* ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಈಗಿನಿಂದಲೇ ತಯಾರಿ ಆರಂಭಿಸಿದ ಕರ್ನಾಟಕ * ರಾಜ್ಯದಿಂದ ಕನಿಷ್ಠ 75 ಕ್ರೀಡಾಪಟುಗಳನ್ನು ಗುರುತಿಸಲು ರಾಜ್ಯ ಸರ್ಕಾರ ಸಮಿತಿ ರಚನೆ* ಅಮೃತ ಕ್ರೀಡಾ ದತ್ತು’ ಕಾರ್ಯಕ್ರಮದ ಅಡಿ ಈ ಸಮಿತಿ ರಚನೆ

ಬೆಂಗಳೂರು(ಆ.21): ಮುಂದಿನ 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ರೀಡಾಕೂಟಕ್ಕೆ 75 ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಘೋಷಿಸಿದ್ದ ‘ಅಮೃತ ಕ್ರೀಡಾ ದತ್ತು’ ಕಾರ್ಯಕ್ರಮದ ಅಡಿ ಈ ಸಮಿತಿ ರಚಿಸಲಾಗಿದೆ. ಸಮಿತಿ ರಚಿಸಿ ಹೊರಡಿಸಿರುವ ಆದೇಶದಲ್ಲಿ ಆಯ್ಕೆಯಾದ ಪ್ರತಿ ಕ್ರೀಡಾಪಟು ತರಬೇತಿ, ಸಂಬಂಧಪಟ್ಟ ಕ್ರೀಡೆಯ ಕಿಟ್‌ ಮುಂತಾದವುಗಳಿಗೆ ತಲಾ ಐದು ಲಕ್ಷ ರುಪಾಯಿ ಪಡೆಯಲಿದ್ದಾರೆ.

Scroll to load tweet…

ಎಂಟು ಜನರ ಸಮಿತಿಯ ಅಧ್ಯಕ್ಷರಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಕಾರ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ಅರ್ಜುನ ಪ್ರಶಸ್ತಿ ಪುರಸ್ಕೃತ ಶ್ರೀಧರ್‌, ರಘುನಾಥ್‌ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಮಿನ್‌ ಸಮಿತಿಯಲ್ಲಿದ್ದಾರೆ. ಈ ಮೂವರು ಉತ್ತಮ ಕ್ರೀಡಾಪಟುವನ್ನು ಗುರುತಿಸುವ ಸಮಿತಿಯಲ್ಲಿಯೂ ಸಹ ಕಾರ್ಯ ನಿರ್ವಹಿಸಲಿದ್ದಾರೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಕರ್ನಾಟಕ ಸರ್ಕಾರದಿಂದ ಬಂಪರ್ ಬಹುಮಾನ ಘೋಷಣೆ

ವೈಜ್ಞಾನಿಕವಾಗಿ ಅರ್ಹ ಕ್ರೀಡಾಪಟುವನ್ನು ಗುರುತಿಸಲಾಗುವುದು, ಜೊತೆಗೆ ತರಬೇತಿ ಶಿಬಿರ ಹಾಗೂ ಟೂರ್ನಮೆಂಟ್‌ಗಳಲ್ಲಿ ಸಹ ಅರ್ಹರನ್ನು ಪರಿಗಣಿಸಲಾಗುವುದು. 2024ರ ಒಲಿಂಪಿಕ್‌ನಲ್ಲಿ ಪದಕ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿ ಭಾರತ ಇರಬೇಕು. ಕರ್ನಾಟಕದ ಕ್ರೀಡಾಪಟುಗಳು ಹೆಚ್ಚಿನ ಪದಕ ಹೊಂದಿರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲರಿಂದ ಶೀಘ್ರ ಸನ್ಮಾನ:

ಈ ಮಧ್ಯ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಟೊಕಿಯೋ ಒಲಿಂಪಿಕ್‌ನಲ್ಲಿ ಭಾಗವಹಿಸಿದ್ದ ಕರ್ನಾಟಕದ ನಾಲ್ವರು ಕ್ರೀಡಾ ಪಟುಗಳಿಗೆ ತಲಾ ಒಂದು ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದಾರೆ. ಶೀಘ್ರದಲ್ಲಿ ಕಾರ್ಯಕ್ರಮ ಏರ್ಪಡಿಸಿ ಗೌರವಿಸಲಾಗುವುದು ಎಂದು ರಾಜಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.