ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ!

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ಅವ್ಯವಸ್ಥೆ ಬೆಳಕಿಗೆ ಬಂದಿದ್ದು, ಭಾರತದ ಅಥ್ಲೀಟ್‌ಗಳು ತಮಗೆ ಆಹಾರದ ಕೊರತೆ ಉಂಟಾಗಿದ್ದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Paris Olympics 2024 Indian Athletes Complain Of Food Shortage In Games Village Says report kvn

ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ಗೆ ತೆರಳಿರುವ ಭಾರತದ ಅಥ್ಲೀಟ್‌ಗಳು ತಮಗೆ ಆಹಾರದ ಕೊರತೆ ಉಂಟಾಗಿದ್ದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಬೃಹತ್‌ ರೆಸ್ಟೋರೆಂಟ್‌ ನಿರ್ಮಿಸಲಾಗಿದೆ. ನೂರಾರು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಆದರೆ ತಾವು ಊಟಕ್ಕೆ ತೆರಳಿದಾಗ ಕೆಲವು ಭಾರತೀಯ ಖಾದ್ಯಗಳು ಖಾಲಿಯಾಗಿತ್ತು ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ತನಿಶಾ ಕ್ರಾಸ್ಟೊ ಹೇಳಿದ್ದಾರೆ. 

ಬಾಕ್ಸರ್‌ ಅಮಿತ್ ಪಂಘಲ್‌, ತಮ್ಮ ಕೋಣೆ ಕಳೆದ ಬಾರಿ ಒಲಿಂಪಿಕ್ಸ್‌ ವೇಳೆ ನೀಡಿದ್ದ ಕೋಣೆಗಿಂತ ಸಣ್ಣದು ಎಂದು ದೂರಿದ್ದಾರೆ. ಅಲ್ಲದೇ ಆಹಾರ ಕೊರತೆ ಆಗಿದ್ದಕ್ಕೆ ತಮ್ಮ ತಂಡದವರಿಗೆ ಹೇಳಿ ಹೊರಗಿನಿಂದ ರೋಟಿ ದಾಲ್‌ ತರಿಸಿಕೊಂಡು ತಿಂದಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕಾಗಿ 5+ ಗಂಟೆ ನಿಂತೇ ಇದ್ದ ಅಥ್ಲೀಟ್ಸ್‌!

ಶುಕ್ರವಾರ ಪ್ಯಾರಿಸ್‌ ನಗರದ ಸೀನ್‌ ನದಿ ಮೇಲೆ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ ನೆರವೇರಿತು. ಆದರೆ ಇದಕ್ಕಾಗಿ ಅಥ್ಲೀಟ್‌ಗಳು ಬರೋಬ್ಬರಿ 5 ಗಂಟೆಗೂ ಹೆಚ್ಚು ಕಾಲ ನಿಂತೇ ಇರಬೇಕಾಯಿತು.

ಮಧ್ಯಾಹ್ನವೇ ಕ್ರೀಡಾ ಗ್ರಾಮದಿಂದ ಹೊರಟಿದ್ದ ಅಥ್ಲೀಟ್‌ಗಳು ಸಮಾರಂಭದ ವೇಳೆ 45 ನಿಮಿಷಗಳ ಕಾಲ ಬೋಟ್‌ನಲ್ಲಿದ್ದರು. ಉಳಿದ ಸಮಯ ಅವರು ನಿಂತೇ ಇರಬೇಕಾಯಿತು. ಇನ್ನು, ಅಥ್ಲೀಟ್‌ಗಳು ಆಯಾಸಗೊಳ್ಳದಿರಲು ಆಯೋಜಕರು ಹಣ್ಣು, ಬಿಸ್ಕತ್‌, ಡ್ರೈ ಫ್ರೂಟ್ಸ್‌, ಪೌಷ್ಟಿಕಾಂಶವಿರುವ ಉತ್ಪನ್ನಗಳನ್ನು ನೀಡಿದರು. ಜೊತೆಗೆ ಬೋಟ್‌ ಸಂಚಾರದ ಹಿನ್ನೆಲೆಯಲ್ಲಿ ಲೈಫ್‌ ಜಾಕೆಟ್‌ಗಳನ್ನೂ ನೀಡಲಾಗಿತ್ತು.

ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತಕ್ಕೆ ಇಂದೇ ಸಿಗುತ್ತಾ ಮೊದಲ ಪದಕ?

ಪ್ಯಾರಿಸ್‌ ಒಲಿಂಪಿಕ್ಸ್‌: ಭಾರತದ ಅಥ್ಲೀಟ್ಸ್‌ಗೆ ಮೋದಿ ಶುಭ ಹಾರೈಕೆ

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ಈ ಬಗ್ಗೆ ಶುಕ್ರವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಭಾರತದ ಎಲ್ಲಾ ಅಥ್ಲೀಟ್ಸ್‌ಗೆ ಶುಭವಾಗಲಿ. ಎಲ್ಲಾ ಕ್ರೀಡಾಪಟುಗಳು ಭಾರತದ ಹೆಮ್ಮೆ. ತಮ್ಮ ಅಸಾಧಾರಣ ಪ್ರದರ್ಶನ, ಕ್ರೀಡಾ ಮನೋಭಾವದ ಮೂಲಕ ಅವರೆಲ್ಲರೂ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ’ ಎಂದು ಹಾರೈಸಿದ್ದಾರೆ.

ಬಾಕ್ಸಿಂಗ್‌: ಭಾರತದ 32 ವರ್ಷದ ಅಶೋಕ್‌ ರೆಫ್ರಿ!

ನವದೆಹಲಿ: ಭಾರತದ ಮಾಜಿ ಅಂತಾರಾಷ್ಟ್ರೀಯ ಬಾಕ್ಸರ್‌ ಕಬಿಲನ್‌ ಸಾಯಿ ಅಶೋಕ್‌, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ ರೆಫ್ರಿ ಜಡ್ಜ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. 32 ವರ್ಷ ಅಶೋಕ್‌, ಈ ಒಲಿಂಪಿಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿರುವ ಭಾರತದ ಅತಿಕಿರಿಯ ರೆಫ್ರಿ ಎನ್ನುವುದು ವಿಶೇಷ. 1904ರಿಂದ ಈ ವರೆಗೂ ಒಲಿಂಪಿಕ್ಸ್‌ನಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಿದ ಭಾರತದ ಕೇವಲ 4ನೇ ವ್ಯಕ್ತಿ ಎನ್ನುವ ಹಿರಿಮೆಗೆ ಅಶೋಕ್‌ ಪಾತ್ರರಾಗಲಿದ್ದಾರೆ. ಇದಕ್ಕೂ ಮುನ್ನ ಭಾರತೀಯರೊಬ್ಬರಿಗೆ ಒಲಿಂಪಿಕ್ಸ್‌ನಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ವೈಭವದ ಚಾಲನೆ! ಸೀನ್‌ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಿದ ಫ್ರಾನ್ಸ್‌

ಒಬ್ಬ ಆಟಗಾರನಾಗಿ ಹಾಗೂ ಅಧಿಕಾರಿಯಾಗಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಂಡ ಭಾರತದ ಮೊದಲಿಗ ಎನ್ನುವ ದಾಖಲೆಯೂ ಅಶೋಕ್‌ ಹೆಸರಿನಲ್ಲಿದೆ. ಸಾಯಿ ಅಶೋಕ್‌ ಪುಣೆಯ ಆರ್ಮಿ ಸ್ಪೋರ್ಟ್ಸ್‌ ಸಂಸ್ಥೆಯಲ್ಲಿ ಆಡಳಿತಗಾರಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಮೊದಲ ಡೋಪ್‌ ಪತ್ತೆ: ಇರಾಕ್‌ನ ಜುಡೋ ಸ್ಪರ್ಧಿ ಸಸ್ಪೆಂಡ್‌

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆಯಾಗಿದೆ. ನಿಷೇಧಿತ ಪದಾರ್ಥ ಸೇವಿಸಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಇರಾಕ್‌ನ ಜುಡೋ ಸ್ಪರ್ಧಿ ಸಜ್ಜಾದ್‌ ಸೆಹೆನ್‌ರನ್ನು ಅಂತಾರಾಷ್ಟ್ರೀಯ ಟೆಸ್ಟಿಂಗ್‌ ಏಜೆನ್ಸಿ(ಐಟಿಎ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಜುಡೋ ಸ್ಪರ್ಧೆಯ 81 ಕೆ.ಜಿ. ವಿಭಾಗದಲ್ಲಿ ಸಜ್ಜಾದ್‌ ಸ್ಪರ್ಧಿಸಬೇಕಿತ್ತು. ಆದರೆ ಮಂಗಳವಾರ ಅವರಿಂದ ಸಂಗ್ರಹಿಸಲಾದ ಮೂತ್ರದ ಮಾದರಿಯಲ್ಲಿ ನಿಷೇಧಿತ ಅನಾಬೊಲಿಕ್‌ ಸ್ಟೆರಾಯ್ಡ್‌ ಪತ್ತೆಯಾದ ಕಾರಣ ಅಮಾನತುಗೊಂಡಿದ್ದಾರೆ. ಅವರ ವಿರುದ್ಧ ತನಿಖೆ ಕೈಗೊಳ್ಳಲಾಗಿದ್ದು, ಸದ್ಯದ ಮಟ್ಟಿಗೆ ತರಬೇತಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ತಡೆ ಹಿಡಿಯಲಾಗಿದೆ.

ಡ್ರೋನ್‌ ವಿವಾದ: ಕೆನಡಾ ಫುಟ್ಬಾಲ್‌ ಕೋಚ್‌ ವಜಾ

ಪ್ಯಾರಿಸ್‌: ಒಲಿಂಪಿಕ್ಸ್‌ಗಾಗಿ ನ್ಯೂಜಿಲೆಂಡ್‌ ಮಹಿಳಾ ತಂಡ ಅಭ್ಯಾಸ ನಡೆಸುತ್ತಿದ್ದಾಗ ಡ್ರೋನ್‌ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಮಹಿಳಾ ಫುಟ್ಬಾಲ್‌ ತಂಡದ ಕೋಚ್‌ ವಜಾಗೊಂಡಿದ್ದಾರೆ. ಕೋಚ್‌ ಬೆವ್‌ ಪ್ರೀಸ್ಟ್‌ಮನ್‌ರನ್ನು ಹುದ್ದೆಯಿಂದ ಕೆಳಗಿಳಿಸಿದ್ದಾಗಿ ಕೆನಡಾ ಒಲಿಂಪಿಕ್ಸ್‌ ಸಮಿತಿ ತಿಳಿಸಿದೆ. ಈಗಾಗಲೇ ತಂಡದ ಸಹಾಯಕ ಕೋಚ್‌ ಜ್ಯಾಸ್ಮಿನ್‌ ಮಂಡೆರ್‌, ವಿಶ್ಲೇಷಕ ಜೋಸೆಫ್‌ ಲಾಂಬಾರ್ಡಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ನ್ಯೂಜಿಲೆಂಡ್‌ ಆಟಗಾರ್ತಿಯರು ತಮ್ಮ ಅಭ್ಯಾಸದ ವೇಳೆ ಡ್ರೋನ್‌ ಹಾರಾಡುತ್ತಿರುವುದು ಕಂಡುಬಂದಾಗ ಆಯೋಜಕರಿಗೆ ದೂರು ನೀಡಿದ್ದರು. ಅಧಿಕಾರಿಗಳು ತಕ್ಷಣ ಡ್ರೋನ್‌ ಹಾಗೂ ಕೆನಡಾ ತಂಡದ ಸಿಬ್ಬಂದಿಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು.
 

Latest Videos
Follow Us:
Download App:
  • android
  • ios