ಬೆಂಗಳೂರು ಬುಲ್ಸ್‌ ತಂಡದ ಪ್ರಧಾನ ರೈಡರ್‌ ಆಗಿ, ಪಿಕೆಎಲ್‌ನಲ್ಲಿ ತಂಡದ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ್ದ ಪವನ್‌ ಕುಮಾರ್‌ ಶೆರಾವತ್‌ ಮುಂಬರುವ ಪಿಕೆಎಲ್‌ನಲ್ಲಿ ನೆರೆಯ ರಾಜ್ಯ ತಮಿಳುನಾಡಿನ ಫ್ರಾಂಚೈಸಿ ತಮಿಲ್‌ ತಲೈವಾಸ್‌ ಪರ ಆಡಲಿದ್ದಾರೆ. ಪವನ್‌ ಕುಮಾರ್‌ ಶೆರಾವತ್‌ ತಂಡದಿಂದ ತಪ್ಪಿಹೋದ ಬೆನ್ನಲ್ಲಿಯೇ ನೇರಪ್ರಸಾರ ವಾಹಿನಿ ಸ್ಟಾರ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಬೆಂಗಳೂರು ಬುಲ್ಸ್‌ ತಂಡದ ಕೋಚ್ ಈ ವೇಳೆ ಕಣ್ಣೀರಿಟ್ಟರು. 

ಮುಂಬೈ (ಆ. 5): ದಾಖಲೆಯ 2.26 ಕೋಟಿ ರೂಪಾಯಿ ಮೊತ್ತಕ್ಕೆ ಪವನ್‌ ಕುಮಾರ್‌ ಶೆರಾವತ್‌ ತಮಿಳ್‌ ತಲೈವಾಸ್‌ ತಂಡಕ್ಕೆ ಮಾರಾಟವಾಗುವುದರೊಂದಿಗೆ 9ನೇ ಆವೃತ್ತಿಯ ಪಿಕೆಎಲ್‌ ಆಟಗಾರರ ಹರಾಜಿನ ಮೊದಲ ದಿನ ಮುಕ್ತಾಯ ಕಂಡಿದೆ. 2014ರಿಂದ ಬೆಂಗಳೂರು ಬುಲ್ಸ್‌ ತಂಡದ ಭಾಗವಾಗಿದ್ದ ಪವನ್‌ ಕುಮಾರ್‌ ಶೆರಾವತ್‌, 2017ರಲ್ಲಿ ಒಮ್ಮೆ ಗುಜರಾತ್‌ ಜೈಂಟ್ಸ್‌ ಪರವಾಗಿ ಆಡಿದ್ದರು. 2018ರಿಂದ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ 23 ವರ್ಷದ ಪವನ್‌ ಕುಮಾರ್‌ ಶೆರಾವತ್‌, 2018ರಲ್ಲಿ ನಡೆದ 6ನೇ ಆವೃತ್ತಿಯ ಪಿಕೆಎಲ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡ ಚಾಂಪಿಯನ್‌ ಆಗಲು ಪ್ರಧಾನವಾಗಿ ಕಾರಣರಾಗಿದ್ದರು. ಶುಕ್ರವಾರ ನಡೆದ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಪವನ್‌ ಶೆರಾವತ್‌, ತಮಿಳ್‌ ತಲೈವಾಸ್‌ಗೆ ಸೇರಿಕೊಂಡ ಬಳಿಕ ನೇರಪ್ರಸಾರ ವಾಹಿನಿಯೊಂದಿಗೆ ಮಾತನಾಡಿದ ಬೆಂಗಳೂರು ಬುಲ್ಸ್‌ ತಂಡ ಕೋಚ್ ರಣದೀರ್‌ ಸಿಂಗ್‌ ಕಣ್ಣೀರಿಟ್ಟರು. ಮಾತನಾಡುವ ಆರಂಭದಲ್ಲಿ ನಿರೂಪಕರು, ಪವನ್‌ ಕುಮಾರ್‌ ಶೆರಾವತ್‌ ಇನ್ನು ಬೆಂಗಳೂರು ಬುಲ್ಸ್‌ ತಂಡದಲ್ಲಿ ಇರೋದಿಲ್ಲ. ಇದಕ್ಕೆ ನಿಮ್ಮ ಮೊದಲ ಪ್ರತಿಕ್ರಿಯೆ ಏನು ಎಂದಾಗಲೇ ಅವರ ಕಣ್ಣಾಲಿಗಳು ತೇವಗೊಂಡಿದ್ದವು. ಮಾತು ಮುಂದುವರಿಸಲು ಸಾಧ್ಯವಾಗದೇ ನೇರಪ್ರಸಾರದಲ್ಲಿಯೇ ಕಣ್ಣೀರಿಟ್ಟರು.

ಆ ನಂತರ ಮಾತನಾಡಿದ ಅವರು, ವಿಕಾಸ್‌ ಖಂಡೋಲಾರನ್ನು ಖರೀದಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಇದಕ್ಕಾಗಿ ಪವನ್‌ ಕುಮಾರ್‌ ಶೆರಾವತ್‌ ತಂಡದಿಂದ ಕೈಬಿಟ್ಟು ಹೋಗುತ್ತಾನೆ ಎಂದುಕೊಂಡಿರಲಿಲ್ಲ. ವಿಕಾಸ್‌ ಖಂಡೋಲಾ ಹೆಸರು ಹರಾಜಿನಲ್ಲಿ ಮೊದಲು ಬಂದಿದ್ದರಿಂದ ನಮ್ಮ ಯೋಜನೆ ಬದಲಾಯಿತು. ವಿಕಾಸ್‌ ಖಂಡೋಲಾರನ್ನು ನಾವು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ ಬಳಿಕ, ಪವನ್‌ ತಪ್ಪಿಹೋಗಬಹುದು ಎನ್ನುವ ಸಣ್ಣ ಸೂಚನೆ ನನಗೆ ಸಿಕ್ಕಿತ್ತು. ಯಾಕೆಂದರೆ, ತಂಡಗಳು ಖಂಡಿತವಾಗಿ ಆತನಿಗೆ ದೊಡ್ಡ ಮೊತ್ತದ ಬಿಡ್‌ ಮಾಡುತ್ತಿದ್ದವು. ಆತ 2 ಕೋಟಿಗೂ ಅಧಿಕ ಮೊತ್ತಕ್ಕೆ ಬಿಡ್‌ ಆಗುವ ನಿರೀಕ್ಷೆ ಇತ್ತು. ಒಟ್ಟಾರೆಯಾಗಿ ಆತ ಆ ತಂಡದಲ್ಲೂ ಉತ್ತಮವಾಗಿ ಆಡಲಿ ಎಂದು ನಾನು ಹಾರೈಸುತ್ತೇನೆ ಎಂದು ಭಾವುಕವಾಗಿ ನುಡಿದರು.

Scroll to load tweet…

ಬೆಂಗಳೂರು ಬುಲ್ಸ್‌ ರಿಟೇನ್‌ ಮಾಡಿಕೊಳ್ಳುತ್ತದೆ ಎಂದುಕೊಂಡಿದ್ದೆ: ದೊಡ್ಡ ಮೊತ್ತಕ್ಕೆ ಬಿಡ್‌ ಆಗಿರುವ ಬಗ್ಗೆ ಮಾತನಾಡಿದ ಪವನ್‌ ಕುಮಾರ್‌ ಶೆರಾವತ್‌, "ನನ್ನ ಮೇಲೆ ಬಿಡ್‌ ಮೊತ್ತಗಳು ಬರುತ್ತಿದ್ದಾಗ ತುಂಬಾ ಎಕ್ಸೈಟ್‌ ಆಗಿದ್ದೆ. ಆದರೆ, ಬೆಂಗಳೂರು ಬುಲ್ಸ್‌ ತಂಡ ಎಫ್‌ಬಿಎಂ ಬಳಸಿ ರಿಟೇನ್‌ ಮಾಡಿಕೊಳ್ಳಬಹುದು ಎಂದುಕೊಂಡಿದ್ದೆ. ಆ ತಂಡ ನನಗೆ ಕುಟುಂಬವಿದ್ದಂತೆ. ಆದರೆ, ವಿಕಾಸ್‌ ಈಗ ಅಲ್ಲಿಗೆ ಹೋಗಿದ್ದಾರೆ.

PKL AUCTION 2022 ಪಿಕೆಎಲ್‌ನಲ್ಲಿ ದಾಖಲೆ ಬರೆದ ಪವನ್‌ ಶೆರಾವತ್‌, ಬೆಂಗಳೂರು ಬುಲ್ಸ್‌ಗೆ ವಿಕಾಸ್‌ ಖಂಡೋಲಾ!

ನನ್ನ ಯಶಸ್ಸಿಗೆ ರಣಧೀರ್‌ ಕಾರಣ: ಇಂದು ನಾನು ಪಿಕೆಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಆಗಿದ್ದೇನೆ ಎಂದರೆ ಅದಕ್ಕೆ ಏಕೈಕ ಕಾರಣ ಬೆಂಗಳೂರು ಬುಲ್ಸ್‌ ತಂಡದ ಕೋಚ್ ರಣದೀರ್‌ ಸಿಂಗ್‌. ಬೆಂಗಳೂರು ಬುಲ್ಸ್‌ ಹಾಗೂ ಕೋಚ್ ರಣಧೀರ್‌ರನ್ನು ನಾನು ಬಹಳ ಮಿಸ್‌ ಮಾಡಿಕೊಳ್ಳುತ್ತೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲವೂ ರಣಧೀರ್‌ ಕಾರಣ. ಬರೀ ನಾಲ್ಕು ಲಕ್ಷ ರೂಪಾಯಿಗೆ ನಾನು ಪಿಕೆಎಲ್‌ಗೆ ಸೇರಿದ್ದೆ. ಇಂದು 2.26 ಕೋಟಿಗೆ ನನ್ನನ್ನು ಖರೀದಿ ಮಾಡಲಾಗಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಹಾಗೇನಾದರೂ ವಿಕಾಸ್‌ ಖಂಡೋಲಾ ಹೆಸರು ಹರಾಜಿನಲ್ಲಿ ಮೊದಲು ಬರದೇ ಹೋಗಿದ್ದರೆ, ಖಂಡಿತವಾಗಿ ಬೆಂಗಳೂರು ಬುಲ್ಸ್‌ ನನ್ನನ್ನು ರಿಟೇನ್‌ ಮಾಡಿಕೊಳ್ಳುತ್ತಿತ್ತು. ನಾನು ಈ ಕುರಿತಾಗಿ ಕೋಚ್‌ ಜೊತೆ ಮಾತನಾಡಿರಲಿಲ್ಲ. ಆದರೆ, ತಂಡ ಖಂಡಿತವಾಗಿ ನನ್ನ ರಿಟೇಲ್‌ ಮಾಡಿಕೊಳ್ಳುತ್ತದೆ ಎನ್ನುವ ವಿಶ್ವಾಸವಿತ್ತು ಎಂದು ಪವನ್‌ ಕುಮಾರ್‌ ಶೆರಾವತ್‌ ಪ್ರತಿಕ್ರಿಯೆ ನೀಡಿದ್ದಾರೆ.

PKL Auction 2022 ಇಂದು, ನಾಳೆ ಪ್ರೊ ಕಬಡ್ಡಿ ಹರಾಜು: 500+ ಆಟಗಾರರು ಭಾಗಿ..!

ದಾಖಲೆವೀರ ಪವನ್‌: ಹರಾಜಿನ ವೇಳೆ ಮೊದಲ ಕಾಲ್‌ನಲ್ಲಿ ಪವನ್‌ ಶೆರಾವತ್‌ ಅವರ ಬಿಡ್‌ ಮೊತ್ತ 30 ಲಕ್ಷದಿಂದ 1 ಕೋಟಿಗೆ ಜಂಪ್ ಆಗಿತ್ತು. ಇದೂ ಕೂಡ ಪಿಕೆಎಲ್ ಇತಿಹಾಸದ ದಾಖಲೆ ಎನಿಸಿದೆ. ತಮಿಳ್‌ ತಲೈವಾಸ್ ತಂಡ ಹರಾಜಿನಲ್ಲಿ ಒಟ್ಟು 4.04 ಕೋಟಿ ರೂಪಾಯಿ ಮೊತ್ತವನ್ನು ಹೊಂದಿತ್ತು. ಅದರಲ್ಲಿ ಅಂದಾಜು ಶೇ.56.5 ರಷ್ಟು ಹಣವನ್ನು ಪವನ್‌ ಶೆರಾವತ್‌ ಒಬ್ಬರ ಮೇಲೇ ಸುರಿದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.