಿನೋದ್ ಕುಮಾರ್ ತಂಡದಲ್ಲಿ ಉಳಿದುಕೊಂಡಿರುವ ಉಳಿದ 5 ಆಟಗಾರರು. ನಾಯಕ ರೋಹಿತ್ ಕುಮಾರ್‌ರನ್ನು ಬೆಂಗಳೂರು ತಂಡ ಕೈಬಿಟ್ಟಿದೆ ಎಂದು ತಿಳಿದುಬಂದಿದೆ. '
ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ವೇಳಾಪಟ್ಟಿ ಫಿಕ್ಸ್..!
ಮೂರು ಬಾರಿ ಪ್ರೊ ಕಬಡ್ಡಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವು ತನ್ನ ಚಾಂಪಿಯನ್ ಆಟಗಾರ ಹಾಗೂ ನಾಯಕ ಪ್ರದೀಪ್ ನರ್ವಾಲ್ ಅವರನ್ನು ಕೈಬಿಟ್ಟಿದೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಪ್ರದೀಪ್ ನರ್ವಾಲ್ ಅವರು ಈ ಬಾರಿಯ ಹರಾಜಿನಲ್ಲಿ ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಸಾಕಷ್ಟು ಜೋರಾಗಿದೆ. ಪಾಟ್ನಾ ಪೈರೇಟ್ಸ್ ತಂಡವು ನೀರಜ್ ಕುಮಾರ್, ಮೋನು, ಮೋಹಿತ್, ರಾಜ್‌ವೀರ್ ಸಿಂಗ್ ಚೌಹಾಣ್ ಹಾಗೂ ಸಾಹಿಲ್ ಮನ್ ಅವರನ್ನು ರೀಟೈನ್ ಮಾಡಿಕೊಂಡಿದೆ.
ಇನ್ನು ಚೊಚ್ಚಲ ಪ್ರೊ ಕಬಡ್ಡಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಮೂವರು ಕಬಡ್ಡಿ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಆಲ್ರೌಂಡರ್ ವಿಶಾಲ್ ಲಾಥರ್, ಡಿಫೆಂಡರ್ ಅಮಿತ್ ಹೂಡಾ ಹಾಗೂ ಯುವ ಆಟಗಾರ ನಿತಿನ್ ರಾವಲ್ ಅವರನ್ನು ಜೈಪುರ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿದೆ.