Pro Kabaddi League : ಹರಿಯಾಣ ಸ್ಟೀಲರ್ಸ್ ಬಗ್ಗುಬಡಿದ ಬೆಂಗಳೂರು ಬುಲ್ಸ್

ಪವನ್ ಕುಮಾರ್ ಶೇರಾವತ್ ಭರ್ಜರಿ ಪ್ರದರ್ಶನ
ಹರಿಯಾಣ ಸ್ಟೀಲರ್ಸ್ ವಿರುದ್ಧ 14 ಅಂಕಗಳ ಭರ್ಜರಿ ಗೆಲುವು
ಹ್ಯಾಟ್ರಿಕ್ ಗೆಲುವು ಕಂಡ ಬೆಂಗಳೂರು ಬುಲ್ಸ್
 

Pawan Kumar Sehrawats stunning performance Bengaluru Bulls Beat Haryana Steelers in PKL8 Match san

ಬೆಂಗಳೂರು (ಡಿ. 30): ನಾಯಕ ಪವನ್ ಕುಮಾರ್ ಶೇರಾವತ್ (Pawan Kumar Sehrawat) ಅವರ ಮತ್ತೊಂದು ಭರ್ಜರಿ ಪ್ರದರ್ಶನದ ನೆರವಿನಿಂದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ (Pro Kabaddi League ) ಬೆಂಗಳೂರು ಬುಲ್ಸ್ (Bengaluru Bulls) ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ 42-28 ಅಂಕಗಳಿಂದ ಹರಿಯಾಣ ಸ್ಟೀಲರ್ಸ್(Haryana Steelers) ತಂಡವನ್ನು ಬಗ್ಗುಬಡಿಯಿತು. ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡಕ್ಕೆ ಶರಣಾದ ಬಳಿಕ ಆಟದ ವರಸೆಯಲ್ಲಿ ಸಂಪೂರ್ಣ ಬದಲಾವಣೆ ತಂದಿರುವ ಬೆಂಗಳೂರು ಬುಲ್ಸ್ ತಂಡಕ್ಕೆ ಇದು ಹ್ಯಾಟ್ರಿಕ್ ಗೆಲುವಾಗಿದೆ. ಇದಕ್ಕೂ ಮುನ್ನ ತಮಿಳ್ ತಲೈವಾಸ್ ಹಾಗೂ  ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತ್ತು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ದಿನದ 2ನೇ ಮುಖಾಮುಖಿಯಲ್ಲಿ ಕಾದಾಟ ನಡೆಸಿದವು. ಅದರೆ, ಪವನ್ ಕುಮಾರ್ ಶೇರಾವತ್ ಅವರ ಏಕಾಂಗಿ ನಿರ್ವಹಣೆಯ ಬೆನ್ನೇರಿದ ಬೆಂಗಳೂರು ಬುಲ್ಸ್ 14 ಅಂಕಗಳ ಸ್ಪಷ್ಟ ಗೆಲುವನ್ನು ಕಂಡಿತು ಪವನ್ ಕುಮಾರ್ ಶೇರಾವತ್ ಒಟ್ಟು 22 ಅಂಕ ಸಂಪಾದನೆ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಇವುಗಳಲ್ಲಿ 19 ರೈಡ್ ಪಾಯಿಂಟ್, 3 ಟ್ಯಾಕಲ್ ಅಂಕಗಳು ಸೇರಿದ್ದವು. ಇವರಿಗೆ ಉತ್ತಮ ಸಾಥ್ ನೀಡದ ಜಿಬಿ ಮೋರೆ (GB More) 5 ಅಂಕ ಸಂಪಾದನೆ ಮಾಡಿದರೆ, ಡಿಫೆನ್ಸ್ ವಿಭಾಗದಲ್ಲಿ ಮಹೇಂದರ್ ಸಿಂಗ್ (4) ಹಾಗೂ ಅಮಾನ್ (3) ತಂಡದ ಸತತ ಮೂರನೇ ಗೆಲುವಿಗೆ ನೆರವಾದರು.

ಕಳೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದಧ 15 ಅಂಕ ಸಂಪಾದನೆ ಮಾಡುವ ಮೂಲಕ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಪವನ್ ಶೇರಾವತ್ ಈ ಬಾರಿಯೂ ಅದೇ ಆಟ ಮುಂದುವರಿಸಿದರು. ಕಳೆದ ಬಾರಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಆಡುವಾಗ ಒಟ್ಟು 39 ಅಂಕ ಕಲೆಹಾಕುವ ಮೂಲಕ ಪವನ್ ಕುಮಾರ್ ಪ್ರೊ ಕಬಡ್ಡಿ ದಾಖಲೆ ಬರೆದಿದ್ದರು. ಗುರುವಾರವೂ ಕೂಡ ಇದೇ ರೀತಿಯ ಆಟವನ್ನು ಮುಂದುವರಿಸಿ ತಂಡದ ಜಯಕ್ಕೆ ಕಾರಣರಾದರು. ಮೊದಲ ಅವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಕೆಲ ಏರಿಳಿತಗಳನ್ನೂ ಕಂಡರೂ, 19-13 ರಿಂದ ಮುನ್ನಡೆ ಕಾಣುವ ಮೂಲಕ ವಿರಾಮಕ್ಕೆ ತೆರಳಿತ್ತು. ಪವನ್ ಕುಮಾರ್ ಕೋರ್ಟ್ ನಲ್ಲಿ ಇದ್ದ ಹೊತ್ತು ಅಬ್ಬರಿಸುತ್ತಿದ್ದ ಬುಲ್ಸ್, ಅವರು ಬೆಂಚ್ ಗೆ ಹೋಗುತ್ತಿದ್ದಂತೆ ಹಿನ್ನಡೆ ಕಾಣುತ್ತಿತ್ತು.
 


2ನೇ ಅವಧಿಯ ಆಟ ಆರಂಭಗೊಂಡ ಕೆಲವೇ ಹೊತ್ತಿನಲ್ಲಿಯೇ ಹಾಲಿ ಆವೃತ್ತಿಯ  ಪಿಕೆಎಲ್ ನಲ್ಲಿ ತಮ್ಮ ಮೂರನೇ ಸೂಪರ್ 10 ಅನ್ನು ಪೂರೈಸಿದ ಪವನ್ ಕುಮಾರ್ ಆ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದರು. ಈ ಅವಧಿಯ ಆಟದಲ್ಲಿ ಹರಿಯಾಣ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಬೆಂಗಳೂರು ಬುಲ್ಸ್ 31-18ರ ಮುನ್ನಡೆಗೇರಿತ್ತು. ಆ ಬಳಿಕ ಡಿಫೆನ್ಸ್ ವಿಭಾಗದಲ್ಲಿ ಎರಡು ಆಕರ್ಷಕ ಸೂಪರ್ ಟ್ಯಾಕಲ್ ಗಳು ಬುಲ್ಸ್ ತಂಡದ ಗೆಲುವಲ್ಲಿ ಖಚಿತಪಡಿಸಿದವು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ತಂಡ 4 ಪಂದ್ಯಗಳಲ್ಲಿ 3 ಗೆಲುವು ಹಾಗೂ 1 ಸೋಲಿನ ಫಲಿತಾಂಶದೊಂದಿಗೆ 15 ಅಂಕ ಸಂಪಾದಿಸಿ 2ನೇ ಸ್ಥಾನಕ್ಕೇರಿದೆ.

Pro Kabaddi League: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್
ಗೆಲುವಿನ ದಾರಿಗೆ ಮರಳಿದ ಯು ಮುಂಬಾ : ಕಳೆದೆರಡು ಪಂದ್ಯಗಳಲ್ಲಿ ಸೋಲು ಹಾಗೂ ಡ್ರಾ ಫಲಿತಾಂಶ ಕಂಡಿದ್ದ ಯು ಮುಂಬಾ (U Mumba)ತಂಡ ಗೆಲುವಿನ ದಾರಿಗೆ ಮರಳಿದೆ. ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ 37-28 ಅಂಕಗಳಿಂದ ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ( Jaipur Pink Panthers ) ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಯು ಮುಂಬಾ ಅಂಕಪಟ್ಟಿಯಲ್ಲಿ 14 ಅಂಕ ಸಂಪಾದಿಸಿ 3ನೇ ಸ್ಥಾನಕ್ಕೇರಿದೆ.

Latest Videos
Follow Us:
Download App:
  • android
  • ios