ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಭಾರತದ ಶೂಟರ್‌ಗಳು ಪದಕ ಬೇಟೆಯಾಡುವ ವಿಶ್ವಾಸದಲ್ಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪ್ಯಾರಿಸ್‌: ಸಾರ್ವಕಾಲಿಕ ಶ್ರೇಷ್ಠ ಪದಕ ಗಳಿಕೆಯ ಕನಸಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಪ್ಯಾರಿಸ್‌ಗೆ ತೆರಳಿರುವ ಭಾರತ, ಕ್ರೀಡಾಕೂಟದ 2ನೇ ದಿನವೇ ಪದಕ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ. ಭಾರತ ಹಲವು ಕ್ರೀಡೆಗಳಲ್ಲಿ ಶನಿವಾರ ಅಭಿಯಾನ ಆರಂಭಿಸಲಿದೆ. ಭಾರತಕ್ಕೆ ಹೆಚ್ಚಿನ ಭರವಸೆ ಇರುವ ಶೂಟಿಂಗ್‌ನಲ್ಲಿ ಪದಕ ಸ್ಪರ್ಧೆ ಶನಿವಾರವೇ ನಡೆಯಲಿದ್ದು, ಕ್ರೀಡಾಕೂಟದಲ್ಲಿ ಪದಕ ಖಾತೆ ತೆರೆಯುವ ಕಾತರದಲ್ಲಿದೆ.

ಶೂಟಿಂಗ್‌ನ 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಭಾರತದ 2 ತಂಡಗಳು ಶನಿವಾರ ಸ್ಪರ್ಧಿಸಲಿವೆ. ರಮಿತಾ ಜಿಂದಾಲ್‌-ಅರ್ಜುನ್‌ ಬಬುತಾ ಹಾಗೂ ಇಳವಿನಿಲ್‌ ವಳರಿವನ್‌-ಸಂದೀಪ್‌ ಸಿಂಗ್‌ ಜೋಡಿಗಳು ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿವೆ. ಒಟ್ಟಾರೆ 28 ತಂಡಗಳು ಈ ಸ್ಪರ್ಧೆಯಲ್ಲಿದ್ದು, ಅಗ್ರ-4 ಸ್ಥಾನ ಪಡೆದರೆ ಪದಕ ಸುತ್ತಿಗೆ ಅರ್ಹತೆ ಸಿಗಲಿದೆ. ಪದಕ ಸುತ್ತಿನ ಪಂದ್ಯಗಳೂ ಶನಿವಾರವೇ ನಡೆಯಲಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ವೈಭವದ ಚಾಲನೆ! ಸೀನ್‌ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಿದ ಫ್ರಾನ್ಸ್‌

ಪಿಸ್ತೂಲ್‌ ಸ್ಪರ್ಧೆ: ಇನ್ನು, 10 ಮೀ. ಏರ್‌ ಪಿಸ್ತೂಲ್‌ ಪುರುಷರ ವಿಭಾಗದಲ್ಲಿ ಸರಬ್ಜೋತ್‌ ಸಿಂಗ್‌, ಅರ್ಜುನ್‌ ಸಿಂಗ್‌ ಚೀಮಾ ಸ್ಪರ್ಧಿಸಲಿದ್ದಾರೆ. ಒಟ್ಟು 33 ಸ್ಪರ್ಧಿಗಳು ಕಣದಲ್ಲಿದ್ದು, ಅಗ್ರ-8 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. 10 ಮೀ. ಏರ್‌ ಪಿಸ್ತೂಲ್‌ ಮಹಿಳಾ ವಿಭಾಗದ ಅರ್ಹತಾ ಸುತ್ತಿನಲ್ಲಿ ಮನು ಬಾಕರ್‌ ಹಾಗೂ ರಿಧಂ ಸಾಂಗ್ವಾನ್‌ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಒಟ್ಟು 45 ಮಂದಿ ಇದ್ದು, ಅಗ್ರ-8 ಸ್ಥಾನ ಪಡೆದರೆ ಫೈನಲ್‌ ಪ್ರವೇಶಿಸಲಿದ್ದಾರೆ.

ಭಾರತದ 21 ಶೂಟರ್‌ಗಳು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕಣದಲ್ಲಿದ್ದು, ಇದು ಭಾರತದ ಸಾರ್ವಕಾಲಿಕ ಗರಿಷ್ಠ. ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು 7 ಚಿನ್ನ, 9 ಬೆಳ್ಳಿ ಸೇರಿ 22 ಪದಕ ಗೆದ್ದಿದ್ದರು. ಹೀಗಾಗಿ ಒಲಿಂಪಿಕ್ಸ್‌ನಲ್ಲೂ ಕೆಲ ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಟಿಟಿ, ಬಾಕ್ಸಿಂಗ್‌ನಲ್ಲೂ ಶುಭಾರಂಭದ ಗುರಿ

ಭಾರತದ ಸ್ಪರ್ಧಿಗಳು ಶನಿವಾರ ಟೇಬಲ್‌ ಟೆನಿಸ್‌, ಬಾಕ್ಸಿಂಗ್‌, ರೋಯಿಂಗ್‌ನಲ್ಲೂ ಅಭಿಯಾನ ಆರಂಭಿಸಲಿದ್ದಾರೆ. ಟೇಬಲ್‌ ಟೆನಿಸ್‌ನ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಹರ್ಮೀತ್‌ ದೇಸಾಯಿ ಜೋರ್ಡನ್‌ನ ಝೈದ್‌ ಅಬು ಯಮನ್‌ ವಿರುದ್ಧ ಕಾದಾಡಲಿದ್ದಾರೆ. ಮಹಿಳೆಯರ ಬಾಕ್ಸಿಂಗ್‌ನ 54 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಪ್ರೀತಿ ಅವರು ವಿಯೆಟ್ನಾಂನ ಥಿಮ್‌ ಕಿಮ್‌ ಆ್ಯನ್‌ವೊ ವಿರುದ್ಧ ಸೆಣಸಲಿದ್ದಾರೆ. ರೋಯಿಂಗ್‌ನ ಸ್ಕಲ್ಸ್‌ ವಿಭಾಗದ ಹೀಟ್ಸ್‌ನಲ್ಲಿ ಬಾಲ್‌ರಾಜ್‌ ಪನ್ವಾರ್‌ ಸ್ಪರ್ಧಿಸಲಿದ್ದು, ಅಗ್ರ-3 ಸ್ಥಾನ ಪಡೆದರೆ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬಹುದಾಗಿದೆ.

ಭಾರತದ ಟಾಪ್‌-10 ಪದಕ ಭರವಸೆಗಳು! ಇತಿಹಾಸ ಬರೆಯಲು ಭಾರತೀಯರು ರೆಡಿ

ಪ್ಯಾರಿಸ್‌ ಒಲಿಂಪಿಕ್ಸ್‌: 97 ಲಕ್ಷ ಟಿಕೆಟ್‌ ಸೇಲ್‌!

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನವೇ ಬರೋಬ್ಬರಿ 97 ಲಕ್ಷ ಟಿಕೆಟ್‌ ಮಾರಾಟ ಮಾಡಿದ್ದಾಗಿ ಆಯೋಜಕರು ತಿಳಿಸಿದ್ದಾರೆ. ಇದು ಒಲಿಂಪಿಕ್ಸ್‌ ಇತಿಹಾಸದಲ್ಲೇ ಗರಿಷ್ಠ. 1998ರ ಅಟ್ಲಾಂಟಾ ಒಲಿಂಪಿಕ್ಸ್‌ ವೇಳೆ 83 ಲಕ್ಷ ಟಿಕೆಟ್‌ಗಳು ಮಾರಾಟವಾಗಿತ್ತು. ಇನ್ನು, ಈ ಬಾರಿ ಒಲಿಂಪಿಕ್ಸ್‌ನ ಕ್ರೀಡೆಗಳು ಇನ್ನಷ್ಟೇ ಆರಂಭವಾಗಬೇಕಿದ್ದು, ಟಿಕೆಟ್‌ ಮಾರಾಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಲಕ್ಷಾಂತರ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಿರುವುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಟಿಕೆಟ್‌ ಮಾರಾಟ ಆರಂಭಗೊಂಡಿತ್ತು. ಲಕ್ಷಾಂತರ ಉಚಿತ ಟಿಕೆಟ್‌ಗಳನ್ನು ಅಂಗವಿಕಲರು, ವಿಶ್ವದ ಪ್ರಮುಖ ಅಥ್ಲೀಟ್‌ಗಳು, ಪ್ಯಾರಿಸ್‌ನ ಸ್ಥಳೀಯ ಮಕ್ಕಳು, ಅಧಿಕಾರಿಗಳಿಗೆ ಮೀಸಲಿಟ್ಟಿದ್ದಾಗಿ ಕ್ರೀಡಾಕೂಟದ ಅಧಿಕೃತರು ತಿಳಿಸಿದ್ದಾರೆ.